ಕರ್ನಾಟಕ ಸೇರಿದಂತೆ ಉಳಿದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ಪ್ರಕ್ರಿಯೆಯು ಏಪ್ರಿಲ್‌ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗವು ಗುರುವಾರ ತಿಳಿಸಿದೆ.
ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪೂರ್ವ ಸಿದ್ಧತಾ ಕಾರ್ಯಗಳನ್ನು ಅತಿಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಪವನ್ ದಿವಾನ್ ಅವರು ತಮ್ಮ ಪತ್ರದಲ್ಲಿ ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ದೇಶಾದ್ಯಂತ ಎಸ್‌ಐಆರ್ ಅನುಷ್ಠಾನಗೊಳಿಸಬೇಕು ಎಂದು ಕಳೆದ ವರ್ಷ ಜೂನ್ 24 ರಂದು ಆಯೋಗವು ಆದೇಶಿಸಿತ್ತು. ಜೂನ್ 2025 ರಲ್ಲಿಯೇ ಈ ಪ್ರಕ್ರಿಯೆ ಪ್ರಾರಂಭವಾದ ಬಿಹಾರವನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಿಇಒಗಳಿಗೆ ಪೂರ್ವ-ಪರಿಷ್ಕರಣೆ ಕಾರ್ಯಗಳನ್ನು ಶುರು ಮಾಡಲು ನಿರ್ದೇಶಿಸಲಾಗಿತ್ತು ಎನ್ನುವುದನ್ನು ಪ್ರಸ್ತುತ ಪತ್ರದಲ್ಲಿ ನೆನಪಿಸಲಾಗಿದೆ.
ಇದನ್ನು ಓದಿದ್ದೀರಾ? ಬಂಗಾಳ SIR | ವಿಚಾರಣೆಗೆ ಒಳಗಾಗುತ್ತಿರುವ ಮತದಾರರಲ್ಲಿ ಅಲ್ಪಸಂಖ್ಯಾತರೇ ಹೆಚ್ಚು!
ಬಿಹಾರದಲ್ಲಿ ಈ ಪ್ರಕ್ರಿಯೆ ಮುಗಿದ ನಂತರ, ಆಯೋಗವು ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ ಸೇರಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಘೋಷಿಸಿತ್ತು. ಆದರೆ, ಅಸ್ಸಾಂನಲ್ಲಿ ಅಪೂರ್ಣ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯಿಂದ ಎದುರಾದ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ, ಎಸ್‌ಐಆರ್ ಬದಲಾಗಿ ಕೇವಲ ‘ವಿಶೇಷ ಪರಿಷ್ಕರಣೆ’ಯನ್ನು ಮಾತ್ರ ನಡೆಸಲಾಯಿತು.
ಇದೀಗ ಆಯೋಗವು ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ-ನಗರ್ ಹವೇಲಿ ಮತ್ತು ದಮನ್-ದಿಯು, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಲಡಾಖ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ದೆಹಲಿ, ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರ, ತೆಲಂಗಾಣ ಮತ್ತು ಉತ್ತರಾಖಂಡ ಸೇರಿದಂತೆ ಬಾಕಿ ಉಳಿದ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರಕ್ರಿಯೆಯನ್ನು ಕೈಗೊಳ್ಳಲು ಮುಂದಾಗಿದೆ.





