ಭಾರತದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಈ ವರ್ಷ ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಯಿಂದ ಹೊರಗುಳಿದಿದ್ದಾರೆ. ಅವರು ಟೂರ್ನಿಗಳು ಹಾಗೂ ವಿವಿಧ ಪಂದ್ಯಾವಳಿಗಳಲ್ಲಿ ನಿರತನಾಗಿರುವುದರಿಂದ ಪರೀಕ್ಷೆಗೆ ಹಾಜರಾಗದೇ ಇರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ, ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ವೈಭವ್ ಸೂರ್ಯವಂಶಿ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅವರು ಬಿಹಾರದ ತಾಜ್‌ಪುರದ ನಿವಾಸಿಯಾಗಿದ್ದು, ತಾಜ್‌ಪುರದ ಮಾಡೆಸ್ಟಿ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಫೆಬ್ರವರಿ 17 ಮತ್ತು ಮಾರ್ಚ್ 11ರವರೆಗೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ನಡೆಯಲಿದೆ. ಆದರೆ, ನಿರಂತರ ಕ್ರಿಕೆಟ್ ಚಟುವಟಿಕೆಗಳಿಂದಾಗಿ, ಅವರು ಮನೆ ಮತ್ತು ಶಾಲೆಯಿಂದ ದೂರವಿದ್ದರು. ಪರಿಣಾಮ, ಪರೀಕ್ಷೆಗೆ ಸಿದ್ದತೆ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಈ ವರ್ಷ ಪರೀಕ್ಷೆಯಿಂದ ಹೊರಗಿರಲು ಅವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಡೆಸ್ಟಿ ಸ್ಕೂಲ್ ತಾಜ್‌ಪುರದ ನಿರ್ದೇಶಕ ಆದರ್ಶ್ ಕುಮಾರ್ ಪಿಂಟು ಹೇಳುವಂತೆ; ವೈಭವ್ ಅವರ ಪರೀಕ್ಷಾ ಫಾರ್ಮ್ಅನ್ನು ಭರ್ತಿ ಮಾಡಲಾಗಿದೆ. ಪ್ರವೇಶ ಪತ್ರವನ್ನು (ಹಾಲ್ ಟಿಕೆಟ್) ಸಹ ನೀಡಲಾಗಿದೆ. ಅವರು ಪೊದ್ದಾರ್ ಇಂಟರ್ನ್ಯಾಷನಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕು. ಆದರೆ, ವೈಭವ್ ಪರೀಕ್ಷೆ ಬರೆಯದೇ ಇರಲು ನಿರ್ಧರಿಸಿದ್ದಾರೆ ಎಂದು ಅವರ ತಂದೆ ಸಂಜೀವ್ ಸೂರ್ಯವಂಶಿ ತಿಳಿಸಿದ್ದಾರೆ.
U19 ವಿಶ್ವಕಪ್‌ನಲ್ಲಿ, ವೈಭವ್ ಏಳು ಪಂದ್ಯಗಳಲ್ಲಿ 62.71 ಸರಾಸರಿಯಲ್ಲಿ 439 ರನ್ ಗಳಿಸುವ ಮೂಲಕ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಅವರು ಒಂದು ಶತಕ, ಮೂರು ಅರ್ಧಶತಕಗಳು ಹಾಗೂ 175ರ ಅತ್ಯುತ್ತಮ ಸ್ಕೋರ್ ಹೊಂದಿದ್ದರು. ಅಲ್ಲದೆ, 2026ರ ಐಪಿಎಲ್‌ನಲ್ಲಿ ಅವರು ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ.





