ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗವು (ಇಸಿ) ಮಂಗಳವಾರ (ಡಿ. 16) ರಾಜ್ಯದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ವಿಶೇಷ ತಪಾಸಣಾ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅಡಿಯಲ್ಲಿ ಮರಣ, ಸ್ಥಳಾಂತರ ಮತ್ತು ಎಣಿಕೆ ನಮೂನೆಗಳನ್ನು ಸಲ್ಲಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಎಸ್‌ಐಆರ್ ಪ್ರಕ್ರಿಯೆಗೆ ಮುನ್ನ ರಾಜ್ಯದಲ್ಲಿ ಒಟ್ಟು 7,66,37,529 ಮತದಾರರಿದ್ದರು. ಇದೀಗ 58,20,898 ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಪ್ರಸ್ತುತ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 7,08,16,631 ಮತದಾರರ ಹೆಸರುಗಳು ಉಳಿದಿವೆ.
ಮುಂದಿನ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಕರಡು ಪಟ್ಟಿ ಹಾಗೂ ಮತಗಟ್ಟೆವಾರು ಕೈಬಿಡಲಾದ ಮತದಾರರ ವಿವರ ಮತ್ತು ಅದಕ್ಕೆ ಕಾರಣಗಳ ಪಟ್ಟಿಯನ್ನು ಪಶ್ಚಿಮ ಬಂಗಾಳ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ವೆಬ್‌ಸೈಟ್, ಚುನಾವಣಾ ಆಯೋಗದ ಮತದಾರರ ಪೋರ್ಟಲ್ ಮತ್ತು ‘ಇಸಿಐನೆಟ್’ (ECINET) ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಕರಡು ಪಟ್ಟಿಯು ಸಿಇಒ ಅಧಿಕೃತ ವೆಬ್‌ಸೈಟ್ ceowestbengal.wb.gov.in/Electors ಹಾಗೂ ಆಯೋಗದ ಪೋರ್ಟಲ್ voters.eci.gov.in ನಲ್ಲಿ ಲಭ್ಯವಿದೆ. ಕೈಬಿಡಲಾದ ಮತದಾರರ ಪಟ್ಟಿಯನ್ನು ceowestbengal.wb.gov.in/asd_sir ಲಿಂಕ್ ಮೂಲಕ ಪರಿಶೀಲಿಸಬಹುದಾಗಿದೆ.
ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟ ಮತದಾರರ ವಿಚಾರಣೆ ಪ್ರಕ್ರಿಯೆಯು ಒಂದು ವಾರದೊಳಗೆ ಆರಂಭವಾಗಲಿದೆ. ವಿಚಾರಣಾ ನೋಟಿಸ್‌ಗಳ ಮುದ್ರಣ, ಸಂಬಂಧಪಟ್ಟ ಮತದಾರರಿಗೆ ಅವುಗಳನ್ನು ತಲುಪಿಸುವುದು ಮತ್ತು ಆಯೋಗದ ಡೇಟಾಬೇಸ್‌ನಲ್ಲಿ ಡಿಜಿಟಲ್ ಬ್ಯಾಕಪ್ ರಚಿಸಲು ಈ ಕಾಲಾವಕಾಶ ಅಗತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ
ನವೆಂಬರ್ 4 ರಿಂದ ಡಿಸೆಂಬರ್ 11 ರವರೆಗೆ ನಡೆದ ಎಸ್‌ಐಆರ್ ಪ್ರಕ್ರಿಯೆಯ ಸಂದರ್ಭದಲ್ಲಿ ರಾಜಕೀಯ ಆತಂಕ ಮತ್ತು ಸಾರ್ವಜನಿಕರಲ್ಲಿನ ಅನಿಶ್ಚಿತತೆಯ ನಡುವೆಯೇ ಈ ಪಟ್ಟಿ ಪ್ರಕಟವಾಗಿದೆ. ಜನವರಿ 2025ರ ಮತದಾರರ ಪಟ್ಟಿಯಲ್ಲಿದ್ದು, ಎಸ್‌ಐಆರ್ ನಂತರದ ಕರಡು ಪಟ್ಟಿಯಲ್ಲಿ ಇಲ್ಲದಿರುವ ಹೆಸರುಗಳು ಈ ‘ಡಿಲೀಟ್’ ಪಟ್ಟಿಯಲ್ಲಿವೆ ಎಂದು ಆಯೋಗ ತಿಳಿಸಿದೆ.
ಪ್ರತ್ಯೇಕ ಪೋರ್ಟಲ್ ಮೂಲಕ ಮತದಾರರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರು ಪಟ್ಟಿಯಿಂದ ಹೋಗಿದೆಯೇ ಮತ್ತು ಯಾವ ಕಾರಣಕ್ಕಾಗಿ ಹೋಗಿದೆ ಎಂಬುದನ್ನು ಪರಿಶೀಲಿಸಬಹುದು.
58 ಲಕ್ಷ ಹೆಸರುಗಳ ರದ್ದತಿಗೆ ಕಾರಣಗಳೇನು?
ಸಂಗ್ರಹಿಸಲಾಗದ ಎಸ್‌ಐಆರ್ ಎಣಿಕೆ ನಮೂನೆಗಳ ಕಾರಣದಿಂದಲೇ ಬಹುತೇಕ ಹೆಸರುಗಳು ರದ್ದಾಗಿವೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಮೃತಪಟ್ಟವರು, ನೋಂದಾಯಿತ ವಿಳಾಸದಿಂದ ಶಾಶ್ವತವಾಗಿ ಸ್ಥಳಾಂತರಗೊಂಡವರು, ಪತ್ತೆಯಾಗದವರು ಅಥವಾ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹೆಸರು ಹೊಂದಿರುವವರನ್ನು ಪಟ್ಟಿಯಿಂದ ತೆಗೆಯಲಾಗಿದೆ.
ಸಿಇಒ ಕಚೇರಿ ಬಿಡುಗಡೆ ಮಾಡಿದ ವಿವರಗಳು:
ಮೃತಪಟ್ಟವರು: 24,16,852
ಶಾಶ್ವತವಾಗಿ ಸ್ಥಳಾಂತರಗೊಂಡವರು: 19,88,076
ಪತ್ತೆಯಾಗದವರು: 12,20,038
ನಕಲಿ ನಮೂದುಗಳು: 1.38 ಲಕ್ಷ
ಅದೃಶ್ಯ(ಗೋಸ್ಟ್) ಮತದಾರರು: 1,83,328
ಇತರೆ ಕಾರಣಗಳು: 57,000ಕ್ಕೂ ಹೆಚ್ಚು
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಕರಡು ಪಟ್ಟಿಯಿಂದ ಹೆಸರು ಕೈಬಿಟ್ಟಾಕ್ಷಣ ಎಲ್ಲವೂ ಮುಗಿದಂತಲ್ಲ ಎಂದು ಚುನಾವಣಾ ಆಯೋಗ ಒತ್ತಿಹೇಳಿದೆ. “ಹೆಸರು ರದ್ದಾಗಿರುವ ಬಗ್ಗೆ ಆಕ್ಷೇಪಣೆ ಇದ್ದವರು ಡಿಸೆಂಬರ್ 16, 2025 ರಿಂದ ಜನವರಿ 15, 2026ರವರೆಗೆ ನಿಗದಿಪಡಿಸಲಾದ ಅವಧಿಯಲ್ಲಿ ಪೂರಕ ದಾಖಲೆಗಳೊಂದಿಗೆ ‘ನಮೂನೆ 6’ (Form 6) ಮತ್ತು ಘೋಷಣಾ ಪತ್ರವನ್ನು ಸಲ್ಲಿಸಬಹುದು,” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇದನ್ನು “ಬಿಜೆಪಿ ಮತ್ತು ಚುನಾವಣಾ ಆಯೋಗದ ಜಂಟಿ ಪಿತೂರಿ” ಎಂದು ಆರೋಪಿಸಿದೆ. “ಸುಮಾರು ಎರಡು ಕೋಟಿ ಮತದಾರರಿಗೆ ವಿಚಾರಣೆ ನಡೆಸುವುದು ನಾಗರಿಕರನ್ನು ಬೆದರಿಸುವ ಮತ್ತು ಅವರ ಪೌರತ್ವವನ್ನು ಪ್ರಶ್ನಿಸುವ ಪ್ರಯತ್ನವಾಗಿದೆ,” ಎಂದು ಟಿಎಂಸಿ ಹೇಳಿದೆ.
ಆದರೆ ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಅಂತಿಮ ಮತದಾರರ ಪಟ್ಟಿ ಫೆಬ್ರವರಿ 14 ರಂದು ಪ್ರಕಟವಾಗಲಿದ್ದು, ಆ ನಂತರವೇ ತಾವು ಅಂಕಿಅಂಶಗಳ ಬಗ್ಗೆ ಮಾತನಾಡುವುದಾಗಿ ಅವರು ಹೇಳಿದ್ದಾರೆ.





