ಉತ್ತರ ಪ್ರದೇಶದ ನೋಯ್ಡಾ ಮೂಲದ ಮಹಿಳಾ ವೈದ್ಯರೊಬ್ಬರಿಗೆ ಸೈಬರ್ ವಂಚಕರು 48 ಗಂಟೆಗಳ ಕಾಲ ‘ಡಿಜಿಟಲ್ ಅರೆಸ್ಟ್’ ಗೊಳಪಡಿಸಿ 59 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ದೆಹಲಿ ಎನ್‌ಸಿಆರ್ ವಿಭಾಗದಲ್ಲಿ ಇತ್ತೀಚಿಗೆ ಸೈಬರ್ ವಂಚನೆ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ.
ನೋಯ್ಡಾ ಸೆಕ್ಟರ್‌ನ 77ರ ನಿವಾಸಿ ಡಾ. ಪೂಜಾ ಗೋಯಲ್ ಅವರಿಗೆ ಜುಲೈ 13 ರಂದು ಕರೆ ಬಂದಿದೆ. ತಾನೊಬ್ಬ ಭಾರತೀಯ ದೂರ ನಿಯಂತ್ರಣ ಪ್ರಾಧಿಕಾರದ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪೂಜಾ ಗೋಯಲ್ ಅವರಿಗೆ ನಿಮ್ಮ ಪೋರ್ನ್(ಅಶ್ಲೀಲ) ವಿಡಿಯೋ ವೈರಲ್ ಆಗುತ್ತಿದೆ ಎಂದು ತಿಳಿಸಿದ್ದಾನೆ.
ವ್ಯಕ್ತಿಯ ಆರೋಪವನ್ನು ವೈದ್ಯರು ಆರಂಭದಲ್ಲಿ ತಿರಸ್ಕರಿಸಿದ್ದಾರೆ. ವೈದ್ಯರಿಗೆ ಬಲವಂತಪಡಿಸಿದ ವ್ಯಕ್ತಿ ವಿಡಿಯೋ ಕಾಲ್ ಸ್ವೀಕರಿಸುವಂತೆ ತಿಳಿಸಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಮಹಿಳೆಯನ್ನು 48 ಗಂಟೆಗಳ ಕಾಲ ಬೆದರಿಸಿ ಡಿಜಿಟಲ್ ಬಂಧನಕ್ಕೆ ಒಳಪಡಿಸಲಾಗಿತ್ತು. ಕಾಲ್‌ನಲ್ಲಿ ಹಣ ನೀಡದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಲಾಗಿದೆ.
ಅನಂತರದಲ್ಲಿ ಮಹಿಳೆಯಿಂದ 59.54 ಲಕ್ಷ ರೂ. ಹಣವನ್ನು ನಿರ್ದಿಷ್ಟ ಖಾತೆಗೆ ವರ್ಗಾವಣೆಗೊಳಿಸಿದ ನಂತರ ಮಹಿಳೆಯನ್ನು ಡಿಜಿಟಲ್ ಅರೆಸ್ಟ್‌ನಿಂದ ಬಂಧಮುಕ್ತಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದಿನಕ್ಕೆ 14 ಗಂಟೆ ಕೆಲಸ ಅಮಾನವೀಯ ನಡೆ, ಸರ್ಕಾರ ತಿರಸ್ಕರಿಸಲಿ
ಹಣ ಕಳೆದುಕೊಂಡ ನಂತರ ಇದೊಂದು ಹಗರಣ ಎಂದು ಮಹಿಳೆಗೆ ಗೊತ್ತಾಗಿದೆ. ಜುಲೈ 22 ರಂದು ಮಹಿಳಾ ವೈದ್ಯರು ನೋಯ್ಡಾ ಸೆಕ್ಟರ್ 36ರಲ್ಲಿ ಸೈಬರ್ ಠಾಣೆಗೆ ಪೊಲೀಸ್ ದೂರು ನೀಡಿದ್ದಾರೆ.
ಸೈಬರ್ ವಿಭಾಗದ ಎಸಿಪಿಯಾದ ವಿವೇಕ್ ರಂಜನ್ ರೈ, ಗೋಯಲ್ ಅವರು ಹಣ ವರ್ಗಾವಣೆಗೊಳಿಸಿದ ಖಾತೆಯ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಹಗರಣದ ಮೂಲಕ ಜನರನ್ನು ಹೆಚ್ಚಾಗಿ ವಂಚನೆಗೊಳಿಸಲಾಗುತ್ತಿದೆ. ಸೈಬರ್ ವಂಚಕರು ಮನೆಗಳಲ್ಲಿ, ಕೊಠಡಿಗಳಲ್ಲಿ ಅಥವಾ ಸರ್ಕಾರಿ ಅಧಿಕಾರಿಗಳ ರೂಪದಲ್ಲಿ ಮೋಸಗೊಳಿಸಲಾಗುತ್ತಿದೆ.
ದೆಹಲಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ 72 ವರ್ಷದ ವೃದ್ಧೆಯೊಬ್ಬರನ್ನು ಪೂಜಾ ಗೋಯಲ್ ರೀತಿಯಲ್ಲಿಯೇ ಗುರಿ ಮಾಡಿ 83 ಲಕ್ಷ ರೂ. ವಂಚನೆಗೊಳಿಸಲಾಗಿತ್ತು. ವೃದ್ಧೆಯನ್ನು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರೆಂದು ಬಿಂಬಿಸಿ 12 ಗಂಟೆಗಳ ಕಾಲ ಡಿಜಿಟಲ್ ಬಂಧನಕ್ಕೊಳಪಡಿಸಲಾಗಿತ್ತು.
ಸೈಬರ್ ಅಪರಾಧಿಗಳಿಂದ ಕೆಲವು ತಿಂಗಳುಗಳಿಂದ ಈ ರೀತಿಯ ವಂಚನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೋಯ್ಡಾ ಪೊಲೀಸರು ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ನೀಡಿ ಮೋಸಕ್ಕೊಳಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.





