“ಪ್ರಥಮ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಭಾರತ ಕಂಡ ಮಹಾನ್ ಅಪ್ರತಿಮ ದೇಶಭಕ್ತ” ಎಂದು ದಾವಣಗೆರೆ ನಗರದ ಯುಬಿಡಿಟಿ ಕಾಲೇಜು ಆವರಣದ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಸಂಸದ ಹಾಗೂ ಮಾಜಿ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯ್ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಏಕತಾ ನಡಿಗೆ ಪಾದಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಭಾರತದ ಏಕೀಕರಣಕ್ಕೆ ಕಾರಣವಾದ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ದೇಶಾದ್ಯಂತ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಕೇಂದ್ರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಪಾದಯಾತ್ರೆ ದೇಶಾದ್ಯಂತ ಆಯೋಜಿಸಲಾಗಿದೆ” ಎಂದು ತಿಳಿಸಿದರು.
“ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 2047ಕ್ಕೆ ವಿಕಸಿತ ಭಾರತ ಕಟ್ಟುವ ಪರಿಣಾಮವಾಗಿ ದೇಶದ ಯುವಕರನ್ನು ದೇಶದ ಪ್ರಗತಿಯೊಂದಿಗೆ ದೇಶದ ಗೌರವದೊಂದಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಈ ಪಾದಯಾತ್ರೆ ಆಯೋಜಿಸಲಾಗಿದೆ. ಭಾರತ ದೇಶವು ವಿಶ್ವದ ಹಿರಿಯಣ್ಣನಾಗುವ ನಿಟ್ಟಿನಲ್ಲಿ ಯುವಕರು ಶ್ರಮಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
“ಅಕ್ಟೋಬರ್ 6ರಿಂದ ದೇಶದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಾನು ಭಾರತದ ಸೇವಕ ಎನ್ನುವ ಮನೋಭಾವದೊಂದಿಗೆ ವಿದ್ಯಾರ್ಥಿಗಳು ಎಂಸಿಸಿ, ಎನ್ಎಸ್ಎಸ್, ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ ಎಲ್ಲಾ ಸ್ವಯಂಸೇವಕರು ಈ ಏಕತಾ ನಡಿಗೆಯಲ್ಲಿ ಸುಮಾರು 6 ರಿಂದ 8 ಕಿ.ಮೀ ಉದ್ದದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ” ಎಂದರು.
“ಸ್ವಾತಂತ್ರದ ನಂತರ ಹರಿದು ಹಂಚಿ ಹೋಗಿದ್ದ 565 ವಿವಿಧ ರಾಜರ ಸಂಸ್ಥಾನಗಳನ್ನು ಒಗ್ಗೂಡಿಸಿ ಅವರ ಮನವೊಲಿಸುವ ಮೂಲಕ, ಅಲ್ಲದೇ ಮೊಂಡುತನ ಮಾಡುವರನ್ನು ಬಗ್ಗು ಬಡಿದು ವಿಲೀನ ಮಾಡಿ ಭಾರತವನ್ನು ಏಕೀಕರಣ ರಾಷ್ಟ್ರವನ್ನಾಗಿ ಮಾಡುವಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪಾತ್ರ ಮಹತ್ತರವಾದದ್ದು” ಎಂದು ಸ್ಮರಿಸಿದರು.
“ಭಾರತದಲ್ಲಿ ಸರ್ದಾರ್ ವಲ್ಲಬಾಯ್ ಪಟೇಲರು ಹಂಚಿ ಹೋಗಿದ್ದ ರಾಜ್ಯಗಳನ್ನು ಒಗ್ಗೂಡಿಸುವ ಮೂಲಕ ಭಾರತ ರಾಷ್ಟ್ರವನ್ನು ನಿರ್ಮಿಸಿದ ರೀತಿಯಲ್ಲಿ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ಯುವಕರು ದೇಶದ ಘನತೆ, ಗೌರವ ಮತ್ತು ಐಕ್ಯತೆಗಳನ್ನು ಎತ್ತಿ ಹಿಡಿಯುವ ಮೂಲಕ ವಿಶ್ವದ ಹಿರಿಯಣ್ಣನನ್ನಾಗಿ ಭಾರತವನ್ನು ಮಾಡಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಂಗಾಯಣದ ಕಲಾವಿದರಿಂದ ‘ಅಮೀರಬಾಯಿ ಕರ್ನಾಟಕಿ’ ಕೃತಿ ಪ್ರೇರಿತ ‘ಪ್ರತಿಗಂಧರ್ವ’ ನಾಟಕ
ಕಾರ್ಯಕ್ರಮದಲ್ಲಿ ಡಾ.ಬಿ. ರಾಜಪ್ಪ, ರಾಜ್ಯ ಸರ್ಕಾರದ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿಯ ಜಿಲ್ಲಾಧ್ಯಕ್ಷ ಎನ್.ರಾಜಶೇಖರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ್ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.





