ಶಾಲೆಯ ಶಿಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಶಿಕ್ಷಕರು ತೆರೆದ ಪಿಕಪ್ ಟ್ರಕ್ ಮತ್ತು ಲಾರಿಯಲ್ಲಿ ಕರೆದೊಯ್ದಿರುವ ಆತಂಕಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆ ಬಹಿರಂಗಗೊಂಡ ಬೆನ್ನಲ್ಲೇ ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತು ಮಾಡಲಾಗಿದೆ.
ಜಿಲ್ಲೆಯ ಮುಲ್ಕಿ ತಾಲೂಕಿನ ಬಳಂಜೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರು ವಿದ್ಯಾರ್ಥಿಗಳನ್ನು ಜೇನು ಕೃಷಿ ಅಧ್ಯಯನಕ್ಕಾಗಿ ಸಮೀಪದ ಕೆಲ ಜಮೀನುಗಳಿಗೆ ಕರೆದೊಯ್ದಿದ್ದಾರೆ. ಆದರೆ, ವಿದ್ಯಾರ್ಥಿಗಳನ್ನು ಸುರಕ್ಷತೆಯುಳ್ಳ ಬಸ್‌ಗಳಲ್ಲಿ ಕರೆದೊಯ್ಯುವ ಬದಲು ಪಿಕಪ್ ವಾಹನ ಮತ್ತು ಲಾರಿಯಲ್ಲಿ ಕರೆದೊಯ್ಯಲಾಗಿದೆ. ಇದು ನಿಗದಿತ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರು ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ನಿರ್ಲಕ್ಷಿಸಿದ್ದನ್ನು ಪೋಷಕರು ಖಂಡಿಸಿದ್ದಾರೆ. ಶಾಲಾ ಅಧಿಕಾರಿಗಳು ಈ ರೀತಿ ಅಸುರಕ್ಷಿತವಾಗಿ ಮಕ್ಕಳನ್ನು ಪ್ರಯಾಣಿಸಲು ಹೇಗೆ ಅನುಮತಿಸಿದರು ಎಂದು ಪ್ರಶ್ನಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ, ಕರ್ನಾಟಕ ಶಿಕ್ಷಣ ಇಲಾಖೆಯು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ (ಬಿಇಒ) ವಿವರವಾದ ವರದಿ ಕೇಳಿದೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಪ್ರಭಾರ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ. ಅಂತಿಮ ವರದಿ ಸಲ್ಲಿಕೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಹೇಳಿದೆ.





