‘ಸತ್ಯ’ ಮತ್ತು ‘ಅಹಿಂಸೆ’ಯ ತತ್ವಗಳನ್ನು ಆಧಾರವಾಗಿ ಮಾಡಿಕೊಂಡು ನರೇಂದ್ರ ಮೋದಿ–ಆರ್‌ಎಸ್‌ಎಸ್ ಸರ್ಕಾರವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ‘ವೋಟ್ ಚೋರ್, ಗಡ್ಡಿ ಛೋಡ್’ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
“ನಾವು ಸತ್ಯದ ಬೆಂಬಲದಲ್ಲಿದ್ದೇವೆ. ಅಧಿಕಾರದ ಮದದಲ್ಲಿ ಮೋದಿ–ಆರ್‌ಎಸ್‌ಎಸ್ ಸರ್ಕಾರ ಮತ ಕಳ್ಳತನಕ್ಕೆ ಇಳಿದಿದೆ. ಸತ್ಯ ಮತ್ತು ಅಸತ್ಯದ ನಡುವಿನ ಈ ಹೋರಾಟದಲ್ಲಿ ಚುನಾವಣಾ ಆಯೋಗವು ಬಿಜೆಪಿ ಸರ್ಕಾರದ ಜೊತೆಗೆ ನಿಂತಿದೆ,” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಚುನಾವಣಾ ವೇಳೆಯಲ್ಲಿ ಬಿಜೆಪಿ 10 ಸಾವಿರ ರೂ. ವರ್ಗಾಯಿಸಿದ್ದ ಆರೋಪದ ಕುರಿತು ಉಲ್ಲೇಖಿಸಿದ ಅವರು, ಈ ಕುರಿತು ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು. ಚುನಾವಣಾ ಆಯುಕ್ತರಿಗೆ ವಿನಾಯಿತಿ ನೀಡುವ ಹೊಸ ಕಾನೂನನ್ನು ಕೇಂದ್ರ ಸರ್ಕಾರ ತಂದಿದೆ ಎಂದು ಹೇಳಿದ ಅವರು, “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು. ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದರು.
ವಿಳಂಬವಾದರೂ ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, “ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ಹೋರಾಟ ಮುಂದುವರಿಸುತ್ತದೆ,” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ದೇಶ ದ್ರೋಹಿಗಳು ಅಧಿಕಾರದಿಂದ ಕಿತ್ತೊಗೆಯಿರಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮತ ಕಳ್ಳತನ’ದಲ್ಲಿ ತೊಗಿರುವವರು ದ್ರೋಹಿಗಳಾಗಿದ್ದು, ಸಂವಿಧಾನ ಮತ್ತು ಮತದಾನದ ಹಕ್ಕನ್ನು ಉಳಿಸಲು ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ದೇಶವನ್ನು ಉಳಿಸಲು ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹೀಗಾಗಿ ಭಾರತೀಯರೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಸಿದ್ಧಾಂತವನ್ನು ಬಲಪಡಿಸುವುದು ಕರ್ತವ್ಯ ಎಂದು ಕರೆ ನೀಡಿದರು. ಇದೇ ವೇಳೆ, ಆರ್‌ಎಸ್‌ಎಸ್ ಸಿದ್ಧಾಂತವು ರಾಷ್ಟ್ರವನ್ನು ಸರ್ವನಾಶ ಮಾಡಲಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಖರ್ಗೆ, “ಬಿಜೆಪಿಯವರು ‘ಗದ್ದಾರ್’ಗಳು ಮತ್ತು ‘ಡ್ರಾಮೇಬಾಜ್’ಗಳು (ನಾಟಕೀಯ ವರ್ತನೆಯವರು). ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅನಿವಾರ್ಯವಾಗಿದೆ,” ಎಂದು ಗುಡುಗಿದರು.
ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಸಲುವಾಗಿ ವೈಯಕ್ತಿಕ ವಿಚಾರವೊಂದನ್ನು ಪ್ರಸ್ತಾಪಿಸಿದ ಖರ್ಗೆ, “ಬೆಂಗಳೂರಿನಲ್ಲಿ ನನ್ನ ಮಗನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದರೂ ನಾನು ಅಲ್ಲಿಗೆ ಹೋಗಲಿಲ್ಲ. ‘140 ಕೋಟಿ ಜನರನ್ನು ಉಳಿಸುವುದು ಮುಖ್ಯ’ ಎಂದು ಭಾವಿಸಿ, ಶಸ್ತ್ರಚಿಕಿತ್ಸೆಗಿಂತ ಈ ರ‍್ಯಾಲಿಯಲ್ಲಿ ಭಾಗವಹಿಸುವುದೇ ಹೆಚ್ಚು ಆದ್ಯತೆಯ ವಿಷಯವೆಂದು ಪರಿಗಣಿಸಿ ಇಲ್ಲಿಗೆ ಬಂದಿದ್ದೇನೆ,” ಎಂದು ಹೇಳಿದರು.
ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ಎದುರಿಸಿ: ಬಿಜೆಪಿಗೆ ಸವಾಲೆಸೆದ ಪ್ರಿಯಾಂಕಾ ಗಾಂಧಿ
“ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲು ಬಿಜೆಪಿಗೆ ನಾನು ಸವಾಲು ಹಾಕುತ್ತೇನೆ. ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧಿಸಿದರೆ ಅವರು ಎಂದಿಗೂ ಗೆಲ್ಲಲಾರರು ಎಂಬುದು ಅವರಿಗೆ ತಿಳಿದಿದೆ” ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಗೆ ಸವಾಲೆಸಿದಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಅನುಮಾನ ಹುಟ್ಟಿಸುತ್ತಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಜನರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲು ಹೇಗೆ ಪಿತೂರಿ ನಡೆಸಿದರು ಎಂಬುದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು, “ದೇಶದ ಸಂಸ್ಥೆಗಳನ್ನು ಸರ್ಕಾರದ ಮುಂದೆ ತಲೆ ಬಾಗಿಸಲಾಗುತ್ತಿದೆ. 10 ಸಾವಿರ ರೂ. ಪಾವತಿ ಪ್ರಕರಣದ ಮೇಲೆ ಚುನಾವಣಾ ಆಯೋಗ ಕಣ್ಣು ಮುಚ್ಚಿರುವುದು ಮತ ಕಳ್ಳತನಕ್ಕೆ ಸಾಕ್ಷಿಯಾಗಿದೆ” ಎಂದು ಹೇಳಿದರು.





