ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣವನ್ನು ಉಲ್ಲೇಖಿಸಿದ ದೆಹಲಿ ಹೈಕೋರ್ಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ. ‘ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ’ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ನೇತೃತ್ವದ ದ್ವಿಸದಸ್ಯ ಪೀಠವು, ‘ಈ ಘಟನೆಯಿಂದ ವಕೀಲರ ಸಂಘದ ಸದಸ್ಯರಿಗೆ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರಿಗೂ ನೋವು ಉಂಟಾಗಿದೆ’ ಎಂದು ತಿಳಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ
ಶೂ ಎಸೆದ ಪ್ರಕರಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವುಗಳನ್ನು ತೆಗೆದುಹಾಕಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜಿಕ ಹಿಸಾಸಕ್ತಿ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು.
ಅಕ್ಟೋಬರ್ 6ರಂದು ವಕೀಲ ರಾಕೇಶ್ ಕಿಶೋರ್ ಸಿಜೆಐ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಹರಡಿತ್ತು. ಇದನ್ನು ತಡೆಯಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಘಟನೆ ಬೆನ್ನಲ್ಲೇ ಆರೋಪಿ ವಕೀಲರ ಪರವಾನಗಿಯನ್ನು ತಕ್ಷಣ ಅಮಾನತುಗೊಳಿಸಲಾಗಿದೆ.
ಈ ಪ್ರಕರಣವು ನ್ಯಾಯಾಂಗ ವ್ಯವಸ್ಥೆಯ ಗೌರವ ಮತ್ತು ಭದ್ರತೆಯ ಮೇಲೆ ಪ್ರಶ್ನೆ ಎಬ್ಬಿಸಿದೆ. ನ್ಯಾಯಾಧೀಶರ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕು ಎಂಬ ಒತ್ತಡವನ್ನು ಸೃಷ್ಟಿಸಿದೆ. ಸುಪ್ರೀಂ ಕೋರ್ಟ್ ಮತ್ತು ಬಾರ್ ಕೌನ್ಸಿಲ್ ಸಹ ಈ ವಿಷಯದಲ್ಲಿ ಸಕ್ರಿಯವಾಗಿ ಕ್ರಮ ಕೈಗೊಳ್ಳಬೇಕಿದೆ. ಇಂತಹ ಘಟನೆಗಳು ನ್ಯಾಯಾಲಯದ ಪವಿತ್ರತೆಗೆ ಧಕ್ಕೆ ತರುತ್ತವೆ ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿದೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ತಡೆಯಲು ತಾಂತ್ರಿಕ ಮತ್ತು ಭೌತಿಕ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.





