ಕೇರಳದಲ್ಲಿ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ನಡುವೆ ಸಿಪಿಐಎಂ ನಾಯಕರುಗಳಲ್ಲಿ ಅಸಮಾಧಾನ ಕಂಡುಬಂದಿದೆ. ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಜಿ. ಸುಧಾಕರನ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆ ಅಂಬಲಪ್ಪುಳದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಎರಡು ಬಾರಿ ಸಚಿವರಾಗಿ ಮತ್ತು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಧಾಕರನ್, ರಾಜ್ಯ ಕಾರ್ಯದರ್ಶಿ ಎಂ. ವಿ. ಗೋವಿಂದನ್ ಸೇರಿದಂತೆ ಪಕ್ಷದ ನಾಯಕರು ತಮ್ಮನ್ನು ‘ನಿರ್ಲಕ್ಷ್ಯ’ ಮಾಡುತ್ತಿದ್ದಾರೆ ಎಂದು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿರುವ ಸುಧಾಕರನ್, “ಪಕ್ಷದಲ್ಲಿ ಯಾರಿಗೂ ಅನಾನುಕೂಲವಾಗಲು ಬಯಸುವುದಿಲ್ಲ. ಆದ್ದರಿಂದ ಪಕ್ಷವನ್ನು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ” ಎಂದು ಗುರುವಾರ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿರಿಯ ನಾಯಕರ ನಿರ್ಲಕ್ಷ್ಯ; ಕೇರಳ ಚುನಾವಣೆಗೂ ಮುನ್ನ ಬಂಡಾಯ ಸಿಪಿಐಎಂಗೆ ದುಬಾರಿಯಾಗುವುದೇ?
ಮಾಜಿ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಅವರಂತಹ ಅನೇಕ ಜನಪ್ರಿಯ ನಾಯಕರನ್ನು ಬದಿಗಿಡುವ ಪ್ರಯತ್ನಗಳ ಬಗ್ಗೆ ಸಿಪಿಐಎಂನಲ್ಲಿ ಈಗಾಗಲೇ ಅಸಮಾಧಾನ ಉಂಟಾಗಿದೆ. ಈ ಬೆಳವಣಿಗೆಗಳು ಚುನಾವಣೆ ವೇಳೆ ಸಿಪಿಐಎಂಗೆ ಭಾರೀ ಹೊಡೆತ ನೀಡುವ ಸಾಧ್ಯತೆಯಿದೆ. ಸುಧಾಕರನ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಬಹುದು ಎಂಬ ವದಂತಿಗಳೂ ಹರಿದಾಡುತ್ತಿದೆ. ಆದರೆ ಸುಧಾಕರನ್ ತಮಗೆ ಈವರೆಗೆ ಯಾರೂ ಬೆಂಬಲ ನೀಡಿಲ್ಲ ಮತ್ತು ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.
“ಪಕ್ಷದ ಅನೇಕ ಕಿರಿಯ ಸದಸ್ಯರು ನನ್ನ ಮೇಲೆ ವೈಯಕ್ತಿಕವಾಗಿ ದಾಳಿ ನಡೆಸಿದ್ದರೂ ಸಹ ಕಮ್ಯುನಿಸ್ಟ್ ಪಕ್ಷ ಅಥವಾ ಯಾರನ್ನೂ ವೈಯಕ್ತಿಕವಾಗಿ ಟೀಕಿಸಲು ಬಯಸುವುದಿಲ್ಲ” ಎಂದೂ ಹೇಳಿದ್ದಾರೆ.
“ಹಿರಿಯ ಸದಸ್ಯರೊಬ್ಬರು ಇಂತಹ ನಿರ್ಧಾರ ತೆಗೆದುಕೊಂಡಿರುವುದು ದುರದೃಷ್ಟಕರ” ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ಹೇಳಿದ್ದಾರೆ. “ನಾನು ಸೇರಿದಂತೆ ಅನೇಕ ಪಕ್ಷದ ನಾಯಕರು ಸುಧಾಕರನ್ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ” ಎಂದಿದ್ದಾರೆ.
ಸಿಪಿಐಎಂ ನಾಯಕ ಜಿ ಸುಧಾಕರನ್ ಯಾರು?
79 ವರ್ಷ ವಯಸ್ಸಿನ ಸುಧಾಕರನ್ 1946ರ ನವೆಂಬರ್ 1ರಂದು ಕೇರಳದ ಆಲಪ್ಪುಳ ಜಿಲ್ಲೆಯ ಮಾವೇಲಿಕ್ಕರದ ವೇದರಾಪ್ಲವು ಎಂಬಲ್ಲಿ ಜನಿಸಿದ್ದು, ಎಂ.ಎ. (M.A.) ಮತ್ತು ಎಲ್.ಎಲ್.ಬಿ. (LL.B) ಪದವಿಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ರಾಜಕೀಯದೆಡೆ ಆಕರ್ಷಿತರಾದ ಸುಧಾಕರನ್ ಅವರು, 1967ರಲ್ಲಿ ಸಿಪಿಐಎಂ ಪಕ್ಷವನ್ನು ಸೇರಿದರು. ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಸಿಪಿಐಎಂನಲ್ಲಿ ಬಿಕ್ಕಟ್ಟು; ಮಾಜಿ ಶಾಸಕ ಪಿಕೆ ಸಸಿ ಉಚ್ಚಾಟನೆ
ಸುಧಾಕರನ್, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಕಟ್ಟಾ ಬೆಂಬಲಿಗರು. 1977ರಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಕಾರ್ಯಕರ್ತರನ್ನು ಒಳಗೊಂಡ ರಾಜಕೀಯ ಹಿಂಸಾಚಾರದಲ್ಲಿ ಸುಧಾಕರನ್ ಅವರ ಸಹೋದರ ಭುವನೇಶ್ವರನ್ ಹತ್ಯೆಗೀಡಾಗಿದ್ದಾರೆ. ಸುಧಾಕರನ್ ಸುಮಾರು 63 ವರ್ಷಗಳ ಕಾಲ ಕಮ್ಯುನಿಸ್ಟ್ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ.
1996ರಲ್ಲಿ ಮೊದಲು ಆಲಪ್ಪುಳದ ಕಾಯಂಕುಲಂನಿಂದ ಶಾಸಕರಾಗಿ ಆಯ್ಕೆಯಾಗಿದ್ದು, 2006ರಲ್ಲಿ 11,929 ಮತಗಳ ಅಂತರದಿಂದ ಗೆದ್ದಿದ್ದರೆ, 2011ರಲ್ಲಿ ಅವರ ಅಂತರ 16,580 ಕ್ಕೆ ಏರಿತು. ಅದಾದ ಬಳಿಕ 2016ರಲ್ಲಿ ಅಂತರ 22,621ಕ್ಕೆ ಏರಿದೆ. 2021ರ ಚುನಾವಣೆಯಲ್ಲಿ ಅಂಬಲಪ್ಪುಳದಲ್ಲಿ ಸಿಪಿಐಎಂ ಅಭ್ಯರ್ಥಿ ಎಚ್. ಸಲಾಂ ಅವರ ಗೆಲುವಿನ ಅಂತರ 11,125ಕ್ಕೆ ಇಳಿದಿದೆ.





