ಸದ್ಯ, ಮನುಷ್ಯ ತನ್ನದೇ ಸ್ವತ್ತು ಎಂದು ಭಾವಿಸಿರುವ, ತನಗಿಷ್ಟ ಬಂದಂತೆ ಬಳಿಸಿಕೊಳ್ಳುತ್ತಿರುವ ಭೂಮಿಗೆ 4.5 ಶತಕೋಟಿ ವರ್ಷ ವಯಸ್ಸು. ಭೂಮಿ ಈಗ ಯೌವನಾವಸ್ಥೆಯಲ್ಲಿದೆ ಎಂದು ಅಂದಾಜಿಸಲಾಗಿದೆ. ಈ ಭೂಮಿ ಇಂದು ನಮ್ಮೆದುರಿಗೆ ಕಾಣುತ್ತಿರುವಂತೆ ಉದ್ಭವಿಸಿದ್ದಲ್ಲ. ಅಥವಾ ಯಾವುದೇವೊಂದು ಆಘಾದವಾದ ಶಕ್ತಿ ಸೌರಮಂಡಲದಲ್ಲಿ ಭೂಮಿಯನ್ನು ತಂದಿಡಲಿಲ್ಲ ಅಥವಾ ಸೃಷ್ಠಿಸಲಿಲ್ಲ. ಭೂಮಿಯ ರಚನೆಗೆ ಅದರದ್ದೇ ಆದ ವೈಜ್ಞಾನಿಕ ಇತಿಹಾಸವಿದೆ.
ಉರಿಯುವ ಉಂಡೆಯಾಗಿದ್ದ ಭೂಮಿ ಒಂದು ಹಂತದಲ್ಲಿ ತಣ್ಣಗಾಗಿ ಉಂಡೆಯಾಗಿತ್ತು. ಬಳಿಕ, ಭೂಮಿಯ ಮೇಲೆ ಮಳೆ ಬೀಳಲಾರಂಭಿಸಿತು. ಸಸ್ಯಗಳು ಹುಟ್ಟಿಕೊಂಡವು, ನೀರು ಒಂದೆಡೆ ಸಂಗ್ರಹಗೊಂಡು, ನೀರಿನಾಳದಲ್ಲಿ ಜೀವಚರಗಳು ಸೃಷ್ಠಿಯಾದವು. ಜ್ವಾಲಾಮುಖಿ ಸ್ಪೋಟಿಸಿದವು. ಯುಗಕ್ಕೆ ತಂಕ್ಕಂತೆ ಭೂಮಿ ಬದಲಾಗತೊಡಗಿತು. ಭೂಮಿಯ ವಾತಾವರಣಕ್ಕೆ ಅನುಗುಣವಾಗಿ ಜೀವಿಗಳು ಸೃಷ್ಠಿಯಾದವು, ಬೆಳೆದವು. ನಾಶವಾದವು. ಇದೀಗ, ಈ ಭೂಮಿ ಮನುಷ್ಯನ ಆಕ್ರಮಣ, ದುರಾಸೆಗೆ ತುತ್ತಾಗುತ್ತಿದೆ. ಇದೆಲ್ಲವೂ ಒಂದೆರಡು ದಿನಗಳಲ್ಲಿ ಘಟಿಸಿದ್ದಲ್ಲ. ಇದೆಲ್ಲದಕ್ಕೂ ಭೂಮಿ ತೆಗೆದುಕೊಂಡಿದ್ದು, ಬರೋಬ್ಬರಿ 4.5 ಶತಕೋಟಿ ವರ್ಷಗಳು.
ಇಷ್ಟೊಂದು ವರ್ಷಗಳಲ್ಲಿ ನಾನಾ ರೀತಿಯಲ್ಲಿ ರೂಪುಗೊಂಡಿರುವ ಭೂಮಿ, ಇದೀಗ ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ನಾಶವಾಗಿ, ಇಲ್ಲವಾಗಿಬಿಡುವುದಿಲ್ಲ. ಇಡೀ ಭೂಮಿ ಒಂದು ದಿನ ಪ್ರಳಯದಿಂದ ಕಾಣೆಯಾಗಿಬಿಡುವುದಿಲ್ಲ. ಇದೆಲ್ಲವನ್ನೂ ಯಾಕೆ ಹೇಳುತ್ತಿದ್ದೇನೆಂದರೆ, ಕೆಲವರು ಅದರಲ್ಲೂ ಕವಡೆ ಮಣಿಯಲ್ಲಿ ಭವಿಷ್ಯ ಹೇಳುವವರು ಆಗ್ಗಾಗೆ ಭೂಮಿ ಈ ವರ್ಷ ನಾಶವಾಗಿಬಿಡುತ್ತದೆ, ಭೂಮಿ ಮೇಲೆ ಇಂತದ್ದೊಂದು ವರ್ಷ ಪ್ರಯಳವಾಗಿ ಬಿಡುತ್ತದ ಎಂದು ಹೇಳುತ್ತಲೇ ಇದ್ದಾರೆ.
ನೈಸರ್ಗಿಕವಾಗಿ ನಡೆಯುವ ಈ ಪ್ರಕ್ರಿಯೆಗೆ ಭೂಮಿ ತನ್ನ ಚಲನೆಯನ್ನು ಈಗಲೇ ನಿಲ್ಲಿಸುತ್ತದೆ ಎಂದು ಹೇಳುವ ಯಾವುದೇ ಶಕ್ತಿಯೂ ಮಾನವನಲ್ಲಿ ಇಲ್ಲ. ಆದರೆ, ಹಲವು ಸ್ವಾಮೀಜಿ, ತತ್ವಜ್ಞಾನಿ ಎಂದು ತಮ್ಮನ್ನೇ ತಾವು ಕರೆದುಕೊಳ್ಳುವವರು ಭೂಮಿ ತನ್ನ ಚಲನೆಯನ್ನು ಮುಂದಿನ ವರ್ಷ ನಿಲ್ಲಿಸುತ್ತದೆ. ನಾಳೆಯೇ ಪ್ರಳಯ ಉಂಟಾಗುತ್ತದೆ. ಇಡೀ ಜೀವ ಸಂಕುಲ ನಾಶವಾಗುತ್ತದೆ ಎಂದು ಜನರನ್ನು ಭಯದಲ್ಲಿ ಮುಳುಗಿಸುವಂತಹ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಾರೆ. ಇಂತಹ ಹಲವಾರು ಸುಳ್ಳು ವದಂತಿಗಳು ಈ ಕಳೆದ ಹಲವು ವರ್ಷಗಳಿಂದ ಹಬ್ಬುತ್ತಾನೇ ಬಂದಿದೆ. ಈ ಹಲವು ಬಾಬಾ, ಸ್ವಾಮೀಜಿಗಳು ನುಡಿದ ಭವಿಷ್ಯಗಳು ಸುಳ್ಳಾಗಿರುವ ನಿದರ್ಶನಗಳು ನಮ್ಮ ಮುಂದೆ ಇದ್ದರು ಕೂಡ ಜನರು ಸ್ವಾಮಿಜೀಗಳ ಮಾತಿಗೆ ಸೊಪ್ಪು ಹಾಕುವುದು ಮಾತ್ರ ನಿಂತಿಲ್ಲ.
ಭೂಮಿಯ ಈ ಪ್ರಕ್ರಿಯೆ ನೈಸರ್ಗಿಕವಾಗಿ ನಡೆಯುತ್ತದೆ. ಭೂಮಿಯ ತನ್ನ ಚಲನೆಯನ್ನು ನಿಲ್ಲಿಸುತ್ತದೆ, ಪ್ರಳಯವಾಗುತ್ತದೆ ಎಂದು ಹೇಳುವ ಯಾವುದೇ ಶಕ್ತಿಯೂ ಹುಲು ಮಾನವರಿಗಿಲ್ಲ. ಆದರೆ, ಈ ಜ್ಯೋತಿಷಿಗಳು ಮತ್ತು ಕೆಲವು ಬಾಬಾಗಳು ವಿಶ್ವದ ಕತೆ ಮುಗಿಯಿತು, ಪ್ರಳಯ ಖಚಿತ ಎಂದೆಲ್ಲ ಹೇಳುತ್ತಿರುತ್ತಾರೆ. ಅಲ್ಲದೇ, ಪ್ರಳಯದ ದಿನಾಂಕಗಳನ್ನೂ ಕೂಡ ಅವರೇ ಘೋಷಣೆ ಮಾಡಿಬಿಡುತ್ತಾರೆ. ಈ ಪ್ರಳಯದ ಮಾತು ಮೊದಲು ಕೇಳಿಬಂದಿದ್ದು, 1910ರಲ್ಲಿ. 1910ರಲ್ಲಿ ಕಾಣಿಸಿಕೊಳ್ಳುವ ಹ್ಯಾಲಿ ಧೂಮಕೇತುವಿನ ಬಾಲದಿಂದ ಬರುವ ವಿಷಾನಿಲದಿಂದಾಗಿ ಭೂಮಿ ಪ್ರಳಯವಾಗುತ್ತದೆ ಎಂದು ಎಲ್ಲೆಡೆ ಪ್ರಚಾರ ಮಾಡಲಾಯಿತು. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಜಗತ್ತಿನ ಅನೇಕ ದಿನಪತ್ರಿಕೆಗಳಲ್ಲಿ ಇದೇ ಬಹುದೊಡ್ಡ ಸುದ್ದಿಯಾಗಿತ್ತು. ಜನರೂ ಆತಂಕಗೊಂಡಿದ್ದರು. ಆದರೆ, 1910ರಲ್ಲಿ ಆಗಸದಲ್ಲಿ ಹ್ಯಾಲಿ ಏನೋ ಬಂತು. ಆದರೆ, ವಿಷಾನಿಲ ಬಾರದೆ ಜನರೆಲ್ಲಾ ಉಳಿದುಕೊಂಡರು.
1961ರಲ್ಲಿ ಜ್ಯೋತಿಷಿಗಳು ನುಡಿದ ಅಷ್ಟಗ್ರಹ ಕೂಟದ ಭವಿಷ್ಯ ಸಂಪ್ರದಾಯವಾದಿಗಳಲ್ಲಿ ಆತಂಕದ ಬೀಜವನ್ನು ಬಿತ್ತಿತ್ತು. ಒಟ್ಟು 8 ಗ್ರಹಗಳು ಮಕರ ರಾಶಿಯಲ್ಲಿ ಒಂದೇ ಸಾಲಿನಲ್ಲಿದ್ದಾಗ ಪ್ರಳಯ ಸಂಭವಿಸಲಿದೆ ಎಂದು ಹೇಳಲಾಯಿತು. ಇದಕ್ಕೆ ಸ್ವತಃ ಅಂದಿನ ಪ್ರಧಾನಿ ಪಂಡಿತ ಜವಹರಲಾಲ್ ನೆಹರೂ ಅವರು ಇವುಗಳನ್ನು ನಂಬದಿರಿ ಎಂದು ಹೇಳಿದ್ದನ್ನು ನಂಬದ ಅಂದಿನ ಜನತೆ ಹೋಮ-ಹವನ, ಯಜ್ಞ-ಯಾಗಾದಿಗಳು, ವಿಶೇಷ ಪೂಜೆ ಪುನಸ್ಕಾರಗಳನ್ನು ಕೈಗೊಂಡರು. ಆದರೆ, ಇದರಿಂದ ಒಳ್ಳೆಯ ಫಸಲು ತೆಗೆದದ್ದು ಮಾತ್ರ ಡೋಂಗಿ ಪುರೋಹಿತರು.
ಇನ್ನು 1997ರಲ್ಲಿ ಹೇಲ್ಬಾಪ್ ಎಂಬ ಧೂಮಕೇತು ಭೂಮಿಗೆ ಬರಲಿದೆ ಎಂಬುದನ್ನು ವಿಜ್ಞಾನಿಗಳು ಖಚಿತವಾಗಿ ಹೇಳಿದ್ದರು. ಆದರೆ, ಕೆಲವು ಸಂಪ್ರದಾಯವಾದಿಗಳು ಹಾಗೂ ಬುದ್ಧಿ ಹೀನರು, ಆ ಧೂಮಕೇತುವಿನ ಹಿಂದೆಯೇ ಅವಿತಿಟ್ಟುಕೊಂಡು ಹಾರುವ ತಟ್ಟೆಯೂ ಬರಲಿದೆ. ಇದು ಪ್ರಳಯ ಉಂಟು ಮಾಡಲಿದೆ ಎಂದು ಜನರಲ್ಲಿ ಭಯ ಹುಟ್ಟಿಸಿದರು. ಇದು ಅಮೆರಿಕದಲ್ಲಿ ಸಾಕಷ್ಟು ಭೀತಿ ಜತೆಗೆ ಸಮೂಹ ಸನ್ನಿಗೂ ಕಾರಣವಾಗಿತ್ತು. ಅಲ್ಲದೇ, 39 ಜನರು ಈ ಧೂಮಕೇತು ಕಾಣಿಸಿಕೊಂಡ ದಿನ ಧೂಮಕೇತು ಜತೆಗೆ ಬರುವ ಹಾರುವ ತಟ್ಟೆಯೊಂದಿಗೆ ತಮ್ಮ ಆತ್ಮಗಳು ಪರಲೋಕಕ್ಕೆ ಹೋಗಲಿ ಎಂದು ಅಮೆರಿಕದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಧೂಮಕೇತು ಏನೋ ತನ್ನ ಪಾಡಿಗೆ ತಾನು ಕಾಣಿಸಿಕೊಂಡು ಮುಂದೆ ಸಾಗಿತು. ಆದರೆ ಹಾರುವ ತಟ್ಟೆ ಬರಲೇ ಇಲ್ಲ.
ಇನ್ನು 1999ರ ಅಂತ್ಯದ ಜತೆಗೆ ಜಗತ್ತು ಕೂಡಾ ಅಂತ್ಯವಾಗುತ್ತದೆ. ಯಾಕಂದ್ರೆ 1999 ನಂತರ ಬರುವ 2000ನೇ ವರ್ಷದಲ್ಲಿ ಮೂರು ಸೊನ್ನೆಗಳಿವೆ. ಈ ಎರಡು ಸಾವಿರದಲ್ಲಿನ ಮೂರು ಸೊನ್ನೆಗಳು ಭೂಮಿ ಅಂತ್ಯವಾಗಲು ಕಾರಣ ಎಂದು ಎಲ್ಲೆಡೆ ಜನರಲ್ಲಿ ಭಯವನ್ನು ಹುಟ್ಟಿಸಲಾಗಿತ್ತು. ಅಲ್ಲದೇ, 2000ದ ಇಸವಿಯಲ್ಲಿ ಧ್ರುವಗಳು ಕರಗಲಿದ್ದು, ಸಮುದ್ರದ ಮಟ್ಟ ಏರಿ ಭೂಮಿ ಎಲ್ಲ ಅದರಲ್ಲಿ ಮುಳುಗಲಿದೆ ಎಂದು ಮಾಸಿಕ ಪತ್ರಿಕೆಗಳು ವರದಿಗಳನ್ನು ಪ್ರಕಟಿಸಿ ಜನರಲ್ಲಿ ಭೀತಿ ಮೂಡಿಸಿತ್ತು. ಆದರೆ, ಇದೀಗ ನಾವು ಆ 2000ನೇ ಇಸವಿಯನ್ನು ದಾಟಿ ನಿಮ್ಮ ಮುಂದೆ ಬಂದಿದ್ದೀವಿ.
ಈ 2000ನೇ ಇಸವಿಯಲ್ಲಿ ನುಡಿದ ಭವಿಷ್ಯ ಸುಳ್ಳಾದ ಕಾರಣ ಮಾಡೋಕೆ ಕೆಲಸ ಇಲ್ಲದ ಕೆಲವು ಜೋತೀಷ್ಯಗಳು ಖಾಲಿಯಾದ ಅವರ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲೆಂದೇ ಇರುವ ಸತ್ಯವನ್ನು ಮರೆಮಾಚಿ ಜನರಲ್ಲಿ 2012 ಡಿಸೆಂಬರ್ 21 ತಾರೀಖನ್ನು ಜನರಲ್ಲಿ ಅಚ್ಚು ಮೂಡುವಂತೆ ಮಾಡಿದರು. 2012 ಡಿಸೆಂಬರ್ 21 ದಿನ ಬಂತೆಂದರೇ ಸಾಕು ಇಡೀ ಜಗತ್ತು ಪ್ರಳಯ ಆಗುತ್ತೇ. ಭೂಮಿನಲ್ಲಿ ಒಂದೇ ಒಂದು ಜೀವಿನೂ ಕೂಡ ಬದುಕುವುದಿಲ್ಲ ಎಂದು ಪ್ರಚಾರ ಮಾಡಲಾಗಿತ್ತು. ಇದಕ್ಕೆ ಆಧಾರವಾಗಿ ಮಾಯನ್ ಕ್ಯಾಲೆಂಡರ್ ಇಟ್ಟುಕೊಂಡು ಸುಳ್ಳು ಸುದ್ದಿ ಹಬ್ಬಿಸಿದ್ದರು.
ಮಹಾಪ್ರಳಯದ ಆತಂಕದಲ್ಲಿದ್ದ ಜಗತ್ತಿಗೆ ನಾಸಾ ವಿಜ್ಞಾನಿಗಳು ಸಮಾಧಾನಕರ ಸಂದೇಶ ನೀಡಿದರು ಕೂಡ ತಿಳಿಗೇಡಿ ಜನರು ಜ್ಯೋತೀಷಿಗಳು ಹೇಳಿದ್ದ ನಂಬಿದ್ದರು. ಹಲವು ಜನ ಇನ್ನೇನು ಜಗತ್ತೇ ಅಂತ್ಯ ಕಾಣುತ್ತೆ ಎಂದು ಮೈ ತುಂಬಾ ಸಾಲ ಮಾಡಿಕೊಂಡು ಇರೋವಷ್ಟು ದಿನ ಖುಷಿಯಾಗಿರೋಣ ಎಂದುಕೊಂಡರು. ಇನ್ನು ಕೆಲವು ಜನ ದೇವರ ಮೋರೆ ಹೋದರು. ಹೋಮ ಹವನ ಮಾಡಿದರು. ಮಹಾಪ್ರಳಯ ಸಂಭವಿಸುತ್ತದೆ ಎಂದು ಇಂಟರ್ನೆಟ್ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಭೀತಿಯ ವಾತಾವರಣ ಸೃಷ್ಟಿ ಮಾಡಲಾಗಿತ್ತು.
ಅಮೆರಿಕದ ಪುರಾತನ ನಾಗರಿಕತೆ ಮಾಯನ್ ಜನರು ರೂಪಿಸಿರುವ ಚಕ್ರಾಕಾರದ ಕ್ಯಾಲೆಂಡರ್ನಲ್ಲಿ ದಿನ ಕೊನೆಗೊಳ್ಳುವುದು ಡಿಸೆಂಬರ್ 21, 2012ಕ್ಕೆ ಎಂದಷ್ಟೆ ಅವರೇನೂ ಎಲ್ಲೂ ಪ್ರಳಯವಾಗಲಿದೆ ಎಂದು ಬರೆದಿಲ್ಲ. ಡಿಸೆಂಬರ್ 31 ಕೊನೆಗೊಂಡ ನಂತರ ಜನವರಿ 1 ಮತ್ತೆ ಬರುವಂತೆ ಕ್ಯಾಲೆಂಡರ್ನ ದಿನಗಳು ಮತ್ತೆ ಪುನರಾವರ್ತನೆ ಆಗಲಿವೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದೆ ಜಗತ್ತು ಪ್ರಳಯವಾಗಲಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ನಂಬಿಸಿದ್ದಾರೆ. ಅದನ್ನ ನಂಬಿದ್ದ ಜನ ಮರಳು ಹೋಗಿದ್ದಾರೆ ಎಂದು 2024ರ ಜುಲೈ ತಿಂಗಳಿನಲ್ಲಿ ಈ ಬಗ್ಗೆ ನಾವು ಇಲ್ಲಿ ಕೂತು ವರದಿ ಮಾಡುತ್ತಿರುವುದೇ ಸಾಕ್ಷಿ.
ಪ್ರಳಯ ಆಗುತ್ತೇ, ಭೂಮಿ ನಾಶ ಆಗುತ್ತೆ ಎಂದು ಹೇಳಿದ್ದು, ಅದು ಸುಳ್ಳಾಗಿರುವ ಹಲವಾರು ಪುರಾವೆಗಳು ನಮ್ಮ ಬಳಿ ಇದ್ದರೂ ಕೂಡ ಜನರು ಇದೀಗ ಬಾಬಾ ವಂಗಾ ಹೇಳಿರುವ ಭವಿಷ್ಯವಾಣಿಯ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಹೌದು, “2025ರಿಂದಲೇ ಈ ಪ್ರಪಂಚದಲ್ಲಿ ವಿನಾಶಕಾರಿ ಘಟನೆಗಳು ಆರಂಭವಾಗಲಿದ್ದು, ಇದು ಮಾನವೀಯತೆಯ ಅವನತಿಗೆ ಕಾರಣವಾಗುತ್ತದೆ. ಈ ವಿನಾಶವು ಮುಂದಿನ ವರ್ಷ ಅಂದರೆ, 2025ರಲ್ಲಿ ಯುರೋಪಿನ ಸಂಘರ್ಷದೊಂದಿಗೆ ಪ್ರಾರಂಭವಾಗಿ ಇಡೀ ಮಾನವ ಕುಲವೇ ನಾಶವಾಗುತ್ತಾ ಹೋಗಿ ಪ್ರಪಂಚವು 5079ರಲ್ಲಿ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ” ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಹಲವು ಜ್ಯೋತಿಷಿಗಳು ನುಡಿದಿರುವ ಭವಿಷ್ಯ ಅದು ಸತ್ಯಾನಾ ಸುಳ್ಳಾ ಎಂಬುದು ನಾವು ಬದುಕಿರುವ ಮೇಲೆಯೇ ಗೊತ್ತಾಗುತ್ತದೆ ಇದ್ದಕ್ಕಿಂತ ದೊಡ್ಡ ಸಾಕ್ಷಿ ಮತ್ತೊಂದು ಬೇಕಿಲ್ಲ. ಜನರು ಈ ರೀತಿ ಪ್ರಳಯ ವಿನಾಶ ಎಂಬ ಬಗ್ಗೆ ವಿಚಾರ ಮಾಡುವುದನ್ನು ಬಿಟ್ಟು ಭೂಮಿಯನ್ನು ಸಂರಕ್ಷಿಸುವ ಬಗ್ಗೆ ಪ್ಲಾಸ್ಟಿಕ್ ಮುಕ್ತಬಳಕೆಯ ಒತ್ತು ನೀಡಬೇಕಿದೆ. ಸಸಿಗಳನ್ನು ನೆಡಲು ಮುಂದಾಗಬೇಕಿದೆ.




