ಸಂಗಾತಿಗೆ ನಿರಾಕರಿಸಲು, ವಾದಿಸಲು ಅವಕಾಶ ನೀಡದೆಯೇ ಕೇವಲ ವಾಟ್ಸಾಪ್ ಚಾಟ್‌ಗಳ ಆಧಾರದಲ್ಲಿ ಕ್ರೌರ್ಯ ನಡೆದಿದೆ ಎಂದು ಹೇಳಿ ವಿಚ್ಛೇದನವನ್ನು ನೀಡಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಕಳೆದ ವಾರ ನಾಸಿಕ್ ಜಿಲ್ಲಾ ಕೌಟುಂಬಿಕ ನ್ಯಾಯಾಲಯವು ತನ್ನ ಪತ್ನಿಯಿಂದ ವಿಚ್ಛೇದನ ಕೋರಿ ವ್ಯಕ್ತಿಯೋರ್ವ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿತ್ತು. ವಾಟ್ಸಾಪ್ ಚಾಟ್ ಆಧಾರದಲ್ಲಿ ಕ್ರೂರತೆಯನ್ನು ಉಲ್ಲೇಖಿಸಿ ವಿಚ್ಛೇದನಕ್ಕೆ ಅನುಮತಿಸಿತ್ತು.
ಇದನ್ನು ಓದಿದ್ದೀರಾ? ಪತ್ನಿ ಮಾಡಿದ ಅಡುಗೆ, ತೊಟ್ಟ ಬಟ್ಟೆಯ ಬಗ್ಗೆ ಟೀಕೆ ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್
ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ಹೈಕೋರ್ಟ್ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.
“ವಿಚ್ಛೇದನವನ್ನು ಏಕಪಕ್ಷೀಯವಾಗಿ ಅಂಗೀಕರಿಸಲಾಗಿದೆ. ನನ್ನ ವಾದವನ್ನು ಮಂಡಿಸಲು ಅಥವಾ ವಿರೋಧ ವ್ಯಕ್ತಪಡಿಸಲು ಯಾವುದೇ ಅವಕಾಶವನ್ನು ನೀಡಲಾಗಿಲ್ಲ” ಎಂದು ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮಹಿಳೆ ಪ್ರತ್ಯೇಕವಾಗಿ ವಾಸಿಸಲು ಒತ್ತಾಯಿಸಿದ್ದಳು. ತನ್ನ ಅತ್ತೆ ಮತ್ತು ಅತ್ತಿಗೆಯ ಬಗ್ಗೆ ಅವಹೇಳನಕಾರಿಯಾಗಿ ವಾಟ್ಸಾಪ್ ಮೆಸೇಜ್ ಮಾಡಿದ್ದಳು. ಆದ್ದರಿಂದ ಪತಿ ವಿಚ್ಛೇದನಗೆ ಅರ್ಹರು ಎಂದು 2025ರ ಮೇ ತಿಂಗಳಲ್ಲಿ ಕೌಟುಂಬಿಕ ನ್ಯಾಯಾಲಯವು ಹೇಳಿತ್ತು. ಆದರೆ ಪತಿಯ ಆರೋಪದ ಬಗ್ಗೆ ತನ್ನ ವಾದ ಮಂಡಿಸಲು ಪತ್ನಿಗೆ ಅವಕಾಶವೇ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ.





