ಈವರೆಗೂ ಯಾರೂ ಹೇಳದ ಮತ್ತು ಎಲ್ಲೂ ಚರ್ಚೆಯಾಗದ ವಿಷಯವೊಂದನ್ನು ರಾಜನಾಥ್ ಸಿಂಗ್ ಅಚಾನಕ್ಕಾಗಿ ಹೇಳುವುದಕ್ಕೆ ರಾಜಕೀಯ ಕಾರಣ ಇದೆಯೇ ಹೊರತು ಐತಿಹಾಸಿಕ ಆಧಾರಗಳು ಇರುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಇಲ್ಲಿರುವ ಇನ್ನೊಂದು ಸಂಗತಿ ಏನೆಂದರೆ ಹೀಗೆ ಹೇಳಿಕೆ ನೀಡಿದ ತಕ್ಷಣ ಬಿಜೆಪಿ ಐಟಿಸೆಲ್ ಚುರುಕಾಗುತ್ತದೆ.
ಖಜಾನೆಯ ಹಣವನ್ನು ಬಳಸಿ ಬಾಬರಿ ಮಸೀದಿಯನ್ನು ನಿರ್ಮಿಸಲು ಪ್ರಥಮ ಪ್ರಧಾನಿ ನೆಹರೂ ಬಯಸಿದ್ದರು ಮತ್ತು ಇದಕ್ಕೆ ಗೃಹ ಸಚಿವ ಸರ್ದಾರ್ ಪಟೇಲ್ ಅವರು ವಿರೋಧ ವ್ಯಕ್ತಪಡಿಸಿದ್ದರಿಂದ ನೆಹರೂ ಬಯಕೆ ಈಡೇರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆ ಚರ್ಚೆಗೆ ಒಳಗಾಗಿದೆ. ಇದು ಸುಳ್ಳಿನ ಕಂತೆ ಎಂದು ಕಾಂಗ್ರೆಸ್ ಹೇಳಿದೆ. ವಾಟ್ಸಾಪ್ ಯೂನಿವರ್ಸಿಟಿಯಿಂದ ಹೆಕ್ಕಿಕೊಳ್ಳಲಾದ ಮಾಹಿತಿ ಇದು ಎಂದು ಕಾಂಗ್ರೆಸ್ ಕಿಡಿ ಕಾರಿದೆ. ದೇಶದ ಪ್ರಮುಖ ಸಮಸ್ಯೆಗಳನ್ನು ಚರ್ಚೆಯಾಗದಂತೆ ನೋಡಿಕೊಳ್ಳುವ ಉದ್ದೇಶದ ಭಾಗವಾಗಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಗುಜರಾತ್ ನ ವಡೋದರದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ರಾಜನಾಥ್ ಈ ಹೇಳಿಕೆ ನೀಡಿದ್ದಾರೆ. ಹಾಗಂತ ಈ ಹೇಳಿಕೆಗೆ ಅವರು ಯಾವ ಆಧಾರವನ್ನೂ ಕೊಟ್ಟಿಲ್ಲ. ಗ್ರೋಕ್ ಸಹಿತ ಯಾವುದೇ ಮೂಲಗಳಲ್ಲೂ ಇದಕ್ಕೆ ಆಧಾರವೂ ಸಿಗುತ್ತಿಲ್ಲ. ಕಾಂಗ್ರೆಸ್ಸಿನ ವಿರೋಧವನ್ನು ರಾಜಕೀಯ ವಿರೋಧ ಎಂದು ಹೇಳಿ ತಳ್ಳಿ ಹಾಕಬಹುದಾದರೂ ಅವರ ಹೇಳಿಕೆಯನ್ನು ಸಾಬೀತುಪಡಿಸುವ ಇನ್ನಾವ ಆಧಾರಗಳೂ ಸಿಗದೇ ಇರುವುದರಿಂದ ರಾಜನಾಥ್ ಸಿಂಗ್ ಅವರ ಹೇಳಿಕೆ ಪ್ರಶ್ನಾರ್ಹವಾಗುತ್ತದೆ.
1950ರಲ್ಲಿ ಗೋಪಾಲ್ ಸಿಂಗ್ ವಿಶಾರದ್ ಮತ್ತು ಝಹೂರ್ ಅಹ್ಮದ್ ಅವರ ಮೊಕದ್ದಮೆಯಲ್ಲಿ ನೆಹರು ಸರ್ಕಾರದ ನಿಲುವು ಸ್ಪಷ್ಟವಾಗುತ್ತದೆ. ಬಾಬರಿ ಮಸೀದಿಯ ಕುರಿತಂತೆ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ನೆಹರೂ ಸರಕಾರ ಆಗ ಆದೇಶಿಸಿತ್ತು
1949ರಲ್ಲಿ ಬಾಬರಿ ಮಸೀದಿ ಒಳಗೆ ವಿಗ್ರಹವನ್ನು ಇರಿಸಲಾಗಿದೆ ಎಂಬ ಆರೋಪ ಮತ್ತು ವಿವಾದದ ಮಧ್ಯೆ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲು ನೆಹರು ಆದೇಶಿಸಿದ್ದರು
ಇದರಾಚೆಗೆ ನೆಹರು ಅವರು ಬಾಬರಿ ಮಸೀದಿಯನ್ನು ನಿರ್ಮಿಸಲು ಯೋಚಿಸಿದ್ದರು ಎಂಬುದಕ್ಕೆ ಐತಿಹಾಸಿಕವಾಗಿ ಯಾವುದೇ ದಾಖಲೆಗಳು ಸಿಗುತ್ತಿಲ್ಲ. ಹೀಗಿರುವಾಗ ರಾಜನಾಥ್ ಸಿಂಗ್ ಅವರು ಇಂಥದೊಂದು ಹೇಳಿಕೆಯನ್ನು ಕೊಟ್ಟಿರುವುದಕ್ಕೆ ಕಾರಣ ಏನು ಎಂಬ ಚರ್ಚೆಯು ನಡೆಯುತ್ತಿದೆ.
ಎಸ್ಐಆರ್ ಬಗ್ಗೆ ಪಾರ್ಲಿಮೆಂಟಲ್ಲಿ ಚರ್ಚಿಸಲು ವಿರೋಧ ಪಕ್ಷಗಳು ತಯಾರಿ ನಡೆಸುತ್ತಿರುವಾಗ ಮತ್ತು ದೇಶಾದ್ಯಂತ ಬಿ ಎಲ್ ಓ ಗಳ ಆತ್ಮಹತ್ಯೆಯಿಂದ ಕೇಂದ್ರ ಸರಕಾರದ ಮೇಲೆ ಒತ್ತಡ ಬೀಳುತ್ತಿರುವಾಗ ಅದರ ಮೇಲಿನ ಗಮನ ಬೇರೆಡೆಗೆ ಹರಿಸುವುದಕ್ಕಾಗಿಯೇ ಅವರು ಈ ಹೇಳಿಕೆ ನೀಡಿದ್ದಾರಾ ಎಂಬ ಚರ್ಚೆಯೂ ನಡೆಯುತ್ತಿದೆ
ಈವರೆಗೂ ಯಾರೂ ಹೇಳದ ಮತ್ತು ಎಲ್ಲೂ ಚರ್ಚೆಯಾಗದ ವಿಷಯವೊಂದನ್ನು ರಾಜನಾಥ್ ಸಿಂಗ್ ಅಚಾನಕ್ಕಾಗಿ ಹೇಳುವುದಕ್ಕೆ ರಾಜಕೀಯ ಕಾರಣ ಇದೆಯೇ ಹೊರತು ಐತಿಹಾಸಿಕ ಆಧಾರಗಳು ಇರುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಇಲ್ಲಿರುವ ಇನ್ನೊಂದು ಸಂಗತಿ ಏನೆಂದರೆ ಹೀಗೆ ಹೇಳಿಕೆ ನೀಡಿದ ತಕ್ಷಣ ಬಿಜೆಪಿ ಐಟಿಸೆಲ್ ಚುರುಕಾಗುತ್ತದೆ. ದೇಶಾದ್ಯಂತ ಈ ಹೇಳಿಕೆಯನ್ನು ಹಂಚುತ್ತದೆ. ಈ ಹೇಳಿಕೆಯ ಜೊತೆಗೆ ಇನ್ನಷ್ಟು ಕಥೆಗಳನ್ನು ಸೃಷ್ಟಿಸಿ ಹಂಚಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಹೀಗೆ ಜನರ ಮನಸ್ಸಿನಲ್ಲಿ ನೆಹರು ಅವರನ್ನು ಹಿಂದೂ ವಿರೋಧಿಯಾಗಿ ಮತ್ತು ಮುಸ್ಲಿಂ ಓಲೈಕೆಯ ವ್ಯಕ್ತಿಯಾಗಿ ಬಿಂಬಿಸುವ ಶ್ರಮ ಯಶಸ್ವಿಯಾಗುತ್ತದೆ.
ಇದನ್ನೂ ಓದಿ TATA ಗ್ರೂಪ್ ಗೆ ಸೆಮಿಕಂಡಕ್ಟರ್ ಅನುಮೋದನೆಯ ಹಿಂದಿನ ಸತ್ಯ- ಬಿಜೆಪಿಗೆ ₹750 ಕೋಟಿ ದೇಣಿಗೆ!
ಇದರ ಬಳಿಕ ಬರುವ ಸತ್ಯ ಸುದ್ದಿಗೆ ಇಷ್ಟು ಪ್ರಚಾರ ಸಿಗುವುದಿಲ್ಲ ಅದನ್ನು ಹಂಚಿಕೊಳ್ಳುವವರೂ ಇರುವುದಿಲ್ಲ. ಇಂತಹದೊಂದು ತಂತ್ರದಿಂದಲೇ ಅವರು ಈ ಹೇಳಿಕೆಯನ್ನು ನೀಡಿದ್ದಾರಾ ಎಂಬ ಅನುಮಾನವೂ ಕಾಡುತ್ತಿದೆ
ಅಂತೂ ರಾಜನಾಥ್ ಸಿಂಗ್ ಅವರಲ್ಲಿ ಕಾಂಗ್ರೆಸ್ ಆಧಾರವನ್ನು ಕೇಳುತ್ತಿದ್ದರೆ ಅತ್ತ ರಾಜನಾಥ್ ಸಿಂಗ್ ಅವರು ಸುಮ್ಮನಿದ್ದಾರೆ. ವಾಟ್ಸಪ್ ನಲ್ಲಿ ಸುಳ್ಳು ಸುದ್ದಿಗಳಂತೂ ಧಾರಾಳ ಹರಿದಾಡುತ್ತಿದೆ. ಹೇಳಿಕೆ ನೀಡಿದವರ ಉದ್ದೇಶ ಇದುವೇ ಇರಬಹುದೇನೋ ಎಂಬ ಅನುಮಾನವೂ ಕಾಡುತ್ತಿದೆ.

ಏ ಕೆ ಕುಕ್ಕಿಲ
ಪತ್ರಕರ್ತ




