ಮನೆ ಕೆಲಸಕ್ಕೆ ಬರುತ್ತಿದ್ದ 10 ವರ್ಷದ ಬಾಲಕಿ ಮೇಲೆ ದೈಹಿಕ ದೌರ್ಜನ್ಯ ನಡೆಸಿ, ಗಂಭೀರವಾಗಿ ಹಲ್ಲೆ ನಡೆಸಿದ್ದ ಆರೋಪದಲ್ಲಿ ಸಿಆರ್‌ಪಿಎಫ್ ಕಾನ್ಸ್‌ಸ್ಟೇಬಲ್ ಮತ್ತು ಆತನ ಪತ್ನಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನೋಯ್ಡಾದಲ್ಲಿ ನಡೆದಿದೆ.
ಬಂಧಿತ ಕಾನ್‌ಸ್ಟೇಬಲ್‌ನನ್ನು ಜಿ.ಡಿ ತಾರೀಕ್ ಅನ್ವರ್ ಮತ್ತು ಆತನ ಪತ್ನಿ ರಿಂಪಾ ಖಾತುನ್ ಎಂದು ಹೆಸರಿಸಲಾಗಿದೆ. ಈ ಆರೋಪಿ ದಂಪತಿಗಳು ನಡೆಸಿದ್ದ ಅಮಾನುಷ ಹಲ್ಲೆಯಿಂದ ಸಂತ್ರಸ್ತ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ಆಕೆಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಸಂತ್ರಸ್ತೆಯು ರಿಂಪಾ ಖಾತುನ್ ಅವರ ಸೋದರ ಸೊರೆಯೇ ಆಗಿದ್ದಾರೆ. ಆಕೆಯನ್ನು ಕರೆತಂದಿದ್ದ ದಂಪತಿ, ತಮ್ಮ ನಿವಾಸದಲ್ಲಿ ಮನೆಕೆಲಸಕ್ಕೆ ನಿಯೋಜಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಂಪತಿ ವಿರುದ್ಧ ನೋಯ್ಡಾದ ಇಕೊಟೆಕ್-3 ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಎಫ್‌ನಲ್ಲಿದ್ದ ಓರ್ವ ಅಧಿಕಾರಿ ದೂರು ದಾಖಲಿಸಿದ್ದಾರೆ.ಸಂತ್ರಸ್ತ ಬಾಲಕಿಗೆ ದಿನನಿತ್ಯ ಹತ್ತಾರು ಕೆಲಸಗಳನ್ನು ನೀಡಲಾಗುತ್ತಿತ್ತು. ಅಲ್ಲದೆ, ಆಕೆಗೆ ಪದೇ-ಪದೇ ಅಮಾನವೀಯವಾಗಿ ಥಳಿಸಲಾಗುತ್ತಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.
ಜನವರಿ 14ರಂದು ದಂಪತಿಗಳು ಬಾಲಕಿಯ ಮೇಲೆ ತೀವ್ರ ಹಲ್ಲೆ ನಡೆಸಿದ್ದರಿಂದ, ಆಕೆ ಪ್ರಜ್ಞೆ ತಪ್ಪಿದ್ದಾಳೆ. ಆಕೆಯನ್ನು ಆರೋಪಿ ತಾರೀಕ್ ಸಿಆರ್‌ಪಿಎಫ್ ಆಸ್ಪತ್ರೆಗೆ ದಾಖಲಿಸದೆ, ಹೊರಗಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿ ಶೌಚಾಲಯದಲ್ಲಿ ಜಾರಿ ಬಿದ್ದಳೆಂದು ಕತೆ ಕಟ್ಟಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.




