ಸುಮಾರು 35 ವರ್ಷದ ದಲಿತ ವ್ಯಕ್ತಿಯನ್ನು ನೆರೆಹೊರೆಯವರು ಥಳಿಸಿ ಕೊಂದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬಳಿಕ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಗಳಲ್ಲಿ ಒಬ್ಬನ ಮನೆಗೆ ಬೆಂಕಿ ಹಚ್ಚಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ದಬೋಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ರುದ್ರ ಪ್ರತಾಪ್ ಸಿಂಗ್ ಜಾತವ್ ಎಂಬ ದಲಿತ ವ್ಯಕ್ತಿಯನ್ನು ನೆರೆಹೊರೆಯ ಕೌರವ ಕುಟುಂಬದ ಐವರು ಕೋಲುಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ದಲಿತ ಯುವಕನ ಕೊಲೆ
ಇನ್ನು ರುದ್ರ ಮೇಲೆ ದಾಳಿ ನಡೆಸುತ್ತಿದ್ದಾಗ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ವೃದ್ಧರೊಬ್ಬರು ಕೂಡ ಗಾಯಗೊಂಡಿದ್ದಾರೆ. ಜಾತವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಿತಿ ಗಂಭೀರವಾಗಿದ್ದ ಕಾರಣ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ದಬೋಹ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಜೇಶ್ ಶರ್ಮಾ ಹೇಳಿದ್ದಾರೆ.
ಜಾತವ್ ಅವರ ಸಾವಿನ ಸುದ್ದಿ ತಿಳಿದಾಗ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಅವರ ಸಂಬಂಧಿಕರು ಮತ್ತು ಇತರ ಗ್ರಾಮಸ್ಥರು ಆರೋಪಿಗಳಲ್ಲಿ ಒಬ್ಬರಿಗೆ ಸೇರಿದ ಮನೆಯನ್ನು ಧ್ವಂಸ ಮಾಡಿ ಹೊರಗೆ ನಿಲ್ಲಿಸಿದ್ದ ಕಾರು ಮತ್ತು ಮೋಟಾರ್‌ಸೈಕಲ್‌ಗೆ ಬೆಂಕಿ ಹಚ್ಚಿದ್ದಾರೆ. ಭಿಂದ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಸಿತ್ ಯಾದವ್ ಮತ್ತು ಸಂಜೀವ್ ಪಾಠಕ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
“ಆರೋಪಿಗಳಾದ ರಣವೀರ್ ಕೌರವ್, ಆಶು ಕೌರವ್, ಪ್ರಹ್ಲಾದ್ ಕೌರವ್, ರಾಜೀವ್ ಕೌರವ್ ಮತ್ತು ಕುನ್ವರ್ ಸಿಂಗ್ ಕೌರವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಶಾಂತಿ ಕಾಪಾಡಲು ಗ್ರಾಮದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ” ಎಂದು ಎಸ್‌ಪಿ ಯಾದವ್ ತಿಳಿಸಿದ್ದಾರೆ.





