ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾದ ರಾತ್ರಿ ಭದ್ರತಾ ಲೋಪ ಉಂಟಾದ ಘಟನೆಯೊಂದು ನಡೆದಿದ್ದು, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ದೇಗುಲದ ರಾಜಗೋಪುರವನ್ನು ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಒಳನುಗ್ಗಿದ ಈತ, ಗೋಪುರದ ಮೇಲಿದ್ದ ಕಳಶಗಳಿಗೆ ಹಾನಿ ಮಾಡಿದ್ದಲ್ಲದೆ, ತನಗೆ ಮದ್ಯ ತಂದುಕೊಟ್ಟರೆ ಮಾತ್ರ ಕೆಳಗೆ ಇಳಿಯುವುದಾಗಿ ಪಟ್ಟು ಹಿಡಿದಿದ್ದಾನೆ.
ಶುಕ್ರವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ, ದೇಗುಲದಲ್ಲಿ ‘ಏಕಾಂತ ಸೇವೆ’ ಮುಕ್ತಾಯಗೊಂಡ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ. ಭದ್ರತಾ ವಲಯವನ್ನು ಭೇದಿಸಿ, ಕಾಂಪೌಂಡ್ ಗೋಡೆ ಹಾರಿದ ಆಗಂತುಕ, ಮಹಾದ್ವಾರದ ಸಮೀಪವಿರುವ ಗೋಪುರವನ್ನು ಸರಸರನೆ ಏರಿದ್ದಾನೆ. ಈ ವೇಳೆ ಆತ ಎರಡು ಕಳಶಗಳನ್ನು ಭಾಗಶಃ ಜಖಂಗೊಳಿಸಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ತಿರುಪತಿ ಪೂರ್ವ ವಿಭಾಗದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ವ್ಯಕ್ತಿಯನ್ನು ಕೆಳಗೆ ಇಳಿಯುವಂತೆ ಮನವೊಲಿಸಲು ಯತ್ನಿಸಿದರು. ಆದರೆ, ಇದಕ್ಕೆ ಜಗ್ಗದ ಆತ, “ನನಗೆ ಕುಡಿಯಲು ಮದ್ಯ ನೀಡಿದರೆ ಮಾತ್ರ ನಾನು ಕೆಳಗೆ ಬರುತ್ತೇನೆ, ಇಲ್ಲದಿದ್ದರೆ ಇಲ್ಲೇ ಇರುತ್ತೇನೆ,” ಎಂದು ಕೂಗಾಡುತ್ತಾ ಅವಾಂತರ ಸೃಷ್ಟಿಸಿದ್ದಾನೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾದಕ ವಸ್ತು ಉತ್ಪಾದನೆಗಿಳಿದ ಹೊರರಾಜ್ಯ ಮಾಫಿಯಾ ಗ್ಯಾಂಗ್; ಕರ್ನಾಟಕದ ಕಳಂಕ!
ಸುಮಾರು ಮೂರು ಗಂಟೆಗಳ ಕಾಲ ನಡೆದ ಹಗ್ಗ-ಜಗ್ಗಾಟದ ನಂತರ, ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಏಣಿಗಳನ್ನು ಅಳವಡಿಸಿ ಗೋಪುರವನ್ನು ಏರಿದರು. ನಂತರ ಹಗ್ಗದ ಸಹಾಯದಿಂದ ಆತನನ್ನು ಬಂಧಿಸಿ, ಸುರಕ್ಷಿತವಾಗಿ ಕೆಳಗೆ ಕರೆತರುವಲ್ಲಿ ಯಶಸ್ವಿಯಾದರು.
ಬಂಧಿತ ವ್ಯಕ್ತಿಯನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾ ನಿವಾಸಿ ‘ಕುಟ್ಟಾಡಿ ತಿರುಪತಿ’ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ತಾನು ಮದ್ಯ ಸೇವಿಸಿರುವುದಾಗಿ ಹಾಗೂ ಅಮಲಿನಲ್ಲಿ ಈ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ತಿರುಪತಿ ಪೂರ್ವ ಡಿವೈಎಸ್‌ಪಿ ಭಕ್ತವತ್ಸಲಂ, “ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅತಿಸೂಕ್ಷ್ಮ ವಲಯದಲ್ಲಿ ಭದ್ರತಾ ಲೋಪ ಉಂಟಾಗಿದ್ದು ಹೇಗೆ ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದು,” ಎಂದು ತಿಳಿಸಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಕಳಶಗಳಿಗೆ ಆಗಿರುವ ಹಾನಿಯ ಬಗ್ಗೆ ದೇಗುಲದ ಅಧಿಕಾರಿಗಳು ಮೌಲ್ಯಮಾಪನ ನಡೆಸಲಿದ್ದಾರೆ.





