ಆಂಧ್ರಪ್ರದೇಶದ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದಲ್ಲಿ ಇತ್ತೀಚೆಗೆ ಸಲ್ಲಿಸಿದ ಎಫ್‌ಐಆರ್, ದಾಖಲೆಗಳು ಮತ್ತು ಚಾರ್ಜ್‌ಶೀಟ್ ಅನ್ನು ಇಡಿ ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಿದ ಪ್ರಕರಣದಲ್ಲಿ ಒಂಬತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಮತ್ತು ಐದು ಡೈರಿ ತಜ್ಞರು ಸೇರಿದಂತೆ 36 ಜನರನ್ನು ಎಸ್‌ಐಟಿ ಆರೋಪಿಗಳೆಂದು ಹೆಸರಿಸಿದೆ.
ಇದನ್ನು ಓದಿದ್ದೀರಾ? ತಿರುಪತಿ ಲಡ್ಡು ವಿವಾದ | ಆರೋಪಪಟ್ಟಿ ಸಲ್ಲಿಸಿದ ಸಿಬಿಐ ನೇತೃತ್ವದ ಎಸ್‌ಐಟಿ, 36 ಆರೋಪಿಗಳ ಹೆಸರು ಉಲ್ಲೇಖ
ಎಸ್‌ಐಟಿಯ ಸಂಶೋಧನೆಗಳ ಪ್ರಕಾರ, ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸಂಸ್ಥೆಗೆ ತುಪ್ಪವಾಗಿ ಮಾರಾಟ ಮಾಡಲಾದ ಮೂಲ ವಸ್ತುವನ್ನು ರಾಸಾಯನಿಕವಾಗಿ ಸಂಸ್ಕರಿಸಿದ ಪಾಮೋಲಿನ್ ಎಣ್ಣೆ ಮತ್ತು ಇತರ ಪದಾರ್ಥಗಳೆಂದು ಹೆಸರಿಸಲಾಗಿದೆ.
ಇದೀಗ ಆರೋಪಿಗಳು ಹಣ ವರ್ಗಾವಣೆ ಮಾಡಿರುವ ಮತ್ತು ತುಪ್ಪ ಕಲಬೆರಕೆ ಮೂಲಕ ಆರೋಪಿಗಳು ಅಕ್ರಮವಾಗಿ ಹಣ ಗಳಿಸಿರುವ ಸಾಧ್ಯತೆಯ ಬಗ್ಗೆ ಇಡಿ ಪರಿಶೀಲನೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳು ಹವಾಲಾ ವ್ಯವಹಾರ ಮತ್ತು ಹಣವನ್ನು ಇತರೆಡೆ ವರ್ಗಾಯಿಸಿರುವ ಶಂಕೆಯೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು 2024ರ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತದ ಅವಧಿಯಲ್ಲಿ ತಿರುಪತಿ ಲಡ್ಡು (ಪ್ರಸಾದ) ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳಿಕೊಂಡಿದ್ದರು, ಇದು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು.





