ಅಂಗನವಾಡಿ ಕೇಂದ್ರ ಸಹಾಯಕಿ ಮತ್ತು ಅಡುಗೆ ಸಿಬ್ಬಂದಿ ಹುದ್ದೆಗೆ ದಲಿತ ಮಹಿಳೆಯನ್ನು ನೇಮಿಸಿದ್ದಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದನ್ನೇ ನಿಲ್ಲಿಸಿದ್ದರು. ಗ್ರಾಮಸ್ಥರೊಂದಿಗಿನ ನಿರಂತರ ಸಭೆ, ಮಾತುಕತೆ, ಮನವೊಲಿಕೆಯ ಪರಿಣಾಮ, ಸೋಮವಾರ 15 ಮಕ್ಕಳು ಅಂಗನವಾಡಿಗೆ ಬಂದಿದ್ದಾರೆ. ದಲಿತ ಮಹಿಳೆ ಸರ್ಮಿಷ್ಠಾ ಸೇಥಿ ತಯಾರಿಸಿದ ಆಹಾರ ಸೇವಿಸಿದ್ದಾರೆ.
ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ರಾಜನಗರ ಬ್ಲಾಕ್‌ನ ನುವಗಾಂವ್ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯು ಭಾರತದಲ್ಲಿನ ಜಾತಿ ತಾರತಮ್ಯ ಬೇರುಗಳು ಇನ್ನೂ ಗಟ್ಟಿಯಾಗಿರುವುದನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.
2025ರ ನವೆಂಬರ್‌ನಲ್ಲಿ ಅಂಗನವಾಡಿ ಸಹಾಯಕಿ ಮತ್ತು ಅಡುಗೆ ಸಿಬ್ಬಂದಿ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ನವಗಾಂವ್ ಗ್ರಾಮದವರೇ ಆದ ಸರ್ಮಿಷ್ಠಾ ಸೇಥಿ, ಆ ಗ್ರಾಮದಲ್ಲಿ ಪದವಿ ಪಡೆದ ಮೊದಲಿಗರಲ್ಲಿ ಒಬ್ಬರು. ಅವರು ಅಂಗನವಾಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅವರನ್ನು ಅಂಗನವಾಡಿ ಸಹಾಯಕಿಯಾಗಿ ನವೆಂಬರ್ 21ರಂದು ನಿಯೋಜನೆ ಮಾಡಲಾಗಿತ್ತು. ಅವರನ್ನು ಹುದ್ದೆಗೆ ನೇಮಿಸಿದ್ದನ್ನು ಗ್ರಾಮದ ಪ್ರಬಲ ಜಾತಿಯ ಜಾತಿವಾದಿಗಳು ವಿರೋಧಿಸಿದ್ದರು. ಅಲ್ಲದೆ, ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸುವುದನ್ನೇ ನಿಲ್ಲಿಸಿದ್ದರು.
ನುವಗಾಂವ್ ಅಂಗನವಾಡಿಗೆ ಕಳೆದ ಆರು ತಿಂಗಳಲ್ಲಿ 42 ಮಕ್ಕಳು ದಾಖಲಿಸಿದ್ದರು. ಆದರೆ, ಯಾರೊಬ್ಬರೂ ಅಂಗನವಾಡಿಗೆ ಬರುತ್ತಿರಲಿಲ್ಲ. ಇನ್ನು, ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು ಕೂಡ ಪಡಿತರ ಪಡೆಯಲು ಬರುವುದನ್ನು ನಿಲ್ಲಿಸಿದ್ದರು. ಸರ್ಮಿಷ್ಠಾ ಸೇಥಿ ಅವರು ಪ್ರತಿದಿನ ಸೈಕಲ್ ಮೇಲೆ ಬಂದು ಕೇಂದ್ರವನ್ನು ಸ್ವಚ್ಛಗೊಳಿಸಿ, ಮ್ಯಾಟ್‌ಗಳನ್ನು ಹಾಕಿ, ಆಹಾರ ತಯಾರಿಸಿ ಕಾಯುತ್ತಿದ್ದರು. ಆದರೆ, ಯಾವೊಬ್ಬ ಮಗುವೂ ಬರುತ್ತಿರಲಿಲ್ಲ. ಬದಲಾಗಿ, ಅವರ ಪೋಷಕರು ಬಂದು ಪಡಿತರವನ್ನು ಪಡೆದುಕೊಂಡು ಹೋಗುತ್ತಿದ್ದರು. ಇದು ಸುಮಾರು 86 ದಿನಗಳ ಕಾಲ ಹೀಗೆಯೇ ಮುಂದುವರೆದಿತ್ತು.
“ಸರ್ಮಿಷ್ಠಾ ಅವರ ನೇಮಕವನ್ನು ಗ್ರಾಮದ ಅನೇಕರು ವಿರೋಧಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಅಂಗನವಾಡಿಗೆ 42 ಮಕ್ಕಳು ದಾಖಲಾಗಿದ್ದಾರೆ. ಆದರೆ, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ. ಬದಲಾಗಿ, ಮಕ್ಕಳಿಗೆ ನೀಡಲಾಗುವ ಆಹಾರವನ್ನು ನಮ್ಮಿಂದ ಪಡೆದುಕೊಂಡು ಮನೆಗೆ ಕೊಂಡೊಯ್ಯುತ್ತಿದ್ದಾರೆ” ಎಂದು ಅಂಗನವಾಡಿ ಕಾರ್ಯಕರ್ತೆ ಲಿಜರಾಣಿ ಪಾಂಡವ್ ತಿಳಿಸಿದ್ದಾರೆ.
ಅಂತಿಮವಾಗಿ, ಇತ್ತೀಚೆಗೆ, ನುವಗಾಂವ್ ಗ್ರಾಮದಲ್ಲಿ ಜಾತಿ ಆಧಾರಿತ ಧೋರಣೆಯು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಗ್ರಾಮಕ್ಕೆ ಬಂದ ಅಧಿಕಾರಿಗಳು ನಿರಂತರ ಸಭೆ/ಸಮಾಲೋಚನೆಗಳನ್ನು ನಡೆಸಿ ಪೋಷಕರ ಮನವೊಲಿಸಲು ಪ್ರಯತ್ನಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವಾರ, ಜಿಲ್ಲಾಧಿಕಾರಿ ರಘುರಾಮ್ ಅಯ್ಯರ್ ಅವರು ನೇತೃತ್ವದ ತಂಡವು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು.
ಈ ಲೇಖನ ಓದಿದ್ದೀರಾ?: ಆಂಧ್ರ ಚುನಾವಣೆಯಲ್ಲಿ ಮಹಾಮೋಸದ ಸಾಧ್ಯತೆ!- ಪರಕಾಲ ಪ್ರಭಾಕರ್ ಆಸ್ಫೋಟಕ ವಿಶ್ಲೇಷಣೆ
ಇದೀಗ, ಸೋಮವಾರ (ಫೆಬ್ರವರಿ 16) ಸುಮಾರು 15 ಮಕ್ಕಳು ಅಂಗನವಾಡಿಗೆ ಬಂದಿದ್ದು, ದಲಿತ ಸಹಾಯಕಿ ತಯಾರಿಸಿದ ಆಹಾರವನ್ನು ಸೇವಿಸಿದ್ದಾರೆ. ಮಕ್ಕಳು ಅಂಗನವಾಡಿಗೆ ಬಂದಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿರುವ ಸರ್ಮಿಷ್ಠಾ ಸೇಥಿ, “ಮಕ್ಕಳು ಮರಳಿ ಬಂದಿದ್ದಕ್ಕಾಗಿ ಮತ್ತು ಅವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡಿದ್ದಕ್ಕಾಗಿ ಸಂತೋಷವಾಗಿದೆ. ಮಕ್ಕಳಿಗೆ ಆರಂಭಿಕ ಶಿಕ್ಷಣ ಮತ್ತು ಪೌಷ್ಟಿಕಾಹಾರ ಅತ್ಯಗತ್ಯ” ಎಂದು ಹೇಳಿದ್ದಾರೆ.
ಇಂತಹ ಪ್ರಕರಣ ಇದೊಂದು ಮಾತ್ರವಲ್ಲ, ದೇಶಾದ್ಯಂತ ದಲಿತ ಶಿಕ್ಷಕರಿರುವ ಕಾರಣಕ್ಕಾಗಿ ಮಕ್ಕಳನ್ನು ಶಾಲೆಗೆ ಕಳಿಸದೇ ಇರುವುದು, ದಲಿತ ಅಡುಗೆಯವರು ಇರುವ ಕಾರಣಕ್ಕಾಗಿ ಮಕ್ಕಳಿಗೆ ಶಾಲೆಯಲ್ಲಿ ಊಟ ಮಾಡದಂತೆ ತಡೆಯುವ ಘಟನೆಗಳು ಆಗ್ಗಾಗ್ಗೆ ವರದಿಯಾಗುತ್ತಲೇ ಇವೆ. ಜಾತಿಗ್ರಸ್ತ ಸಮಾಜದಲ್ಲಿ ರಾಜಕಾರಣಿಗಳೂ ಮತಕ್ಕಾಗಿ ಜಾತಿ ಓಲೈಕೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ, ಸರ್ಮಿಷ್ಠಾ ಅವರಂತಹ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದು ಸ್ಪೂರ್ತಿದಾಯಕ.




