ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಒಬ್ಬರು ತನ್ನ ಸ್ನೇಹಿತೆಯ ಮನೆಯಲ್ಲಿ 2 ಲಕ್ಷ ರೂ. ಹಣ ಮತ್ತು ಮೊಬೈಲ್ ಫೋನ್‌ಅನ್ನು ಕದ್ದಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಡಿಎಸ್‌ಪಿ ಎಸಗಿರುವ ಕೃತ್ಯವು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಭೋಪಾಲ್‌ನ ಡಿಎಸ್‌ಪಿ ಕಲ್ಪನಾ ರಘುವಂಶಿ ಅವರು ತನ್ನ ಸ್ನೇಹಿತೆ ಪ್ರಮೀಳಾ ಅವರ ಮನೆಯಲ್ಲಿ ಹಣ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಲ್ಪನಾ ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಲ್ಪನಾ ಮತ್ತು ಪ್ರಮೀಳಾ – ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಇತ್ತೀಚೆಗೆ, ಭೋಪಾಲ್‌ನ ಜೆಹಾಂಗೀರಾಬಾದ್ ಪ್ರದೇಶದಲ್ಲಿರುವ ಪ್ರಮೀಳಾ ಅವರ ಮನೆಗೆ ಕಲ್ಪನಾ ಹೋಗಿದ್ದರು. ಈ ವೇಳೆ, ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸಂಗ್ರಹಿಸಿ ಇಟ್ಟಿದ್ದ 2 ಲಕ್ಷ ರೂ. ಮತ್ತು ಮೊಬೈಲ್ ಕಾಣೆಯಾಗಿರುವುದನ್ನು ಪ್ರಮೀಣಾ ಗಮನಿಸಿದ್ದಾರೆ. ತಮ್ಮ ಮನೆಯ ಸಿಸಿಟಿವಿ ದೃಶ್ಯವಳಿಗಳನ್ನು ಪರಿಶೀಲಿಸಿದ್ದಾರೆ.ಆಗ, ಕಲ್ಪನಾ ಅವರು ಬ್ಯಾಗ್ ಹಿಡಿದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ತಕ್ಷಣವೇ, ಪ್ರಮೀಳಾ ಅವರು ಜೆಹಾಂಗೀರಾಬಾದ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. ದೂರು ಆಧರಿಸಿ ಕಲ್ಪನಾ ವಿರುದ್ಧ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಲ್ಪನಾ ಪರಾರಿಯಾಗಿದ್ದಾರೆ. ಅವರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಪ್ರಮೀಳಾ ಅವರ ಕಾಣೆಯಾಗಿದ್ದ ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಪಿ ಬಿಟ್ಟು ಶರ್ಮಾ, “ಆರೋಪಿ ಡಿಎಸ್‌ಪಿ ಮತ್ತು ದೂರುದಾರರು ಆಪ್ತ ಸ್ನೇಹಿತರಾಗಿದ್ದರು. ಘಟನೆ ನಡೆದ ದಿನ ಪ್ರಮೀಳಾ ಮನೆಯಲ್ಲಿ ಇರಲಿಲ್ಲ. ಡಿಎಸ್‌ಪಿ ಮನೆಗೆ ನುಗ್ಗಿ ನಗದು ಹಾಗೂ ಫೋನ್ ಕಳ್ಳತನ ಮಾಡಿದ್ದಾರೆ. ಅವರ ಮನೆಯಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ನಗದು ಪತ್ತೆಯಾಗಿಲ್ಲ. ಆರೋಪಿ ಅಧಿಕಾರಿಗಾಗಿ ಶೋಧ ನಡೆಯುತ್ತಿದೆ” ಎಂದು ಹೇಳಿದ್ದಾರೆ.




