ಉನ್ನಾಂವ್ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಗೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಬಿಜೆಪಿಯ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸೆಂಗಾರ್‌ಗೆ ಇತ್ತೀಚೆಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಸುಪ್ರೀಂ ಕೋರ್ಟ್ ಆ ಆದೇಶಕ್ಕೆ ತಡೆ ನೀಡಿರುವ ಬೆನ್ನಲ್ಲೇ, ಇದೀಗ ಕಸ್ಟಡಿ ಸಾವು ಪ್ರಕರಣದಲ್ಲಿಯೂ ಶಿಕ್ಷೆ ಅಮಾನತು ಕೋರಿಕೆಯನ್ನು ಹೈಕೋರ್ಟ್ ನಿರಾಕರಿಸಿದೆ.
ಉನ್ನಾಂವ್ ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯವು 2020ರ ಮಾರ್ಚ್ 13ರಂದು ಕುಲದೀಪ್ ಸೆಂಗರ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು. ಮೃತ ವ್ಯಕ್ತಿಯು ತಮ್ಮ ಕುಟುಂಬಕ್ಕೆ “ಏಕೈಕ ಆಧಾರಸ್ತಂಭ” ಆಗಿದ್ದರು ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯವು, ಈ ಕೃತ್ಯಕ್ಕೆ ಯಾವುದೇ ರೀತಿಯ “ಕರುಣೆ ತೋರಲು ಸಾಧ್ಯವಿಲ್ಲ” ಎಂದು ಕಟುವಾಗಿ ನುಡಿದಿತ್ತು.
ಇದನ್ನು ಓದಿದ್ದೀರಾ? ಉನ್ನಾಂವ್ ಸಂತ್ರಸ್ತೆ ವಿರುದ್ಧ ದೌರ್ಜನ್ಯದ ಮೇಲೆ ದೌರ್ಜನ್ಯ! ದೇಶ ಒಂದಾಗಿ ನಿಲ್ಲಬೇಕಿದೆ ಆಕೆಯ ಹಿಂದೆ
ಸೆಂಗಾರ್ ಅವರಲ್ಲದೆ, ಅವರ ಸಹೋದರ ಅತುಲ್ ಸಿಂಗ್ ಸೆಂಗಾರ್ ಮತ್ತು ಇತರ ಐವರು ಆರೋಪಿಗಳಿಗೂ ಈ ಕಸ್ಟಡಿ ಸಾವಿನ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
2017ರಲ್ಲಿ ಸೆಂಗರ್ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆಯನ್ನು ಸೆಂಗರ್ ಅವರ ಕುಮ್ಮಕ್ಕಿನ ಮೇರೆಗೆ ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. 2018ರ ಏಪ್ರಿಲ್ 9ರಂದು ಅವರು ಪೊಲೀಸ್ ಕಸ್ಟಡಿಯಲ್ಲಿಯೇ ಮೃತಪಟ್ಟಿದ್ದರು. ಪೊಲೀಸ್ ಕಸ್ಟಡಿಯಲ್ಲಿ ನಡೆದ ದೌರ್ಜನ್ಯ ಮತ್ತು ಹಲ್ಲೆಯಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ತನಿಖೆಯಿಂದ ದೃಢಪಟ್ಟಿತ್ತು.
.





