ರಾಷ್ಟ್ರ ರಾಜಧಾನಿ ದೆಹಲಿಯು ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ. ದೆಹಲಿಯ ವಾಯು ಮಾಲಿನ್ಯ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಗುರುವಾರ, ರಾಜಧಾನಿಯ ‘ಗಾಳಿ ಗುಣಮಟ್ಟ ಸೂಚ್ಯಂಕ’ (ಎಕ್ಯೂಐ) 358ರಿಂದ 498ರವರೆಗೆ ತಲುಪಿದೆ. ಆನಂದ್ ವಿಹಾರ್, ಜಹಾಂಗೀರಪುರಿಯಂತಹ ಕೆಲವು ಪ್ರದೇಶಗಳಲ್ಲಿ AQI 400-500ಅನ್ನು ಮೀರಿದೆ. ಗಾಳಿಯಲ್ಲಿ PM2.5 ಮತ್ತು PM10 ವಸ್ತುಗಳು ಅಧಿಕವಾಗಿವೆ. ದಟ್ಟವಾದ ಹೊಗೆ-ಮಂಜು ಕವಿದಿದ್ದು, ಗೋಚರತೆ ಕುಡಿಮೆಯಾಗಿದೆ. ಉಸಿರಾಟ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿವೆ.
ದೆಹಲಿಯ ವಾಯುಮಾಲಿನ್ಯ ಸಮಸ್ಯೆಯ ಇಂದು-ನೆನ್ನೆಯದಲ್ಲ. ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ, ವಿಶೇಷವಾಗಿ ಚಳಿಗಾಲದಲ್ಲಿ ವಿಷಕಾರಿ ಗಾಳಿಯು ಗಂಭೀರ ಸಮಸ್ಯೆಯಾಗಿದೆ. ಹಲವು ವರ್ಷಗಳಿಂದ ನವೆಂಬರ್-ಡಿಸೆಂಬರ್‌ನಲ್ಲಿ ಮಾಲಿನ್ಯವು ದೆಹಲಿಯಲ್ಲಿ ಮಾರಣಹೋಮ ನಡೆಸುತ್ತಿದೆ. ಹಲವರು ಜೀವ ತೆರುತ್ತಿದ್ದಾರೆ. ಕೈಗಾರಿಕೆಗಳ ಹೊರಸೂಸುವಿಕೆ, ವಾಹನಗಳ ಹೊಗೆ, ತಾಪಮಾನ ಕುಸಿತ, ಕಡಿಮೆ ಗಾಳಿಯ ವೇಗ ಹಾಗೂ ನೆರೆಯ ರಾಜ್ಯಗಳಲ್ಲಿ ಹುಲ್ಲು ಸುಡುವುದು ಮಾಲಿನ್ಯ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಆದರೂ, ಪಂಜಾಬ್-ಹರಿಯಾಣ ಜನರು ಹುಲ್ಲು ಸುಡುವುದೇ ಮೂಲ ಕಾರಣವೆಂದು ದೂರಲಾಗುತ್ತಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಹುಲ್ಲು ಸುಡುವುದನ್ನು ತಡೆಯಲು ಹಲವು ನಿಯಮಗಳನ್ನೂ ತರಲಾಗಿತ್ತು. ಆ ಎರಡು ರಾಜ್ಯಗಳಲ್ಲಿ ಹುಲ್ಲು ಸುಡುವ ಪ್ರಮಾಣ ಕಡಿಮೆಯಾದರೂ, ದೆಹಲಿಯ ವಾಯು ಮಾಲಿನ್ಯ ಕಡಿಮೆಯಾಗುತ್ತಿಲ್ಲ. ಈಗ, ಹುಲ್ಲು ಸುಡುವಿಕೆ ವಿಚಾರದಲ್ಲಿ ಉತ್ತರ ಪ್ರದೇಶವನ್ನು ದೂರಲಾಗುತ್ತಿದೆ. ಆದರೆ, ದೆಹಲಿಯಲ್ಲಿ ಸ್ಥಳೀಯವಾಗಿ ವಾಯು ಮಾಲಿನ್ಯ ತಡೆಗೆ ಬೇಕಾದ ಅಗತ್ಯ ಕ್ರಮಗಳು ಮತ್ತು ಯೋಜನೆಗಳನ್ನು ಸರ್ಕಾರಗಳು ರೂಪಿಸಿವೆಯೇ ಎಂಬ ಪ್ರಶ್ನೆ ಮಾತ್ರ ಮೂಲೆಗೆ ಸರಿದಿದೆ. ಮೂಲೆಯಲ್ಲೇ ಉಳಿದಿದೆ.
ಸದ್ಯ, ವಾಯು ಮಾಲಿನ್ಯ ವ್ಯಾಪಿಸಿದ್ದು, ದೆಹಲಿ ಸರ್ಕಾರವು 4 ಕ್ರಮಗಳನ್ನು ಜಾರಿಗೊಳಿಸಿದೆ.
1. ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ 50% ವರ್ಕ್ ಫ್ರಮ್ ಹೋಮ್ ಕಡ್ಡಾಯ,
2. ಪಿಯುಸಿ ಪ್ರಮಾಣಪತ್ರ ಇಲ್ಲದ ವಾಹನಗಳಿಗೆ ಇಂಧನ ನಿರಾಕರಣೆ,
3. BS-6 (ಹೊರಸೂಸುವಿಕೆ-ಎಮಿಷನ್) ಮಾನದಂಡಕ್ಕಿಂತ ಗುಣಮಟ್ಟದ ವಾಹನಗಳ ನಿಷೇಧ,
4. ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತ.
GRAP-3 ಮತ್ತು 4ರ ಅಡಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಮನೆ/ಕಟ್ಟಡಗಳ ಹೊರಗೆ ಕೆಲಸ ಮಾಡುವವರು ಮಾಲಿನ್ಯದಿಂದ ಹೆಚ್ಚು ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ, ಕಟ್ಟಡ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಕೆಲಸ ಸ್ಥಗಿತವು ಕಟ್ಟಡ ಕಾರ್ಮಿಕರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಿದೆ.
ನಿರ್ಮಾಣ ಕಾರ್ಮಿಕರು ತಮ್ಮ ಜೀವನ ಬಂಡಿ ದೂಡಲು ದಿನನಿತ್ಯ ದುಡಿಯಲೇಬೇಕು. ಅಂದಿನ ದುಡಿಮೆ – ಅವತ್ತಿನ ಹೊಟ್ಟೆಪಾಡನ್ನು ನೀಗಿಸುತ್ತದೆ ಎಂಬ ಪರಿಸ್ಥಿತಿ ಈ ಕಾರ್ಮಿಕರದ್ದು. ಅದರೆ, ನಿರ್ಮಾಣ ಕಾಮಗಾರಿಗಳೇ ಸ್ಥಗಿತಗೊಂಡಿರುವುದು, ಕಾರ್ಮಿಕರ ದುಡಿಮೆಯನ್ನು ಕಸಿದುಕೊಂಡಿದೆ. ಮತ್ತೆ ಕಾಮಗಾರಿಗಳು ಆರಂಭವಾಗಲು ವಾರಗಳು ಅಥವಾ ತಿಂಗಳುಗಳೇ ಬೇಕಾಗಬಹುದು. ಅಲ್ಲಿಯವರೆಗೆ, ದುಡಿಮೆ ಇಲ್ಲದೆ, ಕಾರ್ಮಿಕರು ಜೀವನ ದೂಡುವುದು ದುಸ್ಥರವಾಗಲಿದೆ. ಕಾರ್ಮಿಕರ ಪಡಿಪಾಟಲು ಹೇಳತೀರದಾಗಿದೆ.
ಆದಾಗ್ಯೂ, ನಿರ್ಮಾಣ ಕೆಲಸ/ಕಾಮಗಾರಿಗಳು ಆರಂಭವಾಗುವವರೆ ಕಟ್ಟಡ ಕಾರ್ಮಿಕರಿಗೆ ಮಾಸಿಕ ತಲಾ 10,000 ರೂ. ನೀಡುವುದಾಗಿ ದೆಹಲಿ ಸರ್ಕಾರ ಘೋಷಿಸಿದೆ. ಆದರೆ, ನಾಲ್ವರು ಅಥವಾ ಅದಕ್ಕಿಂತ ಹೆಚ್ಚು ಕುಟುಂಬದ ಸದಸ್ಯರನ್ನು ಹೊಂದಿರುವ ಕಾರ್ಮಿಕರೊಬ್ಬರು, ರಾಷ್ಟ್ರ ರಾಜಧಾನಿಯಂತಹ ಪ್ರದೇಶದಲ್ಲಿ ಈ 10,000 ರೂಪಾಯಿಗಳಲ್ಲಿ ಬದುಕು ಸೂಗಿಸಲು, ಕುಟುಂಬದ ಸದಸ್ಯರನ್ನು ಸಲಹುವಲು ಸಾಧ್ಯವೇ? ಆದರೆ, ಅಷ್ಟರಲ್ಲೇ ಬದುಕಿಕೊಳ್ಳಿ ಎನ್ನುತ್ತಿದೆ ದೆಹಲಿಯ ಬಿಜೆಪಿ ಸರ್ಕಾರ.
ಒಂದೆಡೆ, ಕಾರ್ಮಿಕರನ್ನು ಸರ್ಕಾರ ಬಿಕ್ಕಟ್ಟಿಗೆ ದೂಡಿದೆ. ಅನ್ನದ ಬದಲು ಗಂಜಿ ಕುಡಿಯಿರಿ ಎನ್ನುತ್ತಿದೆ. ಮತ್ತೊಂದೆಡೆ, ಇಡೀ ನಗರದ ಜನರನ್ನು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಲೂ ಬಿಟ್ಟುಬಿಟ್ಟಿದೆ. ಉಸಿರಾಟದ ತೊಂದರೆ, ಕೆಮ್ಮು, ಕಣ್ಣು ಉರಿ, ಗಂಟಲು ನೋವು, ಆಸ್ತಮಾ, ಶ್ವಾಸಕೋಶ ರೋಗಗಳು, ಹೃದಯ ಸಮಸ್ಯೆಗಳು, ಕ್ಯಾನ್ಸರ್‌ನಂತಹ ಅಪಾಯಗಳಿಗೆ ಜನರು ತುತ್ತಾಗುತ್ತಿದ್ದಾರೆ. ಕೆಲವರು ಬಲಿಯೂ ಆಗುತ್ತಿದ್ದಾರೆ. ಮುಖ್ಯವಾಗಿ, ಮಕ್ಕಳು ಮತ್ತು ಹಿರಿಯರು ದೈಹಿಕ ದುರ್ಬಲತೆಯಿಂದಾಗಿ ವಾಯು ಮಾಲಿನ್ಯದ ಹೊಡೆತ ತಾಳಲಾರದೆ ಅಸುನೀಗುತ್ತಿದ್ದಾರೆ. ದೆಹಲಿಯ 82% ನಿವಾಸಿಗಳು ಮಾಲಿನ್ಯದಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಈಗಾಗಲೇ ತುತ್ತಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಆದರೂ, ಸರ್ಕಾರ ಗಂಭೀರವಾಗಿಲ್ಲ. ಗಂಭೀರ ಕ್ರಮ-ಯೋಜನೆಗಳಿಗೆ ಮುಂದಾಗಿಲ್ಲ. ಸರ್ಕಾರವನ್ನು ಪ್ರಶ್ನಿಸಬೇಕಿದ್ದ, ಎಚ್ಚರಿಸಬೇಕಿದ್ದ ಮಾಧ್ಯಮಗಳು ಮತ್ತು ನ್ಯಾಯಾಲಯ (ಸುಪ್ರೀಂ ಕೋರ್ಟ್) ಕೂಡ ಗಂಭೀರವಾಗಿ ಮಾತನಾಡುತ್ತಿಲ್ಲ. ಪ್ರಶ್ನಿಸುತ್ತಿಲ್ಲ. ಅವುಗಳೂ ಮೌನಕ್ಕೆ ಜಾರಿವೆ. ಬಿಜೆಪಿ ಆಡಳಿತದಲ್ಲಿನ ಮಾಲಿನ್ಯವು ಮಾಧ್ಯಮಗಳ ಗಂಟಲನ್ನು ಹೊಕ್ಕಿ, ಧ್ವನಿಯನ್ನು ಗಂಟಲಿನಲ್ಲೇ ಬಂಧಿಸಿಬಿಟ್ಟಿವೆಯೇ ಎಂಬಂತೆ ನಿರ್ಲಜ್ಜ ಮೌನತಾಳಿವೆ.
ಈ ಹಿಂದೆ, ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ದೆಹಲಿಯಲ್ಲಿ ಅಧಿಕಾರದಲ್ಲಿದ್ದಾಗ, ಇದೇ ಮಾಧ್ಯಮಗಳು ಮಾಲಿನ್ಯದ ವಿಚಾರದಲ್ಲಿ ಅಬ್ಬರಿಸಿ-ಬೊಬ್ಬಿರಿಯುತ್ತಿದ್ದವು. ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಮತ್ತು ಮಾಧ್ಯಮಗಳು ಕೇಜ್ರಿವಾಲ್ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗರೆದಿದ್ದವು. ಆದರೆ, ಈಗ ಬಿಜೆಪಿಯೇ ಅಧಿಕಾರದಲ್ಲಿದೆ. ಮಾಲಿನ್ಯದ ಕುರಿತು ಮಾಧ್ಯಮಗಳು ಮಾತನಾಡುವುದು, ಸುದ್ದಿ ಪ್ರಕಟ/ಪ್ರಸಾರ ಮಾಡುವುದು ಕಡಿಮೆಯಾಗಿದೆ. ದೆಹಲಿಯಲ್ಲಿ ಯಾವುದೇ ಸಮಸ್ಯೆಯೇ ಇಲ್ಲ ಎಂಬಂತೆ ಮಾಲಿನ್ಯದ ವಿಷಯವನ್ನೇ ಬಿಟ್ಟುಬಿಟ್ಟಿವೆ.
ಈ ಲೇಖನ ಓದಿದ್ದೀರಾ?: ‘ವಿಕಾಸ್ ಭಾರತ್ ಶಿಕ್ಷಾ ಅಧಿಷ್ಠಾನ’ ಮಸೂದೆ: ಕೇಂದ್ರದಿಂದ ಉನ್ನತ ಶಿಕ್ಷಣದ ಅತಿಕ್ರಮಣ; ಮಸೂದೆ ಹೇಳುವುದೇನು?
ಇನ್ನು, ಸುಪ್ರೀಂಕೋರ್ಟ್ ಕೂಡ ದೆಹಲಿ ಸರ್ಕಾರಕ್ಕೆ ಸರಿಯಾಗಿ ಚಾಟಿ ಬೀಸಿದಂತೆ ಕಾಣುತ್ತಿಲ್ಲವೆಂದು ದೆಹಲಿಯ ಪ್ರಜ್ಞಾವಂತರು ಹೇಳುತ್ತಿದ್ದಾರೆ. ನ್ಯಾಯಾಲಯವು ಮಾಲಿನ್ಯ ನಿಯಂತ್ರಣದಲ್ಲಿ ದೆಹಲಿ ಸರ್ಕಾರದ ಕ್ರಮಗಳು ‘ಸಂಪೂರ್ಣ ವಿಫಲ’ವಾಗಿವೆ ಎಂದು ಟೀಕಿಸಿದೆ. ಟೋಲ್ ಬೂತ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ, BS-3 ಮಾನದಂಡಗಳನ್ನು ಸರಿಯಾಗಿ ಪಾಲಿಸುವಂತೆ ಹಾಗೂ ಕೆಲಸ ಕಳೆದುಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಆದರೆ, ನ್ಯಾಯಾಲಯದ ಈ ಸೂಚನೆಗಳು ಸಾಲದು. ನ್ಯಾಯಾಲಯದಿಂದ ತೀವ್ರ ಆಕ್ಷೇಪಗಳು ಬಾರದ ಹೊರತು ಸರ್ಕಾರಗಳು ಎಚ್ಚೆತ್ತುಕೊಳ್ಳುವುದಿಲ್ಲ. ಮಾಲಿನ್ಯ ನಿಯಂತ್ರಣದ ಕುರಿತು ಗಂಭೀರವಾಗಿ ಚಿಂತನೆ ನಡೆಸುವುದಿಲ್ಲ. ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗುವುದಿಲ್ಲವೆಂಬ ಅಭಿಪ್ರಾಯಗಳಿವೆ. ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಳ್ಳುವ ಅಗತ್ಯವೆಂದು ಎಂದು ಹೇಳಲಾಗುತ್ತಿದೆ.
ದೆಹಲಿಯ ಮಾಲಿನ್ಯ ಸಮಸ್ಯೆ ರಾಜಕೀಯ ವಿಷಯವಲ್ಲ. ಇದೊಂದು ಸಾರ್ವಜನಿಕ ಆರೋಗ್ಯದ ತುರ್ತು ಅರ್ಥಾತ್ ತುರ್ತು ಪರಿಸ್ಥಿತಿ. ಆದಾಗ್ಯೂ, ಬಿಜೆಪಿ ವಿಪಕ್ಷದಲ್ಲಿದ್ದಾಗ ದೆಹಲಿ ಮಾಲಿನ್ಯವನ್ನು ರಾಜಕೀಯ ವಿಷಯವಾಗಿಯೇ ನೋಡಿದೆ. ಈಗಲೂ, ಮಾಲಿನ್ಯಕ್ಕೆ ಎಎಪಿ ಸರ್ಕಾರದ ದೋಷಗಳೇ ಕಾರಣವೆಂದು ದೂರುತ್ತಿದೆ. ಬಿಜೆಪಿ ಸರ್ಕಾರವು ರಾಜಕೀಯವನ್ನು ಬದಿಗೊತ್ತಿ, ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುವ ಮತ್ತು ಜಾರಿಗೊಳಿಸುವತ್ತ ಗಮನ ಹರಿಸಬೇಕು. ಬಡ ಕಾರ್ಮಿಕರ ಜೀವನ ಸುಧಾರಣೆ ಮತ್ತು ಆರೋಗ್ಯ ರಕ್ಷಣೆಗಾಗಿ ಪರಿಹಾರವನ್ನು ಹೆಚ್ಚಿಸಬೇಕು. ದೆಹಲಿ ನಿವಾಸಿಗಳು ಗ್ಯಾಸ್ ಚೇಂಬರ್‌ನಿಂದ ಮುಕ್ತಿ ಪಡೆಯಲು ತ್ವರಿತ ಮತ್ತು ಶಾಶ್ವತ ಪರಿಹಾರಗಳನ್ನು ಹುಡುಕಬೇಕು.




