ದಶರಥ್ ಮಾಂಝಿ – ಎಂಬ ಹೆಸರು ಸಾಕಷ್ಟು ಪರಿಚಿತ. ಬಿಹಾರದ ‘ಬೆಟ್ಟದ ಜೀವ’ (ಮೌಂಟೇನ್ ಮ್ಯಾನ್) ಈತ. ‘ಒಂದು ಸುತ್ತಿಗೆ – ಒಂದು ಉಳಿ’ಯನ್ನು ಮಾತ್ರವೇ ಹಿಡಿದು ಏಕಾಂಗಿಯಾಗಿ 22 ವರ್ಷಗಳ ಕಾಲ ಬೆಟ್ಟವನ್ನೇ ಕಡಿದು ತನ್ನ ಹಳ್ಳಿಗೆ ದಾರಿ ಮಾಡಿದಾತ. 70 ಕಿ.ಮೀ.ದೂರವನ್ನು ಕೇವಲ ಒಂದು ಕಿ.ಮೀ.ಗೆ ಇಳಿಸಿದ ‘ಸೂಪರ್ ಮ್ಯಾನ್’
ಬಿಹಾರದ ಗಯಾ ಜಿಲ್ಲೆಯ ಗೇಹ್ಲೌರ್ ಗ್ರಾಮದ ದಶರಥ್ ಅವರ ಅನಾರೋಗ್ಯ ಪೀಡಿತ ಪತ್ನಿ 70 ದೂರದ ಪಟ್ಟಣಕ್ಕೆ ಸಕಾಲಕ್ಕೆ ತೆರಳಿ ಚಿಕಿತ್ಸೆ ಪಡೆಯಲಾಗದೆ ಸಾವನ್ನಪ್ಪಿದ್ದರು. ಅಂತಹ ದುರದೃಷ್ಟಕರ ಪರಿಸ್ಥಿತಿ ಮತ್ತೆ ಯಾರಿಗೂ ಎದುರಾಗಬಾರದೆಂದು ತಮ್ಮ ಗ್ರಾಮಕ್ಕೂ – ಪಟ್ಟಣಕ್ಕೂ ನಡುವೆ ಇದ್ದ ಬೃಹತ್ ಬೆಟ್ಟವನ್ನೇ ಮಾಂಝಿ ಕಡಿದುಹಾಕಿ, ರಸ್ತೆ ಮಾಡಿದರು. ಪರಿಣಾಮ, ಈಗ ಪಟ್ಟಣ ಮತ್ತು ಗೆಹ್ಲೌರ್ ಗ್ರಾಮದ ನಡುವಣ ದೂರ ಕೇವಲ 1 ಕಿ.ಮೀ. ಸುತ್ತಿ ಬಳಸಿ 70 ಕಿ.ಮೀ ಕ್ರಮಿಸಬೇಕಿಲ್ಲ.
ಅವರ ಸಾಹಸಗಾಥೆ ಸಾಕ್ಷ್ಯಚಿತ್ರವಾಗಿ, ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಿನಿಮಾ ರೂಪದಲ್ಲಿ ಜನಮನ ಮುಟ್ಟಿದೆ. ದೇಶವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ಇಂತಹ ಮಾಂಝಿ 2007ರಲ್ಲಿ ಸಾವನ್ನಪ್ಪಿದರು. ಆದರೆ, ಆಗಲೂ ಪುಟ್ಟದೊಂದು ಹುಲ್ಲಿನ ಗುಡಿಸಲೇ ಅವರ ಪಾಲಿನ ಮನೆಯಾಗಿತ್ತು. ಜಗದ್ವಿಖ್ಯಾತಿ ಅವರಿಗೆ ಪಕ್ಕಾ ಮನೆಯ ನೆರಳನ್ನು ಕೂಡ ದಯಪಾಲಿಸಲಿಲ್ಲ. ಬಿಹಾರದಲ್ಲಿ ‘ಮಹಾದಲಿತ’ ಎಂದು ಗುರುತಿಸಲಾದ ‘ಮುಸಾಹರ್’ ಜಾತಿಗೆ ಸೇರಿದವರು ಮಾಂಝಿ. ಎಲ್ಲ ಮುಸಾಹರರ ಪಾಡು ಕೂಡ ಇದೇ ಆಗಿದೆ.
ಆದಾಗ್ಯೂ, ಮಾಂಝಿ ಸಾವಿನ ಬಳಿಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗೆಹ್ಲೌರ್ ಗ್ರಾಮದಲ್ಲಿ ಮಾಂಝಿ ಕುಟುಂಬಸ್ಥರನ್ನು ಭೇಟಿಯಾಗಿದ್ದರು. ಅಬ್ಬರ-ಪ್ರಚಾರವಿಲ್ಲದೆ, ‘ಎಡಗೈಲಿ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು’ ಎಂಬಂತೆ ಮಾಂಝಿ ಅವರ ಕುಟುಂಬಕ್ಕೆ 5 ಕೋಣೆಗಳ ವಿಶಾಲ ಮನೆಯನ್ನು ಕಟ್ಟಿಸಿಕೊಟ್ಟರು. ಮಾತ್ರವಲ್ಲದೆ, ಇನ್ನೂ ಏನೇ ಸಹಾಯಬೇಕಿದ್ದರೂ ಕೇಳುವಂತೆ ಹೇಳಿದ್ದರು. ಆದರೆ, ಆಗ ಮಾಂಝಿ ಕುಟುಂಬ ಏನನ್ನೂ ಕೇಳಿರಲಿಲ್ಲ. ರಾಹುಲ್ ನೆರವಿನ ಸಂಗತಿ ಇತ್ತೀಚೆಗೆ ಹೇಗೋ ಬೆಳಕಿಗೆ ಬಂದಿತು.
ಇದೆಲ್ಲದರ ನಡುವೆ, ಈ ವರ್ಷ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಆರಂಭಿಸಿತು. ಇದೇ ವೇಳೆ, ಚುನಾವಣಾ ಆಯೋಗವು ಬಿಜೆಪಿಗೆ ‘ಮತ ಕಳ್ಳತನ’ಕ್ಕೆ ನೆರವು ನೀಡುತ್ತಿದೆ ಎಂಬ ಗಂಭೀರ ವಿಚಾರವನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿತು. ರಾಹುಲ್ ಗಾಂಧಿ ಬಿಹಾರದಲ್ಲಿ ‘ಮತದಾರರ ಅಧಿಕಾರ ಯಾತ್ರೆ’ ಆರಂಭಿಸಿದರು.
ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿ ಮತ್ತೆ ಗೆಹ್ಲೌರ್‌ಗೆ ಭೇಟಿ ನೀಡಿದರು. ಈ ವೇಳೆ, ರಾಹುಲ್ ಅವರನ್ನು 2ನೇ ಬಾರಿಗೆ ಭೇಟಿ ಮಾಡಿದ ದಶರಥ್ ಮಾಂಝಿ ಅವರ ಮಗ ಭಗೀರಥ್ ಮಾಂಝಿ, ‘ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಬೇಕು’ ಎಂಬ ಬೇಡಿಕೆ ಇಟ್ಟರು. ರಾಹುಲ್ ಭರವಸೆ ಕೂಡ ನೀಡಿದ್ದರು.
ಟಿಕೆಟ್ ನೀಡಿಕೆ ಬಿಹಾರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಅವಕಾಶವೂ. ದಲಿತರ ಹಕ್ಕುಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರುವ ಕಾಂಗ್ರೆಸ್‌ಗೆ, ಭಗೀರಥ್ ಮಾಂಝಿ ಅವರನ್ನು ಕಣಕ್ಕಿಳಿಸಿ, ಆಡಿದ ಮಾತನ್ನು ನಡೆಸಿಕೊಡಲು ಅತ್ಯುತ್ತಮ ಮಾರ್ಗವಾಗಿತ್ತು. ಮಾಂಝಿ ಮಗ ಕಾಂಗ್ರೆಸ್ ಬಾವುಟ ಹಿಡಿದು, ಸ್ಪರ್ಧಿಸುವುದು ಕಾಂಗ್ರೆಸ್ ಪ್ರತಿಪಾದಿಸುವ ಸಾಮಾಜಿಕ ನ್ಯಾಯಕ್ಕೆ ಉದಾಹರಣೆ ಆಗುತ್ತಿತ್ತು.
ಆದರೆ ನಡೆದದ್ದೇ ಬೇರೆ. ಚುನಾವಣೆ ಘೋಷಣೆಯಾದ ಬಳಿಕ, ಅಭ್ಯರ್ಥಿ ಆಯ್ಕೆ ಸಮಯದಲ್ಲಿ ಭಗೀರಥ್ ಮಾಂಝಿ ದೆಹಲಿಗೆ ಹೋಗಿದ್ದರು. ನಾಲ್ಕು ದಿನಗಳ ಕಾಲ ದೆಹಲಿಯಲ್ಲಿಯೇ ನೆಲೆಸಿ, ಕಾಂಗ್ರೆಸ್ ಟಿಕೆಟ್‌ಗಾಗಿ ಪಕ್ಷದ ನಾಯಕರನ್ನು ಭೇಟಿ ಮಾಡಿದರು. ಆದರೆ ಟಿಕೆಟ್ ಸಿಗಲಿಲ್ಲ.
ಆದರೆ, ಭಗೀರಥ್ ದೆಹಲಿಯಿಂದ ಬರಿಗೈಲಿ ಗೆಹ್ಲೌರ್ ಗೆ ಮರಳುತ್ತಿದ್ದಂತೆಯೇ, ಆಗಂತುಕರು ಅವರ ಬೆನ್ನು ಬಿದ್ದಿದ್ದರು. ಇತ್ತೀಚೆಗೆ, ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಭಗೀರಥ್ ಮನೆಗೆ ಭೇಟಿ ನೀಡಿದಾಗ, ಅಲ್ಲಿ ರಾಜಕಾರಣಿಯಂತೆ ಕಂಡು ಬಂದ ವ್ಯಕ್ತಿಯೊಬ್ಬರಿದ್ದರು. ವಾತಾವರಣದಲ್ಲಿ ಒಂದು ಬಗೆಯ ಮುಜುಗರ ತೂಗಿತ್ತು. ನೋಡ ನೋಡುತ್ತಿದ್ದಂತೆಯೇ ವ್ಯಕ್ತಿ ಆತುರಾತುರವಾಗಿ ಮನೆಯಿಂದ ಹೊರಬಿದ್ದರು. ಆತ, ಛತ್ತೀಸ್‌ಗಢದ ಬಿಜೆಪಿ ಶಾಸಕರೆಂದು ಆಮೇಲೆ ತಿಳಿದು ಬಂದಿತು. ಭಗೀರಥ್ ರನ್ನು ಬಿಜೆಪಿಗೆ ಸೆಳೆಯಲು ಬಂದಿದ್ದರು, ಮನವೊಲಿಸುವ ಪ್ರಯತ್ನದಲ್ಲಿದ್ದರು.
ಭಗೀರಥ್ ಮಾಂಝಿ ಗ್ರಾಮದ ವ್ಯಾಪ್ತಿಯುಳ್ಳ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 11ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಭಗೀರಥ್ ಬಿಜೆಪಿಗೆ ಸೇರುತ್ತಾರೆಯೋ-ಇಲ್ಲವೋ ಅಥವಾ ಬಿಜೆಪಿಯನ್ನು ಬೆಂಬಲಿಸುವರೋ-ಇಲ್ಲವೋ ಗೊತ್ತಿಲ್ಲ. ವಿಷಯವೂ ಅದಲ್ಲ. ರಾಜಕೀಯ ಸಂದರ್ಭವನ್ನು ಈ ಎರಡು ಪಕ್ಷಗಳು ನೋಡಿದ ರೀತಿಯು ಒಂದು ಪಕ್ಷದ ಹಸಿವನ್ನೂ, ಮತ್ತೊಂದು ಪಕ್ಷದ ನಿರ್ಲಕ್ಷ್ಯವನ್ನೂ ಒಡೆದು ತೋರುತ್ತದೆ. ಕೈಗೆ ಬಂದ ತುತ್ತನ್ನು ಬಾಯಿಗಿಟ್ಟುಕೊಳ್ಳುವಲ್ಲಿ ಆಕಳಿಸಿ ಎಡವಿದ ಹಸಿದ ಕಾಂಗ್ರೆಸ್ಸು, ಮತ್ತೊಂದೆಡೆ ಹೊಟ್ಟೆ ತುಂಬಿದ್ದರೂ ಕಾಂಗ್ರೆಸ್ ಕೈ ಚೆಲ್ಲಿದ ಅವಕಾಶವನ್ನು ಗಬಕ್ಕನೆ ಕಬಳಿಸುವ ಬಿಜೆಪಿಯ ಮಿಂಚಿನ ನಡೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಸಾಧನೆಗಳೇ ಇಲ್ಲ; ವಿಪಕ್ಷ ನಾಯಕರ ವೈಯಕ್ತಿಕ ಟೀಕೆಗೆ ಜೋತು ಬಿದ್ದ ಬಿಜೆಪಿ
ಭಗೀರಥ್ ಮಾಂಝಿ ಅವರಿಗೆ ಟಿಕೆಟ್ ಕೊಟ್ಟಿದ್ದರೆ, ಬಿಹಾರಕ್ಕೆ ಒಂದು ಮಾದರಿಯೆನಿಸುತ್ತಿತ್ತು ಕಾಂಗ್ರೆಸ್ಸು.
ಬಿಹಾರವನ್ನು ಮೂರೂವರೆ ದಶಕಗಳ ಕಾಲ ನಿರಂತರವಾಗಿ ಆಳಿದ್ದ ಕಾಂಗ್ರೆಸ್, ಅಧಿಕಾರ ಕಳೆದುಕೊಂಡು ಮೂರುವರೆ ದಶಕಗಳೇ ಉರುಳಿವೆ. ಅಧಿಕಾರದ ದಡ ಸೇರಲು ಭಗಿರಥ್ ಮಾಂಝಿ ಅಂತಹ ಸಣ್ಣ ಹುಲ್ಲುಕಡ್ಡಿಗಳೂ ದೊಡ್ಡ ಬಂಡೆಗಳಂತೆ ನೆರವಾಗುವ ಸಾಧ್ಯತೆಯನ್ನು ಅರಿತುಕೊಳ್ಳಬೇಕಿತ್ತು. ಅಧಿಕಾರದಲ್ಲಿ ಉಳಿಯಲು ಸಣ್ಣ ಹುಲ್ಲುಕಡ್ಡಿಯನ್ನೂ ಜೋಡಿಸಿ ಜೊತೆಗಿಟ್ಟುಕೊಳ್ಳುತ್ತದೆ ಎಂಬ ಪಾಠವನ್ನು ಬಿಜೆಪಿಯಿಂದ ಕಲಿಯಬೇಕಿತ್ತು.




