ಒಡಿಶಾದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳು ಏಕಕಾಲದಲ್ಲೇ ನಡೆದಿದ್ದು, ಇಂದು ಎರಡು ಚುನಾವಣೆಗಳ ಮತ ಎಣಿಕೆ ನಡೆಯುತ್ತಿದೆ. ರಾಜ್ಯದ 147 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ 21 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಸದ್ಯ, ವಿಧಾನಸಭೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಬಿಜೆಡಿ ಹಿನ್ನಡೆ ಅನುಭವಿಸುತ್ತಿದೆ.
ಒಡಿಶಾದಲ್ಲಿ ಆಡಳಿತಾರೂಢ ಬಿಜೆಡಿಗೆ ಭಾರೀ ಹಿನ್ನಡೆಯಾಗಿದೆ. 147 ಸದಸ್ಯ ಬಲದ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 34ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತಾರೂಢ ಬಿಜೆಡಿ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಮೂಲಕ ಸೋಲಿನ ಭೀತಿ ಎದುರಿಸುತ್ತಿದೆ. ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವಿನ ಹಾದಿಯಲ್ಲಿದೆ. ಸಿಪಿಎಂ ಪಕ್ಷ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಘಾಸಿಪುರದಲ್ಲಿ ಸ್ವತಂತ್ರ ಅಭ್ಯರ್ಥಿ ಸೌಮ್ಯ ರಂಜನ್ ಪಟ್ನಾಯಕ್ ಕೂಡ ಮುಂದಿದ್ದಾರೆ. ಬಿಜೆಪಿ-ಟಿಡಿಪಿ ಮೈತ್ರಿಯು ಅಂಚೆ ಮತಪತ್ರ ಮತಗಳಲ್ಲಿ ಮುನ್ನಡೆ ಸಾಧಿಸಿದೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿಯ ಭದ್ರಕೋಟೆಯಾಗಿದ್ದು, ಬಿಜೆಪಿಯು ವಿಧಾನಸಭೆ ಚುನಾವಣೆಗಳಲ್ಲಿ ಗಮನಾರ್ಹ ಲಾಭವನ್ನು ಗಳಿಸಲು ಪ್ರಯತ್ನಿಸುತ್ತಿರುವುದರಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಈ ಬಾರಿ ಒಡಿಶಾದಲ್ಲಿ ನವೀನ್ ಪಟ್ನಾಯಕ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಸಮೀಕ್ಷೆಗಳು ಹೇಳಿವೆ.
ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ, ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 62 ರಿಂದ 80 ಸ್ಥಾನ ಪಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 50ರಿಂದ 60 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಜೆಪಿ ಭದ್ರಕೋಟೆಗಳನ್ನು ಭೇದಿಸುವುದೇ ಕಾಂಗ್ರೆಸ್?
ಕಾಂಗ್ರೆಸ್ ಪಕ್ಷ 5ರಿಂದ 8 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ. ಬಿಜೆಪಿಯ ಮತ ಪ್ರಮಾಣ ಶೇ.42ರಷ್ಟು ಹೆಚ್ಚಳವಾಗಲಿದ್ದು, ಬಿಜೆಡಿ ಮತ ಪ್ರಮಾಣ ಶೇ.42ರಷ್ಟು ಕುಸಿಯಲಿದ್ದು, ಕಾಂಗ್ರೆಸ್ ಕೇವಲ ಶೇ.12ರಷ್ಟು ಮತ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
2019ರ ಒಡಿಶಾ ವಿಧಾನಸಭಾ ಚುನಾವಣೆ
2019ರಲ್ಲಿ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾ ದಳ 147 ಸದಸ್ಯಬಲದಲ್ಲಿ 112 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 23 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 9 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. 2024ರ ಲೋಕಸಭೆ ಚುನಾವಣೆ ಹಾಗೂ ಒಡಿಶಾ ವಿಧಾನಸಭೆ ಚುನಾವಣಾ ಫಲಿತಾಂಶ ಜೂನ್ 4ರಂದು ಬಹಿರಂಗವಾಗಲಿದೆ.




