ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರ ‘ಪ್ರಕಟವಾಗದ ಆತ್ಮಕಥೆ’ಯ ಪ್ರಸರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ಮತ್ತು ಪ್ರಕಾಶಕ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ನೀಡಿರುವ ಸ್ಪಷ್ಟನೆಯ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪುಸ್ತಕ ಇನ್ನೂ ಪ್ರಕಟವಾಗಿಲ್ಲ ಎಂಬ ಪೆಂಗ್ವಿನ್ ಸಂಸ್ಥೆಯ ಹೇಳಿಕೆಯನ್ನು ಪ್ರಶ್ನಿಸಿರುವ ರಾಹುಲ್, ಪ್ರಕಾಶಕರ ನಿಲುವು ಮತ್ತು ಜನರಲ್ ನರವಣೆ ಅವರು ಹಿಂದೆ ನೀಡಿದ್ದ ಹೇಳಿಕೆಗಳ ನಡುವೆ ಸ್ಪಷ್ಟ ವಿರೋಧಾಭಾಸಗಳಿವೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ನನ್ನ ಪುಸ್ತಕದ ಲಿಂಕ್ ಅನ್ನು ಅನುಸರಿಸಿ ಎಂದು ಸ್ವತಃ ನರವಣೆ ಅವರೇ ಟ್ವೀಟ್ ಮಾಡಿದ್ದಾರೆ. ಇಲ್ಲಿ ನರವಣೆ ಅವರು ಸುಳ್ಳು ಹೇಳುತ್ತಿರಬೇಕು ಅಥವಾ ಪೆಂಗ್ವಿನ್ ಸಂಸ್ಥೆ ಸುಳ್ಳು ಹೇಳುತ್ತಿರಬೇಕು. ಆದರೆ, ಮಾಜಿ ಸೇನಾ ಮುಖ್ಯಸ್ಥರು ಸುಳ್ಳು ಹೇಳುತ್ತಾರೆ ಎಂದು ನಾನಂದುಕೊಳ್ಳುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಪುಸ್ತಕ ಬಿಡುಗಡೆಯಾಗಿಲ್ಲ ಎಂದು ಪೆಂಗ್ವಿನ್ ಹೇಳುತ್ತಿದೆ. ಆದರೆ, ಈ ಹಿಂದೆ ಅಮೆಜಾನ್‌ನಲ್ಲಿ ಪುಸ್ತಕ ಲಭ್ಯವಿತ್ತು ಮತ್ತು 2023ರಲ್ಲೇ ನರವಣೆ ಅವರು ‘ದಯವಿಟ್ಟು ನನ್ನ ಪುಸ್ತಕವನ್ನು ಖರೀದಿಸಿ’ ಎಂದು ಟ್ವೀಟ್ ಮಾಡಿದ್ದರು. “ನಾನು ಪೆಂಗ್ವಿನ್‌ಗಿಂತ ನರವಣೆ ಜೀ ಅವರನ್ನು ನಂಬುತ್ತೇನೆ. ನೀವು ಯಾರನ್ನು ನಂಬುತ್ತೀರಿ?” ಎಂದು ರಾಹುಲ್ ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಪೀಕರ್ ನಡೆನುಡಿ ತಟಸ್ಥವಾಗಿರಬೇಕೆಂಬ ಸಂವಿಧಾನದ ಆಶಯದ ಸಾರಾಸಗಟು ಉಲ್ಲಂಘನೆಯಿದು!
ಈ ವಿವಾದದ ಹಿಂದೆ ರಾಜಕೀಯ ಕಾರಣಗಳಿವೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ. “ನರವಣೆ ಜೀ ಅವರು ತಮ್ಮ ಪುಸ್ತಕದಲ್ಲಿ ಭಾರತ ಸರ್ಕಾರ ಮತ್ತು ಪ್ರಧಾನ ಮಂತ್ರಿಯವರಿಗೆ ಮುಜುಗರ ಉಂಟುಮಾಡುವಂತಹ ಕೆಲವು ಸತ್ಯ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿಯೇ ಈ ಗೊಂದಲ ಸೃಷ್ಟಿಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಜನರಲ್ ನರವಣೆ ಅವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕೃತಿಯ ಪ್ರಕಟಣೆಯ ಏಕೈಕ ಹಕ್ಕನ್ನು ತಾನು ಹೊಂದಿರುವುದಾಗಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸೋಮವಾರ ಸ್ಪಷ್ಟಪಡಿಸಿತ್ತು. “ಪುಸ್ತಕವು ಇನ್ನೂ ಅಧಿಕೃತವಾಗಿ ಪ್ರಕಟಣೆಗೊಂಡಿಲ್ಲ ಮತ್ತು ಯಾವುದೇ ಸ್ವರೂಪದಲ್ಲಿ ಪ್ರತಿಗಳು ಲಭ್ಯವಿಲ್ಲ” ಎಂದು ಸಂಸ್ಥೆ ತಿಳಿಸಿದೆ.
ಅಲ್ಲದೆ, ಚಲಾವಣೆಯಲ್ಲಿರುವ ಯಾವುದೇ ಡಿಜಿಟಲ್ ಅಥವಾ ಮುದ್ರಿತ ಪ್ರತಿಯು ಹಕ್ಕುಸ್ವಾಮ್ಯ ಉಲ್ಲಂಘನೆಯಾಗಲಿದ್ದು, ಇದರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ. ಇದಕ್ಕೂ ಮುನ್ನ, ಕರಡು ಪ್ರತಿಯ ಸೋರಿಕೆ ಮತ್ತು ಪ್ರಸರಣದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ವಿಶೇಷ ತಂಡಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆ.





