ದೆಹಲಿಯಲ್ಲಿ 2026ರ ಫೆಬ್ರವರಿ 16 ರಿಂದ 20ರವರೆಗೆ ‘ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್-2026’ (India AI Impact Summit 2026) ಎಂಬ ಅಂತಾರಾಷ್ಟ್ರೀಯ AI ಶಿಖರ ಸಮ್ಮೇಳನ ನಡೆಯಲಿದೆ. ಭಾರತದ ಇತಿಹಾಸದಲ್ಲೇ ಅತಿ ದೊಡ್ಡ AI ಸಮ್ಮೇಳನವೆಂದೂ ಪರಿಗಣಿಸಲಾಗಿದೆ. ಈ ಸಮ್ಮಿಟ್‌ನಲ್ಲಿ ಅಂತಾರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆ. ಈ ಸಂದರ್ಭವನ್ನು ಬಳಸಿಕೊಳ್ಳಲು ಮುಂದಾಗಿರುವ ಹೋಟೆಲ್ ಉದ್ಯಮಗಳು ದುಪ್ಪಟ್ಟು ಹಣ ಗಳಿಕೆಗೆ ಬಂದಾಗಿವೆ. ಪಂಚತಾರಾ (ಫೈವ್ ಸ್ಟಾರ್) ಹೋಟೆಲ್‌ಗಳ ಕೊಠಡಿಗಳ ಬಾಡಿಗೆಗಳು 10ರಿಂದ 12 ಪಟ್ಟು ಹೆಚ್ಚಾಗಿವೆ.
ಸಮ್ಮೇಳನದಲ್ಲಿ ಸುಂದರ್ ಪಿಚೈ (ಗೂಗಲ್ ಸಿಇಒ), ಬಿಲ್ ಗೇಟ್ಸ್, ಸ್ಯಾಮ್ ಆಲ್ಟ್‌ಮನ್ (ಓಪನ್‌ಎಐ), ಜೆನ್ಸನ್ ಹುವಾಂಗ್ (ಎನ್‌ವಿಡಿಯಾ), ಆರ್ಥರ್ ಮೆನ್ಷ್ (ಮಿಸ್ಟ್ರಲ್ AI) ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ 35,000ಕ್ಕೂ ಅಧಿಕ ಪ್ರಮುಖ ಟೆಕ್ ನಾಯಕರು, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದು ಭಾರತವನ್ನು ಜಾಗತಿಕ AI ನಾಯಕತ್ವದ ಕೇಂದ್ರವನ್ನಾಗಿ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಬೃಹತ್ ಸಮ್ಮೇಳನವನ್ನು ದೆಹಲಿಯ ಹೋಟೆಲ್ ಉದ್ಯಮಗಳಿಗೆ ಅಕ್ಷಯ ಪಾತ್ರೆಯನ್ನಾಗಿ ನೋಡುತ್ತಿವೆ. ಕೊಠಡಿ ಬಾಡಿಗೆಗಳನ್ನು ಮನಸೋಯಿಚ್ಛೆ ಹೆಚ್ಚಿಸಿವೆ. ಪಂಚತಾರಾ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ, ಒಂದು ದಿನಕ್ಕೆ 20,000ರಿಂದ 40,000 ರೂ. ಇದ್ದ ಸಾಧಾರಣ ಕೊಠಡಿಗಳ ಬಾಡಿಗೆ ಈಗ, 50,000 ರೂ.ಗಳಿಂದ 25 ಲಕ್ಷ ರೂ.ಗಳವರೆಗೆ ಏರಿಕೆಯಾಗಿದೆ.
* ತಾಜ್ ಪ್ಯಾಲೇಸ್ನಲ್ಲಿ ಪ್ರೆಸಿಡೆನ್ಷಿಯಲ್ ಸೂಟ್ ಸಾಮಾನ್ಯವಾಗಿ ₹2.37 ಲಕ್ಷ ಇದ್ದರೆ, ಸಮ್ಮೇಳನದ ಸಮಯದಲ್ಲಿ 30 ಲಕ್ಷ ರೂ.ಗೆ ಏರಿಕೆಯಾಗಿದೆ.
* ದಿ ಒಬೆರಾಯ್ನ ಲಕ್ಸರಿ ಸೂಟ್‌ಗಳು ಸಾಮಾನ್ಯವಾಗಿ 4 ಲಕ್ಷ ರೂ. ಇದ್ದರೆ, ಈಗ 25 ಲಕ್ಷ ರೂ.ಗೆ ಏರಿದೆ.
* ದಿ ಲೀಲಾ ಪ್ಯಾಲೇಸ್, ಐಟಿಸಿ ಮೌರ್ಯ, ದಿ ಇಂಪೀರಿಯಲ್ ಮುಂತಾದ ಹೋಟೆಲ್‌ಗಳಲ್ಲಿಯೂ ಸಾಧಾರಣ ಕೊಠಡಿಗಳು 1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಏರಿವೆ.
ಈ ಲೇಖನ ಓದಿದ್ದೀರಾ?: ಮೇಡಿಹಾಳ ಗ್ರಾಮದಲ್ಲಿ ಅವೈಜ್ಞಾನಿಕ ಗಣಿಗಾರಿಕೆ: ರೈತರ ಬೆಳೆ-ಮನೆಗಳಿಗೆ ಕಲ್ಲಿನ ಮಳೆ, ಧೂಳಿನ ಪರದೆ
ಈ ದರ ಏರಿಕೆಯು ಸಮ್ಮೇಳನದ ಸಮಯದಲ್ಲಿ (ವಿಶೇಷವಾಗಿ ಫೆಬ್ರವರಿ 18-20) ಅತಿ ಹೆಚ್ಚಾಗಿದ್ದು, ಸಾಮಾನ್ಯ ದಿನಗಳಿಗೆ ಹೋಲಿಸಿದರೆ 6ರಿಂದ 15 ಪಟ್ಟು ಹೆಚ್ಚಳ ಕಂಡುಬಂದಿದೆ. ಟ್ರಾವೆಲ್ ಪೋರ್ಟಲ್‌ಗಳಾದ ಮೇಕ್‌ಮೈಟ್ರಿಪ್, ಇಕ್ಸಿಗೋ ಮುಂತಾದವುಗಳಲ್ಲಿ ಈ ದರಗಳು ಪ್ರತಿಬಿಂಬಿಸುತ್ತಿವೆ.
ಈ ಭರ್ಜರಿ ಏರಿಕೆಯು ಹೋಟೆಲ್‌ಗಳಿಗೆ ದೊಡ್ಡ ಲಾಭ ತರುತ್ತಿದ್ದರೂ, ಸಾಮಾನ್ಯ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಆಘಾತಕಾರಿಯಾಗಿದೆ. ಕೆಲವರು ಹೋಟೆಲ್ ದರಗಳ ಮೇಲೆ ಮಿತಿ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ.




