ವಾರದ ವಿಶ್ರಾಂತಿ ನಿಯಮದಿಂದಾಗಿ ಹಲವು ಸಿಬ್ಬಂದಿ ರಜೆ ಹಾಕಿದ ಕಾರಣ ನೀಡಿ ಇಂಡಿಗೋ ಸಂಸ್ಥೆ ನೂರಾರು ವಿಮಾನಗಳನ್ನು ರದ್ದು ಮಾಡಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಸಿಬ್ಬಂದಿಗೆ ವಾರದ ವಿಶ್ರಾಂತಿ ನಿಯಮವನ್ನು ಹಿಂಪಡೆದುಕೊಂಡಿದೆ.
ಡಿಜಿಸಿಎ ನವೆಂಬರ್ 1ರಂದು ವಿಮಾನ ಕರ್ತವ್ಯ ಸಮಯದ ಮಿತಿಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಪರಿಷ್ಕರಣೆ ಮಾಡಿದ್ದು, ಆ ನಿಯಮದ ಪ್ರಕಾರ ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ಸಮಯವನ್ನು ನೀಡುವುದು ಕಡ್ಡಾಯವಾಗಿದೆ. ಈ ನಿಯಮದ ಕಾರಣದಿಂದಾಗಿ ಪೈಲಟ್‌ಗಳ ಕೊರತೆ ಉಂಟಾಗಿದೆ. ಇದರಿಂದಾಗಿ ವಿಮಾವವನ್ನೇ ರದ್ದು ಮಾಡಲಾಗಿದೆ ಎಂದು ಇಂಡಿಗೋ ಹೇಳಿಕೊಂಡಿದೆ.
ಇದನ್ನು ಓದಿದ್ದೀರಾ? ರನ್‌ವೇಯಲ್ಲೇ ಊಟ ಮಾಡಿದ ವಿಮಾನ ಪ್ರಯಾಣಿಕರು: ವಿಡಿಯೋ ವೈರಲ್; ‘ಇಂಡಿಗೋ’ ಸಂಸ್ಥೆಗೆ ನೋಟಿಸ್
ನೂರಕ್ಕೂ ಅಧಿಕ ವಿಮಾನಗಳು ರದ್ದಾದ ಕಾರಣದಿಂದಾಗಿ ಹಲವು ಪ್ರಯಾಣಿಕರು ಪರದಾಡುವಂತಾಗಿದೆ. ಈ ನಡುವೆ ಡಿಜಿಸಿಎ ತನ್ನ ಹಿಂದಿನ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.
“ಕಾರ್ಯಾಚರಣೆಯ ನಿರಂತರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯತೆಯ ಕುರಿತು ವಿವಿಧ ವಿಮಾನಯಾನ ಸಂಸ್ಥೆಗಳಿಂದ ಮನವಿ ಬಂದಿದೆ. ಪ್ರಸ್ತುತ ಕಾರ್ಯಾಚರಣೆಯ ಅಡಚಣೆಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಈ ನಿಬಂಧನೆಯನ್ನು ಪರಿಶೀಲಿಸುವುದು ಅಗತ್ಯವೆಂದು ಪರಿಗಣಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.





