ಸಿಕ್ಕಿಂನ ತ್ಸೊಮ್ಗೊ ಸರೋವರದ ಬಳಿಯ ಶೆರಾಥಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತ ಉಂಟಾದ ಕಾರಣದಿಂದಾಗಿ 15ನೇ ಮೈಲಿ ಮತ್ತು ತ್ಸೊಮ್ಗೊ ನಡುವೆ ಸುಮಾರು 2,736 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ 541 ವಾಹನಗಳು ಸಿಲುಕಿಕೊಂಡಿವೆ.
ಸಿಕ್ಕಿಂನ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯು ಈ ಮಾಹಿತಿ ನೀಡಿದೆ. ಇನ್ನು ಪ್ರವಾಸಿಗರು ವಾಹನದಲ್ಲೇ ಸಿಲುಕಿದ್ದ ಹಿನ್ನೆಲೆ ಎಸ್‌ಎಚ್‌ಒ, SHO, ಚೆಕ್ ಪೋಸ್ಟ್ ಅಧಿಕಾರಿಗಳು, ಪ್ರವಾಸೋದ್ಯಮ ಅಧಿಕಾರಿಗಳು, ರಸ್ತೆ ಚಾಲಕರ ಸಂಘ, ಪ್ರಯಾಣ ಏಜೆನ್ಸಿಗಳು ಮತ್ತು ಇತರ ಸ್ಥಳೀಯರ ಸಹಾಯದಲ್ಲಿ ಕೂಡಲೇ ರಕ್ಷಣಾ ಮತ್ತು ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ನಡೆಸಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಹಿಮಾಚಲದಲ್ಲಿ ಹಿಮಪಾತ: 560 ರಸ್ತೆಗಳು ಬಂದ್, 4,800 ಟಿಸಿಗಳು ಸ್ಥಗಿತ
ಇಲ್ಲಿಯವರೆಗೆ 541 ವಾಹನಗಳ ಪೈಕಿ ಹೆಚ್ಚಿನವುಗಳನ್ನು ಸುರಕ್ಷಿತವಾಗಿ ಹೊರತರಲಾಗಿದ್ದು, ಉಳಿದ ವಾಹನಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.
ಸಂಪೂರ್ಣ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಸಿಕ್ಕಿಂ ಸರ್ಕಾರದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದ್ದು, ಎಲ್ಲಾ ಪ್ರವಾಸಿಗರ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯು ಎಲ್ಲಾ ಪ್ರವಾಸಿಗರು ಮತ್ತು ಪ್ರವಾಸ ನಿರ್ವಾಹಕರಿಗೆ ಹವಾಮಾನ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದೆ.





