ಅಸ್ಸಾಂನಲ್ಲಿ ಚಾಲ್ತಿಯಲ್ಲಿರುವ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಪ್ರಕ್ರಿಯೆಯಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಅತ್ಯಂತ ಶೋಚನೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರ ಮೇಲೆ ಜನಾಂಗೀಯ ತಾರತಮ್ಯ, ಬಲವಂತದ ಹೊರಹಾಕುವಿಕೆ, ದ್ವೇಷ ಭಾಷಣ ಹಾಗೂ ಕಾನೂನು ಜಾರಿ ಸಂಸ್ಥೆಗಳಿಂದ ಅತಿಯಾದ ಬಲಪ್ರಯೋಗಗಳು ನಡೆಯುತ್ತಿವೆ ಎಂದು ವಿಶ್ವಸಂಸ್ಥೆಯ ‘ಜನಾಂಗೀಯ ತಾರತಮ್ಯ ನಿರ್ಮೂಲನೆ ಸಮಿತಿ’ (CERD) ಗಂಭೀರ ಕಳವಳ ವ್ಯಕ್ತಪಡಿಸಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯನ್ನು ಉದ್ದೇಶಿಸಿ ಸಿಇಆರ್‌ಡಿ ಪತ್ರ ಬರೆದಿದೆ. “ಭಾರತದ ಈಶಾನ್ಯ ರಾಜ್ಯದಲ್ಲಿ (ಅಸ್ಸಾಂ) ಬಂಗಾಳಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಆರೋಪ ಕುರಿತು ಭಾರತದ ಸರ್ಕಾರದಿಂದ ಸ್ಪಷ್ಟೀಕರಣ ಕೇಳಲಾಗಿತ್ತು. ಆದರೆ, ಭಾರತ ಸರ್ಕಾರದ ಉತ್ತರವು ಮಾಹಿತಿ ಕೊರತೆಯಿಂದ ಕೂಡಿದೆ. ಸರ್ಕಾರದ ಮೇಲಿನ ಆರೋಪಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರತಿಕ್ರಿಯೆ ವಿಫಲವಾಗಿದೆ” ಎಂದು ಸಿಇಆರ್‌ಡಿ ವಿಷಾದ ವ್ಯಕ್ತಪಡಿಸಿರುವುದಾಗಿ ‘ಮಕ್ತೂಬ್ ಮೀಡಿಯಾ’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರ ಹಕ್ಕುಗಳನ್ನು ಕೊಲ್ಲದಿರಲಿ ಕೇರಳ, ಒಡನೆಯೇ ತಿದ್ದುಪಡಿ ತರಲಿ
“ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಕಾರ್ಯವಿಧಾನ ಮತ್ತು ಆಡಳಿತಾತ್ಮಕ ನ್ಯೂನತೆಗಳು, ದಾಖಲೆಗಳನ್ನು ಪಡೆಯುವಲ್ಲಿನ ತೊಡಕುಗಳು ಹಾಗೂ ‘ಮೂಲ ನಿವಾಸಿಗಳಲ್ಲದ ನಿವಾಸಿಗಳು’ ಎಂಬ ವರ್ಗೀಕರಣದ ಪರಿಣಾಮದಿಂದಾಗಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿಡಲಾಗುತ್ತಿದೆ” ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ. ಜೊತೆಗೆ, ಕಠಿಣ ಪರಿಶೀಲನಾ ಮಾನದಂಡಗಳು ಮತ್ತು ವಿದೇಶಿಯರ ನ್ಯಾಯಮಂಡಳಿ ವಿಚಾರಣೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ‘ಸಂಶಯಾಸ್ಪದ ಮತದಾರರು’ ತಮ್ಮ ಸ್ಥಾನಮಾನ ಕುರಿತು ಆಕ್ಷೇಪಣೆ ಅಥವಾ ಪ್ರಶ್ನಿಸುವುದನ್ನು ತಡೆಯುತ್ತದೆ ಎಂದೂ ಆತಂಕ ವ್ಯಕ್ತಪಡಿಸಿದೆ.
ಪರಿಹಾರಿಸುವ ಕ್ರಮಗಳಿಲ್ಲದೆ ಹಲವು ಜಿಲ್ಲೆಗಳಲ್ಲಿ ವ್ಯವಸ್ಥಿತ ಬಲವಂತದಿಂದ ಹೊರಹಾಕುವಿಕೆ ನಡೆಯುತ್ತಿದೆ. ಇದು ಬಂಗಾಳಿ ಮಾತನಾಡುವ ಮುಸ್ಲಿಂ ಕುಟುಂಬಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಮಿತಿ ಹೇಳಿದೆ. ವಿಶೇಷವಾಗಿ ಅಸ್ಸಾಂನಲ್ಲಿ 2024ರ ರಾಷ್ಟ್ರೀಯ ಚುನಾವಣೆಗಳ ಸಮಯದಲ್ಲಿ ಹೆಚ್ಚಿದ ದ್ವೇಷ ಭಾಷಣ ಮತ್ತು ಹಿಂಸಾಚಾರಕ್ಕೆ ಪ್ರಚೋದನೆಯು ಬಂಗಾಳಿ ಮುಸ್ಲಿಮರ ಮೇಲೆ ಹೆಚ್ಚು ಬಲಪ್ರಯೋಗಕ್ಕೆ ಕಾರಣವಾಗಿದೆ ಎಂಬುದನ್ನು ಸಮಿತಿ ಗಮನಿಸಿದೆ.
ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸಮಿತಿ ಸೂಚಿಸಿದೆ.




