ಇತ್ತೀಚೆಗೆ ಪಶ್ಚಿಮ ಬಂಗಾಳದ ಐ-ಪ್ಯಾಕ್ ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿ ಹಾಗೂ ಆ ವೇಳೆ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಸಂಬಂಧಪಟ್ಟ ದಾಖಲೆಗಳೆಂದು ತೆಗೆದುಕೊಂಡು ಹೋಗಿರುವ ದಾಖಲೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಇದೆ ಸಂದರ್ಭದಲ್ಲಿ 54 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ ವಾಟರ್‌ಗೇಟ್ ಹಗರಣವನ್ನು ಸಹ ಈ ದಾಳಿ ನೆನಪಿಸಿದೆ. “ಅಮೆರಿದಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆಗೆ ಕಾರಣವಾದ ವಾಟರ್‌ಗೇಟ್ ಹಗರಣದ ರೀತಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಐ-ಪ್ಯಾಕ್ ಗೇಟ್ ಕಾರಣವಾಗಬಹುದೇ? ದೀದಿ ಮತ್ತು ಇ.ಡಿ ನಡುವಿನ ಈ ಹೋರಾಟದಲ್ಲಿ ಯಾರಾಗಲಿದ್ದಾರೆ ರಿಚರ್ಡ್ ನಿಕ್ಸನ್? ಎಂಬ ಶೀರ್ಷಿಕೆಯ ಮೂಲಕ ದಿ ಟೆಲಿಗ್ರ್ಯಾಫ್ ವರದಿ ಮಾಡಿದೆ.
ರಿಚರ್ಡ್ ನಿಕ್ಸನ್ ಅವರು ವಾಟರ್‌ಗೇಟ್ ಹಗರಣದ ವೇಳೆ “ತಮ್ಮ ಪಕ್ಷದ ಚುನಾವಣಾ ಪ್ರಚಾರ ಮತ್ತು ಕಾರ್ಯತಂತ್ರಕ್ಕೆ ಸಂಬಂಧಿಸಿದ ಸೂಕ್ಷ್ಮ ಡೇಟಾವನ್ನು ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ಕೇಂದ್ರ ತನಿಖಾ ಸಂಸ್ಥೆಯಿಂದ ಕದಿಯಲಾಗುತ್ತಿದೆ” ಎಂದು ಆರೋಪ ಮಾಡಿದ್ದರು.
ಇದನ್ನು ಓದಿ : ಮಮತಾ ಬ್ಯಾನರ್ಜಿ, ಟಿಎಂಸಿ ಹಾಗೂ ಐ-ಪ್ಯಾಕ್ ಸಂಬಂಧವೇನು?
ಅದೇ ರೀತಿ ಮಮತಾ ಬ್ಯಾನರ್ಜಿ ಸಹ ತಮ್ಮ ಪಕ್ಷದ ಡೇಟಾವನ್ನು ಹಾಗೂ ಕಾರ್ಯತಂತ್ರವನ್ನು ಕದಿಯಲು ಇ.ಡಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರು ಐ-ಪ್ಯಾಕ್ ಕಚೇರಿ ಹಾಗೂ ಅದರ ನಿರ್ದೇಶಕನ ಮನೆಯಿಂದ ಅನೇಕ ದಾಖಲೆಗಳನ್ನು ಹೊರತೆಗೆದುಕೊಂಡು ನಡೆದಾಗ ಈ ಮೇಲಿನ ಪ್ರಶ್ನೆಗಳು ಕೇಳಿಬರುತ್ತಿವೆ.
“ಬಹುಕೋಟಿ ರೂಪಾಯಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಅಧಿಕಾರಿಗಳು ಶೋಧ ನಡೆಸುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನಿಖೆಗೆ ಅಡ್ಡಿಪಡಿಸಿ ದಾಖಲೆಗಳನ್ನು ಹೊರತೆಗೆದುಕೊಂಡು ಹೋಗಲು ಹೇಗೆ ಅವಕಾಶ ಮಾಡಿಕೊಟ್ಟಿತು?” ಎಂದು ಟೆಲಿಗ್ರ್ಯಾಫ್ ಪ್ರಶ್ನಿಸಿದೆ.
ಏನಿದು ವಾಟರ್‌ಗೇಟ್ ಹಗರಣ?
17 ಜೂನ್ 1972 ರಂದು ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ವಾಟರ್‌ಗೇಟ್ ಸಂಕೀರ್ಣದಲ್ಲಿ ಡೆಮಾಕ್ರಟಿಕ್ ನ್ಯಾಷನಲ್ ಸಮಿತಿ (ಡಿಎನ್‌ಸಿ) ಪ್ರಧಾನ ಕಚೇರಿಯಲ್ಲಿ ಮರು-ಚುನಾವಣಾ ಪ್ರಚಾರಕ್ಕಾಗಿ ನಡೆಯುತ್ತಿದ್ದ ಕಾರ್ಯತಂತ್ರದ ವೇಳೆ ಐದು ಜನರು ದಾಖಲೆಗಳನ್ನು ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಂಧನ ಮಾಡಲಾಗಿತ್ತು.
ಅಟಾರ್ನಿ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದ ಜಾನ್ ಮಿಷೆಲ್ ನೇತೃತ್ವದ ಅಧ್ಯಕ್ಷರ ಮರು ಚುನಾವಣೆ ಸಮಿತಿ (CRP) ಬೃಹತ್ ಮಟ್ಟದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನಿಸುತ್ತಿತ್ತು. CRPಯ ವಿಶೇಷ ಸಲಹೆಗಾರ ಜಿ.ಗಾರ್ಡನ್ ಲಿಡ್ಡಿ ಅವರು ರೂಪಿಸಿದ ಯೋಜನೆಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರಧಾನ ಕಚೇರಿಗೆ ಹೇಗಾದರೂ ನುಸುಳುವುದು ಒಂದಾಗಿತ್ತು. ಇದಕ್ಕಾಗಿ ಮಿಚೆಲ್ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಲು ಸಿದ್ದರಿದ್ದರು.
16 ಜೂನ್ 1972ರ ತಡರಾತ್ರಿ ಗಾರ್ಡನ್ ಲಿಡ್ಡಿಯು ಐದು ಜನರ ಗುಂಪನ್ನು ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಚೇರಿಗೆ ನುಗ್ಗಿಸಿದರು. ಈ ಕಚೇರಿ ಇದ್ದದ್ದು ವಾಟರ್‌ಗೇಟ್ ಸಂಕೀರ್ಣದಲ್ಲಿ. ಅಲ್ಲಿನ ಐದು ಕಟ್ಟಡಗಳಲ್ಲಿ ಕಚೇರಿಗಳು, ಅಪಾರ್ಟ್ಮೆಂಟ್‌ಗಳು ಮತ್ತು ಒಂದು ಹೋಟೆಲ್ ಸಹ ಇತ್ತು. ಈ ಐದು ಜನರು ಕದ್ದಾಲಿಕೆ ಸಾಧನಗಳನ್ನು ಇರಿಸುವುದು ಹಾಗೂ ಪ್ರಮುಖ ದಾಖಲೆಗಳನ್ನು ನಕಲು ಮಾಡುವುದು ಮುಖ್ಯ ಉದ್ದೇಶವಾಗಿತ್ತು.
ಐದು ಜನರ ಬಂಧನದ ನಂತರ ನಿಕ್ಸನ್ ಅವರನ್ನೂ ತನಿಖೆಗೆ ಒಳಪಡಿಸಲಾಯಿತು. ಕಳ್ಳತನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ, ಚುನಾವಣೆ ಪ್ರಚಾರವನ್ನು ಮುಂದುವರೆಸಿದರು. ರಿಚರ್ಡ್ ನಿಕ್ಸನ್ ಭಾರಿ ಗೆಲುವಿನೊಂದಿಗೆ ಎರಡನೇ ಅವಧಿಗೆ ಮರು ಆಯ್ಕೆಯಾದರು.
ಇದೊಂದು ಸೂಕ್ಷ್ಮ ರಾಜಕೀಯ ವಿಷಯವಾಗಿರುವುದರಿಂದ ಈ ಬಗ್ಗೆ ತನಿಖೆ ನಡೆಸಲು ವಾಷಿಂಗ್ಟನ್ ಪೋಸ್ಟ್ ವರದಿಗಾರರಾದ ಬಾಬ್ ವುಡ್‌ವರ್ಡ್ ಮತ್ತು ಕಾರ್ಲ್ ಬರ್ನ್‌ಸ್ಟೈನ್ ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಯಿತು. ಅವರ ನಿರಂತರ ತನಿಖೆಯಿಂದ ದಾಖಲೆಗಳ ಕಳ್ಳತನಕ್ಕೆ ಅಧ್ಯಕ್ಷ ನಿಕ್ಸನ್ ಅವರ ಕೈವಾಡವಿದೆ ಎಂದು ಬಹಿರಂಗಪಡಿಸಿದರು. ಅವರ ತನಿಖೆಯಲ್ಲಿ ‘ಡೀಪ್ ಥ್ರೋಟ್’ ಎಂದ ಕರೆಯಲ್ಪಡುವ ಅನಾಮಧೇಯ ವ್ಯಕ್ತಿಗಳು ಸಹಾಯ ಮಾಡಿದರು.
ಇಬ್ಬರು ಕ್ಯಾಬಿನೆಟ್ ಸದಸ್ಯರು ಸೇರಿದಂತೆ 69 ಜನರ ಮೆಲೆ ಆರೋಪ ಹೊರಿಸಲಾಯಿತು. ಇದರಲ್ಲಿ ಅನೇಕರು ತಪ್ಪೊಪ್ಪಿಕೊಂಡು ಶಿಕ್ಷೆಗೊಳಗಾದರೂ. ನಿಕ್ಸನ್ ಅವರ ಮೇಲೆ ದೋಷಾರೋಪಣೆಯನ್ನು ಸಲ್ಲಿಸಲಾಗಿತ್ತು. ಆನಂತರ 9 ಆಗಸ್ಟ್ 1974ರಂದು ರಿಚರ್ಡ್ ನಿಕ್ಸನ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಇಲ್ಲಿಯವರೆಗೆ ರಾಜೀನಾಮೆ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಗಿದ್ದಾರೆ.
ರಿಪಬ್ಲಿಕನ್ ಪಕ್ಷದ ನಿಕ್ಸನ್ ತನ್ನ ಎದುರಾಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇಂಥ ತಂತ್ರಕ್ಕೆ ಮೊರೆಹೋಗಿದ್ದರು. ವಾಟರ್‌ಗೇಟ್ ಹಗರಣವನ್ನು ಅತ್ಯಂತ ದೊಡ್ಡ ರಾಜಕೀಯ ಹಗರಣವೆಂದು ಪರಿಗಣಿಸಲಾಗಿದೆ.
ಪಶ್ಚಿಮ ಬಂಗಾಳದ ಐ-ಪ್ಯಾಕ್ ಮತ್ತು ಇ.ಡಿ ಘಟನೆಯ ಹಿನ್ನೆಲೆ
ಪಶ್ಚಿಮ ಬಂಗಾಳದಲ್ಲಿನ ಇಂಡಿಯನ್ ಪೊಲಿಟಿಕ್ ಆ್ಯಕ್ಷನ್ ಕಮಿಟಿ (ಐ-ಪ್ಯಾಕ್) ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ (ಜ.8) ಬೆಳಗ್ಗೆ 7 ಗಂಟೆಯಿಂದ ಶೋಧ ಕಾರ್ಯ ನಡೆಸಿದ್ದಾರೆ.
“ಟಿಎಂಸಿಯ ರಹಸ್ಯ ದಾಖಲೆಗಳನ್ನು ಹಾಗೂ ಮುಂಬರುವ ಚುನಾವಣಾ ಕಾರ್ಯತಂತ್ರವನ್ನು ಕದಿಯುವ ಉದ್ದೇಶದಿಂದಲೇ ಇ.ಡಿ ದಾಳಿ ನಡೆಸಿದೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇ.ಡಿ ದಾಳಿಯನ್ನು ಖಂಡಿಸಿ ಶುಕ್ರವಾರ (ಜ.9) ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬೃಹತ್ ರ್ಯಾಲಿಯನ್ನು ನಡೆಸಲಾಗಿದೆ.
ಅದೇ ರೀತಿ “ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ” ಎಂದು ಆರೋಪಿಸಿ ದೆಹಲಿಯಲ್ಲಿ ಟಿಎಂಸಿಯ ಎಂಟು ಸಂಸದರು ಕೇಂದ್ರ ಗೃಹ ಸಚಿವಾಲಯದ ಮುಂದೆ ಶುಕ್ರವಾರ (ಜ.9) ಪ್ರತಿಭಟನೆಯನ್ನು ನಡೆಸಿದರು. ಈ ವೇಳೆ ಮಹುವಾ ಮೊಯಿತ್ರಾ, ಡೆರೆಕ್ ಒಬ್ರಯಾನ್ ಮತ್ತು ಶತಾಬ್ದಿ ರಾಯ್ ಸೇರಿದಂತೆ ಪ್ರತಿಭಟನೆ ನಡೆಸಿದ ಎಲ್ಲಾ ಎಂಟು ಸಂಸದರನ್ನು ಪೊಲೀಸರು ಬಲ ಪ್ರಯೋಗಿಸಿ ವಶಕ್ಕೆ ಪಡೆದರು.
ದಾಳಿ ನಡೆದ ದಿನ (ಜ.8) ಸಿಎಂ ಮಮತಾ ಬ್ಯಾನರ್ಜಿ ಅವರು ನಡೆದುಕೊಂಡ ರೀತಿ ರಾಜಕೀಯವಾಗಿ ಚರ್ಚೆಗೆ ಕಾರಣವಾಗಿತ್ತು. ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದ ವೇಳೆ ಧೀಡಿರನೇ ಐ-ಪ್ಯಾಕ್ ಕಚೇರಿ ಮತ್ತು ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆಗೆ ಬಂದು ತಮ್ಮ ಪಕ್ಷಕ್ಕೆ ಸಂಬಂಧಪಟ್ಟಿದ್ದು ಹೇಳುವ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳ ಪೊಲೀಸ್ ಆಯುಕ್ತರ ಸಹಾಯವನ್ನು ಪಡೆದಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇ.ಡಿ ಮತ್ತು ಐ-ಪ್ಯಾಕ್ ಅದೇ ದಿನ (ಜ.8) ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿವೆ. ತನಿಖೆಗೆ ಅಡ್ಡಿಪಡಿಸಲಾಗಿದೆ ಎಂದು ಇ.ಡಿ ಆರೋಪಿಸಿದರೆ, ಐ-ಪ್ಯಾಕ್ ಸಂಸ್ಥೆಯು ಇ.ಡಿ ಶೋಧದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆಹೋಗಿದೆ. ಶುಕ್ರವಾರ (ಜ.9) ವಿಚಾರಣೆಗೆ ತೆಗೆದುಕೊಳ್ಳಬೇಕಿದ್ದ ನ್ಯಾಯಮೂರ್ತಿ ಸುವ್ರಾ ಘೋಷ್ ಅವರ ನ್ಯಾಯಪೀಠ ಜನವರಿ 14ಕ್ಕೆ ಮುಂದೂಡಿದೆ.





