ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್‌ನ ಜಿಲ್ಲಾಧಿಕಾರಿ ಶಿವಂ ವರ್ಮಾ ಅವರು ಆರ್‌ಎಸ್‌ಎಸ್‌ನ ಸ್ಥಳೀಯ ಕಚೇರಿಗೆ ಭೇಟಿ ನೀಡಿರುವ ಸಂಗತಿಯು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಜಿಲ್ಲಾಧಿಕಾರಿ ಶಿವಂ ವರ್ಮಾ ಅವರನ್ನು ‘ಬಿಜೆಪಿಯ ಕಾರ್ಯಕರ್ತ’ನೆಂದು ಕಾಂಗ್ರೆಸ್ ಟೀಕಿಸಿದೆ.
ಇಂದೋರ್‌ನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವಿಸಿ 17 ಸಾವುಗಳು ಸಂಭವಿಸಿವೆ. ಹಲವಾರು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದುರಂತ ಘಟನೆಯಿಂದಾಗಿ ಇಡೀ ಇಂದೋರ್ ಆತಂಕದಲ್ಲಿದೆ. ಇದೇ ಸಮಯದಲ್ಲಿ, ಜಿಲ್ಲಾಧಿಕಾರಿ ಶಿವಂ ವರ್ಮಾ ಅವರು ಬುಧವಾರ ರಾತ್ರಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದು, ಆರ್‌ಎಸ್‌ಎಸ್ ಸ್ಥಳೀಯ ಪ್ರಚಾರಕ ರಾಜ್ ಮೋಹನ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಭೇಟಿಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಸರ್ಕಾರಿ ಅಧಿಯೊಬ್ಬರು ಸಂಘದ ಕಚೇರಿಗೆ ಭೇಟಿ ನೀಡಿ, ಅದರ ಮುಖಂಡರೊಂದಿಗೆ ಚರ್ಚಿಸಿರುವುದು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಶಿವಂ ವರ್ಮಾ ಅವರು ಬಿಜೆಪಿ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಟೀಕಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ದೇವರಾಜ ಅರಸು-ಸಿದ್ದರಾಮಯ್ಯ | ಸಾಮಾಜಿಕ ನ್ಯಾಯದ ನಿಜ ಹರಿಕಾರ ಯಾರು?
“ಶಿವಂ ವರ್ಮಾ ಅವರನ್ನು ಭಾರ್ಗವ್ ವರ್ಮಾ ಆರ್‌ಎಸ್‌ಎಸ್ ಕಚೇರಿಗೆ ಕರೆದೊಯ್ದರು. ಸಂಘದ ಕಚೇರಿಗೆ ಭೇಟಿ ನೀಡಿರುವ ಶಿವಂ ವರ್ಮಾ ಅವರು ತಾವು ಆಡಳಿತ ಅಧಿಕಾರಿಯಲ್ಲ ಎಂಬುದನ್ನು ತೋರಿಸಿದ್ದಾರೆ. ಅವರು ಬಿಜೆಪಿ ಸದಸ್ಯನಂತೆ ಕೆಲಸ ಮಾಡುತ್ತಿದ್ದಾರೆ. ನೀವು ಕರ್ತವ್ಯದಲ್ಲಿರುವಾಗ ರಾಜಕೀಯ ಪಕ್ಷಗಳ ಕಚೇರಿಗಳಿಗೆ ಹೋದರೆ, ಕಾಂಗ್ರೆಸ್ ಕಾರ್ಯಕರ್ತರು ನಿಮ್ಮ ಕಾರ್ಯಶೈಲಿಯನ್ನು ಸರಿಪಡಿಸುತ್ತಾರೆ, ”ಎಂದು ಪಟ್ವಾರಿ ಹೇಳಿದ್ದಾರೆ.
“ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿ ಕೆಲಸ ಮಾಡಬೇಕು, ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಬೇಕು ಹಾಗೂ ಸಚಿವರು ಮತ್ತು ಅಧಿಕಾರಿಗಳೊಂದಿಗೆ ವಿಷಯಗಳನ್ನು ಚರ್ಚಿಸಬೇಕು. ಇಂದೋರ್‌ನಲ್ಲಿ ಜನರು ಸಾಯುತ್ತಿದ್ದಾರೆ, ಎಲ್ಲೆಡೆ ಕಲುಷಿತ ನೀರು ತುಂಬಿದೆ. ಆದರೂ, ಜಿಲ್ಲಾಧಿಕಾರಿ ಕೆಲಸ ಮಾಡುತ್ತಿಲ್ಲ. ಅವರು ಬಿಜೆಪಿಗಾಗಿ ಆರ್‌ಎಸ್‌ಎಸ್ ಕಚೇರಿಗೆ ಹೋಗುತ್ತಿದ್ದಾರೆ” ಎಂದು ಪಟ್ವಾರಿ ಆರೋಪಿಸಿದ್ದಾರೆ.




