ಕೋವಿಡ್ ವೇಳೆ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟ ಶಾಲಾ ಪ್ರಾಂಶುಪಾಲರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ. ಹಾಗೆಯೇ ಶಾಲಾ ಪ್ರಾಂಶುಪಾಲರು ಕೋವಿಡ್ ಕರ್ತವ್ಯದಲ್ಲಿ ಇರಲಿಲ್ಲ ಏಕ ಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿದೆ.
ಮೃತರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ತುಷಾರ್ ರಾವ್ ಗೆಡೆಲಾ ಅವರ ಪೀಠ, “ಮೇಲ್ಮನವಿದಾರರ ಪತಿಯ ದುರದೃಷ್ಟಕರ ಸಾವು ಕೋವಿಡ್-19 ಕರ್ತವ್ಯ ನಿರ್ವಹಿಸುವಾಗ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರಿಂದ ಆಗಿದೆ ಎಂಬ ತೀರ್ಮಾನಕ್ಕೆ ಬರಲು ಯಾವುದೇ ಅಡೆತಡೆಯಿಲ್ಲ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್ ಆದೇಶ
1993ರ ಮೇ ತಿಂಗಳಿನಿಂದ ದೆಹಲಿ ಸರ್ಕಾರದ ಸಹಾಯಕ ಶಿಕ್ಷಕರಾಗಿ ಸೇರಿದ್ದ ಶಿವನಾಥ್ ಪ್ರಸಾದ್, ಮೃತಪಡುವಾಗ ನಿಥಾರಿಯ ಎಂಸಿಡಿ ಪ್ರಾಥಮಿಕ ಬಾಲಕರ ಶಾಲೆಯ ಪ್ರಾಂಶುಪಾಲರಾಗಿದ್ದರು. 2020ರ ಮೇ ತಿಂಗಳಲ್ಲಿ ದೆಹಲಿ ಸರ್ಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿದ್ದು, ಅದರ ಅಡಿಯಲ್ಲಿ ಕೋವಿಡ್-19 ಕರ್ತವ್ಯದ ವೇಳೆ ಯಾವುದೇ ಸರ್ಕಾರಿ ಅಧಿಕಾರಿ ಸಾವನ್ನಪ್ಪಿದರೆ, ಅವರ ಸಂಬಂಧಿಕರಿಗೆ ಮರಣೋತ್ತರವಾಗಿ 1 ಕೋಟಿ ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2021ರ ಏಪ್ರಿಲ್‌ನಲ್ಲಿ ಕೋವಿಡ್ ಸಂಬಂಧಿತ ಕರ್ತವ್ಯ ಸೇರಿದಂತೆ ವಿವಿಧ ಕರ್ತವ್ಯಗಳನ್ನು ನಿರ್ವಹಿಸಲು ಶಿವನಾಥ್ ಪ್ರಸಾದ್ ಅವರನ್ನು ನಿಯೋಜಿಸಲಾಗಿತ್ತು. 2021ರ ಏಪ್ರಿಲ್‌ನಲ್ಲಿ ಶಿವನಾಥ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು, 2021ರ ಏಪ್ರಿಲ್ 28ರಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ದೆಹಲಿ ಸರ್ಕಾರದ ಯೋಜನೆಯಡಿಯಲ್ಲಿ ಮೃತರ ಪತ್ನಿ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು “ಅರ್ಜಿಯಲ್ಲಿ ಕೆಲವು ಆಕ್ಷೇಪಣೆಗಳಿದ್ದು, ಮೊತ್ತವನ್ನು ಅನುಮೋದಿಸಲು ಸಾಧ್ಯವಿಲ್ಲ” ಎಂದು ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರಮಾಣ ವಚನ ಸ್ವೀಕಾರಕ್ಕೆ ಸಂಸದ ಇಂಜಿನಿಯರ್ ರಶೀದ್‌ಗೆ ಪೆರೋಲ್ ನೀಡಿದ ದೆಹಲಿ ಹೈಕೋರ್ಟ್
ಇದಾದ ಬಳಿಕ ಪರಿಹಾರ ಕೋರಿ ಮೃತರ ಪತ್ನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಏಕ ಸದಸ್ಯ ಪೀಠವು ಅರ್ಜಿ ವಜಾಗೊಳಿಸಿತ್ತು. ಅದಾದ ಬಳಿಕ ಶಿವನಾಥ್ ಪತ್ನಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಎತ್ತಿಕೊಂಡ ಪೀಠವು “ಇಂತಹ ಪ್ರಯೋಜನಕಾರಿ ನೀತಿಗಳ ಅಡಿಯಲ್ಲಿ ಅರ್ಜಿಗಳನ್ನು ಪರಿಶೀಲಿಸುವಾಗ, ಸಂಕುಚಿತ ಮತ್ತು ನಿಷ್ಠುರ ದೃಷ್ಟಿಕೋನವನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇಂತಹ ಅರ್ಜಿ ಪರಿಶೀಲಿಸುವಾಗ ಸೂಕ್ಷ್ಮವಾಗಿರಬೇಕು. ಅಂತಹ ನೀತಿಗಳ ಹಿಂದಿನ ಉದ್ದೇಶವನ್ನು ಮರೆತುಬಿಡಬಾರದು. ಮಹಿಳೆ ಹೊಸ ಅರ್ಜಿಯನ್ನು ಸಲ್ಲಿಸುವ ಪರಿಸ್ಥಿತಿಗೆ ತಂದಿರುವುದು ನ್ಯಾಯದ ಹಿತಾಸಕ್ತಿಯಲ್ಲ” ಎಂದು ಹೇಳಿದೆ.
ಶಾಲಾ ಪ್ರಾಂಶುಪಾಲರು ಕೋವಿಡ್‌ನಿಂದಲೇ ಮೃತಪಟ್ಟಿರುವುದಾಗಿ ಪರಿಗಣಿಸಿದ ಪೀಠವು ಎಂಟು ವಾರಗಳಲ್ಲಿ ಪಾವತಿಯನ್ನು ಪೂರ್ಣಗೊಳಿಸಲು ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿದೆ. ಎಂಟು ವಾರಗಳಲ್ಲಿ ಮೊತ್ತವನ್ನು ಬಿಡುಗಡೆ ಮಾಡದಿದ್ದರೆ, ಅಧಿಕಾರಿಗಳು ವಾರ್ಷಿಕ ಶೇಕಡ 6ರಷ್ಟು ಬಡ್ಡಿಯನ್ನು ಸಹ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.





