ಐಪಿಎಲ್ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ದಾಖಲಿಸಿದ್ದ ಮಾನಹಾನಿ ಮೊಕದ್ದಮೆಯ ವಿಚಾರಣೆಯು ಮದ್ರಾಸ್ ಹೈಕೋರ್ಟ್‌ನಲ್ಲಿ ಮುಂದುವರಿದಿದೆ. ಈ ಪ್ರಕರಣದ ವಿಚಾರಣೆಯ ಭಾಗವಾಗಿ, ಸಾಕ್ಷ್ಯವಾಗಿ ಒದಗಿಸಲಾದ ಸಿಡಿಗಳ (CD) ಭಾಷಾಂತರ ಮತ್ತು ಲಿಪ್ಯಂತರ (transcription) ಕಾರ್ಯಕ್ಕಾಗಿ ತಗಲುವ ವೆಚ್ಚವನ್ನು ಭರಿಸಲು 10 ಲಕ್ಷ ರೂಪಾಯಿಗಳನ್ನು ಠೇವಣಿ ಇರಿಸುವಂತೆ ಹೈಕೋರ್ಟ್ ಧೋನಿ ಅವರಿಗೆ ಆದೇಶಿಸಿದೆ.
ನ್ಯಾಯಮೂರ್ತಿ ಆರ್.ಎನ್. ಮಂಜುಳಾ ಅವರಿದ್ದ ಪೀಠವು ಈ ಮಹತ್ವದ ಆದೇಶವನ್ನು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿರುವ ಮಾಹಿತಿಯನ್ನು ಭಾಷಾಂತರಿಸುವ ಕಾರ್ಯವು ಅತ್ಯಂತ ಬೃಹತ್ತಾದುದು ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಇಂಟರ್‌ಪ್ರಿಟರ್ (ಭಾಷಾಂತರಕಾರರು), ಈ ಸಿಡಿಗಳಲ್ಲಿರುವ ಮಾಹಿತಿಯನ್ನು ಲಿಖಿತ ರೂಪಕ್ಕೆ ತರಲು ಕನಿಷ್ಠ ಒಬ್ಬ ಭಾಷಾಂತರಕಾರ ಮತ್ತು ಒಬ್ಬ ಬೆರಳಚ್ಚುಗಾರ ಸತತವಾಗಿ ಮೂರರಿಂದ ನಾಲ್ಕು ತಿಂಗಳ ಕಾಲ ಶ್ರಮಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಸಿಬ್ಬಂದಿಯ ಶ್ರಮ ಮತ್ತು ಸಮಯವನ್ನು ಪರಿಗಣಿಸಿ ನ್ಯಾಯಾಲಯವು 10 ಲಕ್ಷ ರೂ. ಶುಲ್ಕವನ್ನು ನಿಗದಿಪಡಿಸಿದೆ. ಸಾಮಾನ್ಯವಾಗಿ ವಾದಿಗಳೇ ತಮ್ಮ ದಾವೆಗೆ ಪೂರಕವಾದ ದಾಖಲೆಗಳನ್ನು ಒದಗಿಸುವ ಜವಾಬ್ದಾರಿ ಹೊಂದಿರುವುದರಿಂದ, ಈ ವೆಚ್ಚವನ್ನು ಧೋನಿ ಅವರೇ ಭರಿಸಬೇಕೆಂದು ಪೀಠ ಸ್ಪಷ್ಟಪಡಿಸಿದೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಪಾಕ್ ಬಹಿಷ್ಕಾರಕ್ಕೆ ಬಾಂಗ್ಲಾ ಬ್ರೇಕ್; ಪಿಸಿಬಿ ಮಣಿದಿದ್ದು ಯಾರ ಒತ್ತಡಕ್ಕೆ?
ನ್ಯಾಯಾಲಯದ ನಿರ್ದೇಶನದಂತೆ, ನಿಗದಿಪಡಿಸಲಾದ ಈ ಮೊತ್ತವನ್ನು ಮಾರ್ಚ್ 12, 2026ರ ಒಳಗೆ ಮದ್ರಾಸ್ ಹೈಕೋರ್ಟ್‌ನ ‘ಮುಖ್ಯ ನ್ಯಾಯಮೂರ್ತಿಗಳ ಪರಿಹಾರ ನಿಧಿಗೆ’ ಜಮೆ ಮಾಡಬೇಕಾಗಿದೆ. ಇದೇ ವೇಳೆ, ಭಾಷಾಂತರ ಪ್ರಕ್ರಿಯೆಯನ್ನು ಮಾರ್ಚ್ ತಿಂಗಳ ಮೂರನೇ ವಾರದೊಳಗೆ ಪೂರ್ಣಗೊಳಿಸಬೇಕೆಂದು ನ್ಯಾಯಾಲಯವು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 12ಕ್ಕೆ ನಿಗದಿಪಡಿಸಿದೆ.
2013ರ ಐಪಿಎಲ್ ಪಂದ್ಯಗಳಲ್ಲಿನ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಧೋನಿ ಶಾಮೀಲಾಗಿದ್ದಾರೆ ಎಂದು ಜೀ ಮೀಡಿಯಾ ಮತ್ತು ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಅವರು ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡಿದ್ದರು ಎಂದು ಆರೋಪಿಸಿ, ಎಂ.ಎಸ್. ಧೋನಿ 2014ರಲ್ಲಿ ಸಿವಿಲ್ ಮಾನಹಾನಿ ದಾವೆಯನ್ನು ಹೂಡಿದ್ದರು. ಈ ಪ್ರಕರಣದಲ್ಲಿ ಪ್ರತಿವಾದಿಗಳು ಸಲ್ಲಿಸಿದ್ದ ಲಿಖಿತ ಹೇಳಿಕೆಗಳ ಕುರಿತೂ ಧೋನಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸಾಕ್ಷ್ಯಗಳ ಪರಿಶೀಲನೆ ಹಂತದಲ್ಲಿ, ದಾಖಲೆಗಳ ಭಾಷಾಂತರದ ಅವಶ್ಯಕತೆ ಎದುರಾಗಿರುವುದರಿಂದ ನ್ಯಾಯಾಲಯ ಈ ಆದೇಶ ನೀಡಿದೆ.





