ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡಲಾಗುತ್ತಿರುವ ವೇತನದಲ್ಲಿನ ತಾರತಮ್ಯದ ವಿರುದ್ಧ ತಮಿಳುನಾಡಿನ ಶಾಲಾ ಶಿಕ್ಷಕರು ಬೀದಿಗಿಳಿದಿದ್ದಾರೆ. ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡಬೇಕೆಂದು ಅಗ್ರಹಿಸಿ ನಡೆಯುತ್ತಿರುವ ಶಿಕ್ಷಕರ ಹೋರಾಟವು 11ನೇ ದಿನಕ್ಕೆ ಕಾಲಿಟ್ಟಿದೆ.
ಈ ನಡುವೆ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿಭಟನಾನಿರತ ‘ಮಾಧ್ಯಮಿಕ ದರ್ಜೆಯ ಹಿರಿಯ ಶ್ರೇಣಿ ಶಿಕ್ಷಕರ ಸಂಘ’ದ (ಎಸ್‌ಎಸ್‌ಟಿಎ) ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಆದಾಗ್ಯೂ, ಪ್ರತಿಭಟನೆಯನ್ನು ಮುಂದುವರೆಸಿರುವ ಶಿಕ್ಷಕರು, “ಎರಡು ದಿನಗಳಲ್ಲಿ ಬೇಡಿಕೆಗಳನ್ನು ಈಡೇರಿಸಬೇಕು. ಮುಖ್ಯವಾಗಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ದ ಬೇಡಿಕೆಯನ್ನು ಅನುಷ್ಠಾನಕ್ಕೆ ತರಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರೆಯುತ್ತದೆ” ಎಂದು ಹೇಳಿದ್ದಾರೆ.
ಅರ್ಧವಾರ್ಷಿಕ ರಜೆಗಳು ಮುಗಿದಿದ್ದು, ಶಾಲೆಗಳು ತೆರೆದಿವೆ. ಶಿಕ್ಷಕರು ಪ್ರತಿಭಟನೆಯಲ್ಲಿದ್ದಾರೆ. 10,000 ಕ್ಕೂ ಹೆಚ್ಚು ಶಿಕ್ಷಕರು ಶಾಲೆಗಳಿಗೆ ಹಾಜರಾಗಲಿಲ್ಲ. ಸರ್ಕಾರವು ನಮ್ಮ ಬೇಡಿಕೆಯನ್ನು ತ್ವರಿತವಾಗಿ ಪೂರೈಸಬೇಕು. ಇಲ್ಲವಾದಲ್ಲಿ, ಶಾಲೆಗಳ ಕಾರ್ಯಾಚರಣೆಗೆ ತೊಡಲಾಗಲಿದೆ ಎಂದು ಶಿಕ್ಷಕರ ಸಂಘವು ಹೇಳಿದೆ.
ಶಿಕ್ಷಕರು ಹೇಳುವಂತೆ; 2009ರ ಜೂನ್ 1ಕ್ಕೂ ಮೊದಲ ನೇಮಕಕೊಂಡ ಮಾಧ್ಯಮಿಕ ಶ್ರೇಣಿಯ ಶಿಕ್ಷಕರಿಗೆ 8,370 ರೂ. ಮೂಲ ವೇತನವನ್ನು ನೀಡಲಾಗಿದೆ. ಆದರೆ, ಆ ಕಟ್-ಆಫ್ ದಿನ (2009ರ ಜೂನ್) ನಂತರ ನೇಮಕಗೊಂಡ ಶಿಕ್ಷಕರು ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ, ಅವರಿಗೆ ಕೇವಲ 5,200 ರೂ. ಮಾತ್ರವೇ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಮಾಧ್ಯಮಿಕ ಶ್ರೇಣಿಯ ಶಿಕ್ಷಕರಿಗೆ ಅತ್ಯಂತ ಕಡಿಮೆ ವೇತನ ನೀಡುವ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದಾಗಿದೆ.




