ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿಗೆ ಜಾರಿ ನಿರ್ದೇಶನಾಲಯ(ಇಡಿ) ಮತ್ತೆ ಸಮನ್ಸ್ ಜಾರಿ ಮಾಡಿದೆ. ಹಲವು ಬಾರಿ ಸಮನ್ಸ್ ನೀಡಿದರೂ ಅನಿಲ್ ವಿಚಾರಣೆಗೆ ಹಾಜರಾಗಿಲ್ಲ. ಈಗ ಮತ್ತೆ ಸಮನ್ಸ್ ನೀಡಲಾಗಿದೆ.
ಈ ನಡುವೆ ಅನಿಲ್ ಪತ್ನಿ, ಮಾಜಿ ನಟಿ ಟೀನಾ ಅಂಬಾನಿ ಕೂಡಾ ರಡು ಬಾರಿ ವಿಚಾರಣೆ ಮುಂದೂಡಿಕೆ ಕೋರಿದ್ದಾರೆ. ಫೆಬ್ರವರಿ 10 ಮತ್ತು ಫೆಬ್ರವರಿ 17ರಂದು ಹಾಜರಾಗುವಂತೆ ಇಡಿ ತಿಳಿಸಿದ್ದು, ಟೀನಾ ಇಡಿ ಮುಂದೆ ಹಾಜರಾಗಿಲ್ಲ. ಇದೀಗ ಅವರಿಗೂ ಇಡಿ ಹೊಸದಾಗಿ ವಿಚಾರಣೆಗೆ ದಿನಾಂಕ ನೀಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನು ಓದಿದ್ದೀರಾ? ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರತ್ಯೇಕ ಹೇಳಿಕೆಗಳನ್ನು ದಾಖಲಿಸಲು ಇಡಿ ದಂಪತಿಗೆ ತಿಳಿಸಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 2025ರ ಆಗಸ್ಟ್‌ನಲ್ಲಿ ಅನಿಲ್ ಅಂಬಾನಿ ಒಮ್ಮೆ ಇಡಿ ಮುಂದೆ ಹಾಜರಾಗಿದ್ದಾರೆ. ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿ ಐಷಾರಾಮಿ ಕಾಂಡೋಮಿನಿಯಂ ಖರೀದಿಗೆ ಹಣದ ಮೂಲ ಎಲ್ಲಿಂದ ಬಂದಿದೆ ಎಂಬುದಕ್ಕೆ ಸಂಬಂಧಿಸಿದಂತೆ ಟೀನಾ ಅಂಬಾನಿ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಇಡಿ ಇತ್ತೀಚೆಗೆ ಮಾಜಿ ಆರ್‌ಕಾಮ್ (ರಿಲಯನ್ಸ್ ಕಮ್ಯುನಿಕೇಷನ್) ಅಧ್ಯಕ್ಷ ಪುನೀತ್ ಗಾರ್ಗ್ ಅವರನ್ನು ಬಂಧಿಸಿದೆ.
ಇನ್ನು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ADAG) ವಿರುದ್ಧದ ಬ್ಯಾಂಕ್ ವಂಚನೆ ಮತ್ತು ಸಂಬಂಧಿತ ಹಣಕಾಸಿನ ಅಕ್ರಮಗಳ ಬಹು ಪ್ರಕರಣಗಳ ತನಿಖೆಗಾಗಿ ಇಡಿ ಇತ್ತೀಚೆಗೆ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ತನಿಖೆಯ ಭಾಗವಾಗಿ ಅದು 12,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ರಿಲಯನ್ಸ್ ಗ್ರೂಪ್ ಕಂಪನಿಗಳ ವಿರುದ್ಧ ECIR ಗಳು (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಫಾರ್ಮೇಶನ್ ರಿಪೋರ್ಟ್ಸ್) ಎಂಬ ಮೂರು ದೂರುಗಳನ್ನು ದಾಖಲಿಸಿದೆ.





