ಇಡಿ ತನಿಖೆ ಮತ್ತು ದಾಳಿಯು ಅಧಿಕೃತವಾಗಿ ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದೆಯಾದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಲ್ಕತ್ತಾಗೆ ಭೇಟಿ ನೀಡಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ. ಚುನಾವಣೆಯ ಸಮಯದಲ್ಲಿ ಈ ದಾಳಿ ನಡೆದಿರುವುದು ರಾಜಕೀಯ ಪ್ರೇರಿತವೆನ್ನಲಾಗಿದೆ.
ಮೋದಿ-ಶಾ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂಬ ಆರೋಪ ಇಂದು-ನಿನ್ನೆಯದಲ್ಲ. ಸ್ವತಃ ಸುಪ್ರೀಂ ಕೋರ್ಟ್ ಕೂಡ ಕೇಂದ್ರೀಯ ಸಂಸ್ಥೆಗಳಲ್ಲಿ ಒಂದಾದ ಸಿಬಿಐಅನ್ನು ‘ಪಂಜರದ ಗಿಳಿ’ ಎಂದೇ ಬಣ್ಣಿಸಿದೆ. ಕೇಂದ್ರ ಪಂಜರದಲ್ಲಿರುವ ಮತ್ತೊಂದು ಗಿಳಿ ಜಾರಿ ನಿರ್ದೇಶನಾಲಯದ (ಇಡಿ) ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಸಮರ ಸಾರಿದ್ದಾರೆ. ಮಮತಾ ಸವಾಲಿಗೆ ಅದುರಿದ ಇಡಿ ಹೈಕೋರ್ಟ್‌ನ ಮೊರೆಹೋಗಿದೆ.
ಗುರುವಾರ, ಮಮತಾ ಅವರ ಟಿಎಂಸಿಗೆ ರಾಜಕೀಯ ಸಲಹೆಗಳನ್ನು ನೀಡುವ ‘ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ’ (ಐ-ಪ್ಯಾಕ್) ಸಂಸ್ಥೆಯ ಸಂಸ್ಥಾಪಕ ಪ್ರತೀಕ್ ಜೈನ್ ನಿವಾಸ ಮತ್ತು ಕಚೇರಿ ಮೇಲೆ ಇಡಿ ದಾಳಿ ನಡೆಸಿತ್ತು. ಇಡಿ ಅಧಿಕಾರಿಗಳು ಜೈನ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾಗಲೇ ಸ್ಥಳಕ್ಕೆ ಮಮತಾ ಧಾವಿಸಿದರು. ಇಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಮತಾ, ‘ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಟಿಎಂಸಿಯ ರಾಜಕೀಯ ಕಾರ್ಯತಂತ್ರ ಮತ್ತು ಅಭ್ಯರ್ಥಿಗಳ ಮಾಹಿತಿಯನ್ನು ಕಸಿದುಕೊಂಡು, ಬಿಜೆಪಿಗೆ ಒದಗಿಸಲು ಈ ದಾಳಿ ನಡೆದಿದೆ’ ಎಂದು ಆರೋಪಿಸಿದರು. ಪ್ರತಿಯಾಗಿ, ತನಿಖೆಗೆ ಅಡ್ಡಿಪಡಿಸಿ, ಕಡತಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿ ಮಮತಾ ವಿರುದ್ಧ ಇಡಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.
ಹೈಕೋರ್ಟ್‌ನಲ್ಲಿ ಇಡಿ ಸಲ್ಲಿಸಿದ ಅರ್ಜಿಯ ವಿಚಾರಣೆ ಶುಕ್ರವಾರ (ಇಂದು) ನಡೆಯಲಿದೆ. ಇದೇ ಸಮಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮಮತಾ ಕೂಡ ಕರೆಕೊಟ್ಟಿದ್ದಾರೆ.
ಐ-ಪ್ಯಾಕ್ ಮುಖ್ಯಸ್ಥ ಪ್ರತೀಕ್ ಜೈನ್ ಅವರು ಬಂಗಾಳ ರಾಜಕೀಯ ಮತ್ತು ಆಡಳಿತದಲ್ಲಿ ಹೆಚ್ಚು ಪ್ರಭಾವಶಾಲಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಐ-ಪ್ಯಾಕ್ ಸಂಸ್ಥೆಯು ಆಡಳಿತಾರೂಢ ಟಿಎಂಸಿ ಜೊತೆ 2019ರಿಂದ ನಿಕಟ ಸಂಬಂಧ ಹೊಂದಿದೆ. ಚುನಾವಣಾ ತಂತ್ರ, ಆಡಳಿತ ಯೋಜನೆಗಳು ಹಾಗೂ ಪಕ್ಷದ ಸಾಂಸ್ಥಿಕ ಪುನರ್ರಚನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಟಿಎಂಸಿ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿದೆ. ಟಿಎಂಸಿಗೆ ಆಡಳಿತ ಮತ್ತು ಕಾರ್ಯತಂತ್ರದಲ್ಲಿ ನಿರಂತರವಾಗಿ ಸಲಹೆಗಳನ್ನು ನೀಡುತ್ತಿದೆ.
ದೆಹಲಿಯಲ್ಲಿ ದಾಖಲಾಗಿರುವ ಹಳೆಯ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐ-ಪ್ಯಾಕ್ ಕಚೇರಿ ಮತ್ತು ಜೈನ್ ಅವರ ನಿವಾಸದ ಮೇಲೆ ದಾಳಿ ನಡೆಸಿರುವುದಾಗಿ ಇಡಿ ಹೇಳಿಕೊಂಡಿದೆ. ಆದರೆ, ಚುನಾವಣಾ ಹೊಸ್ತಿಲಿನಲ್ಲಿ ನಡೆದಿರುವ ಈ ದಾಳಿಯು ರಾಜಕೀಯ ಪ್ರೇರಿತವೆಂದು ಮಮತಾ ಬಣ್ಣಿಸಿದ್ದಾರೆ. ”ಟಿಎಂಸಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅವರು ಪಕ್ಷಕ್ಕೆ ಸಂಬಂಧಿಸಿದ ಹಾರ್ಡ್ ಡಿಸ್ಕ್, ಪಕ್ಷದ ಆಂತರಿಕ ಕಾರ್ಯತಂತ್ರದ ದಾಖಲೆ ಹಾಗೂ ಫೋನ್‌ಗಳನ್ನು ವಶಕ್ಕೆ ಪಡೆಯುತ್ತಿದ್ದರು. ಇದು ರಾಜಕೀಯ ಕಿರುಕುಳ. ನಾನು ಪಕ್ಷಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಮರಳಿ ತಂದಿದ್ದೇನೆ” ಎಂದು ಮಮತಾ ಹೇಳಿದ್ದಾರೆ.
”ಟಿಎಂಸಿಯ ದಾಖಲೆಗಳನ್ನು ಸಂಗ್ರಹಿಸುವುದು ಇಡಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಕೆಲಸವೇ? ದೇಶವನ್ನು ರಕ್ಷಿಸಲು ಸಾಧ್ಯವಾಗದ ಅವರು ಚುನಾವಣೆಗೂ ಮುನ್ನ ನಮ್ಮ ಪಕ್ಷಕ್ಕೆ ಕಿರುಕುಳ ನೀಡಲು ಏಜೆನ್ಸಿಗಳನ್ನು ಕಳುಹಿಸುತ್ತಿದ್ದಾರೆ. ನನ್ನ ಪಕ್ಷದ ಎಲ್ಲ ದಾಖಲೆಗಳನ್ನು ಕಿತ್ತುಕೊಳ್ಳಲು ಹವಣಿಸುತ್ತಿದ್ದಾರೆ. ಅವರು ಅತ್ಯಂತ ನೀಚ ಮತ್ತು ‘ನಾಟಿ’ (ತುಂಟ) ಗೃಹ ಸಚಿವರು. ಇದು ಅವರ ಕಾರ್ಯನಿರ್ವಹಣೆಯೇ? ಪ್ರಧಾನಿ ಮೋದಿ ಅವರು ತಮ್ಮ ಗೃಹ ಸಚಿವರನ್ನು ನಿಯಂತ್ರಿಸಬೇಕು. ನಾನು ಬಿಜೆಪಿ ಕಚೇರಿಯ ಮೇಲೆ ದಾಳಿ ಮಾಡಿದರೆ ಫಲಿತಾಂಶ ಏನಾಗುತ್ತದೆ?” ಎಂದು ಎಚ್ಚರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಅಧಿಕಾರಕ್ಕಾಗಿ ಬಿಜೆಪಿ ತಂತ್ರ – ಮಮತಾ ಪ್ರತಿತಂತ್ರ
”ಟಿಎಂಸಿ ನೋಂದಾಯಿತ ರಾಜಕೀಯ ಪಕ್ಷವಾಗಿದ್ದು, ನಿಯಮಿತವಾಗಿ ಆದಾಯ ತೆರಿಗೆ ಪಾವತಿಸುತ್ತಿದೆ. ನಮ್ಮಲ್ಲಿ ಚುನಾಯಿತ ಪ್ರತಿನಿಧಿಗಳಿದ್ದಾರೆ. ಇಡಿಗೆ ಏನಾದರೂ ಬೇಕಾದರೆ, ಅವರು ಆದಾಯ ತೆರಿಗೆ ಇಲಾಖೆಯಿಂದ ವಿವರಗಳನ್ನು ಪಡೆಯಬಹುದಿತ್ತು” ಎಂದು ಮಮತಾ ಹೇಳಿದ್ದಾರೆ.
”ಒಂದು ಕಡೆ, ಅವರು (ಮೋದಿ-ಶಾ) ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಮೂಲಕ ಎಲ್ಲ ಮತದಾರರ ಹೆಸರುಗಳನ್ನು ಅಳಿಸುತ್ತಿದ್ದಾರೆ. ಮತ್ತೊಂದೆಡೆ, ಚುನಾವಣೆಗಳ ಕಾರಣಕ್ಕಾಗಿ ನನ್ನ ಪಕ್ಷದ ಎಲ್ಲ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅವರು ಬಂಗಾಳವನ್ನು ಗೆಲ್ಲಲು ಬಯಸಿದ್ದರೆ, ನಮ್ಮೊಂದಿಗೆ ರಾಜಕೀಯವಾಗಿ ಹೋರಾಡಲಿ. ಇಂತಹ ಕಪಟ ಹಾದಿ ಹಿಡಿಯಬಾರದು. ಇಂತಹ ವರ್ತನೆಯಿಂದ ನೀವು ಶೂನ್ಯಕ್ಕೆ ಇಳಿಯುತ್ತೀರಿ” ಎಂದು ಸವಾಲು ಹಾಕಿದ್ದಾರೆ.
ಆದಾಗ್ಯೂ, ಇಡಿ ಪ್ರತಿಕ್ರಿಯೆಯಲ್ಲಿ, ”ಅಕ್ರಮವಾಗಿ ಸಾಗಣೆ ಮಾಡಿದ ಕಲ್ಲಿದ್ದಲಿನ ಹೆಚ್ಚು ಭಾಗವನ್ನು ‘ಶಾಖಂಭರಿ ಗ್ರೂಪ್ ಆಫ್ ಕಂಪನಿ’ಗೆ ಮಾರಾಟ ಮಾಡಲಾಗಿದೆ. ಪ್ರಕರಣದಲ್ಲಿ ವಿವಿಧ ವ್ಯಕ್ತಿಗಳ ಹೇಳಿಕೆಗಳು ಸೇರಿದಂತೆ ಬಹು ಪುರಾವೆಗಳು ದೊರೆತಿವೆ. ಕಲ್ಲಿದ್ದಲು ಕಳ್ಳಸಾಗಣೆಯಿಂದ ದೊರೆತ ಆದಾಯದಲ್ಲಿ ಹತ್ತಾರು ಕೋಟಿ ರೂ. ಹಣವನ್ನು ಹವಾಲಾ ಆಪರೇಟರ್‌ಗಳು ಐ-ಪ್ಯಾಕ್‌ಗೆ ನೀಡಿದ್ದಾರೆ. ಹವಾಲಾ ಹಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಐ-ಪ್ಯಾಕ್ ಕೂಡ ಸೇರಿದೆ” ಎಂದು ಆರೋಪಿಸಿದೆ.
”ನಮ್ಮ ತನಿಖೆಗೆ ಬಂಗಾಳ ಮುಖ್ಯಮಂತ್ರಿ ಅಡ್ಡಿಪಡಿಸುತ್ತಿದ್ದಾರೆ. ಮಮತಾ ಮತ್ತು ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಮ್ಮ ವಿಚಾರಣೆ ಶಾಂತಿಯುತ ಮತ್ತು ವೃತ್ತಿಪರ ರೀತಿಯಲ್ಲಿ ನಡೆಯುತ್ತಿತ್ತು. ಆದರೆ, ಮಮತಾ ಅವರು ಪ್ರತೀಕ್ ಜೈನ್ ಅವರ ನಿವಾಸಕ್ಕೆ ಪ್ರವೇಶಿಸಿ, ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ತೆಗೆದುಕೊಂಡು ಹೋದರು. ಬಳಿಕ, ಅವರು ಐ-ಪ್ಯಾಕ್ ಕಚೇರಿ ಆವರಣಕ್ಕೆ ತೆರಳಿದರು. ಅಲ್ಲಿಯೂ, ಅವರ ಸಹಾಯಕರು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗಳು ಭೌತಿಕ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಬಲವಂತವಾಗಿ ಕೊಂಡೊಯ್ದರು. ಅವರ ನಡೆಯು ತನಿಖೆಗೆ ಅಡಚಣೆ ಮಾಡಿದೆ” ಎಂದು ಆರೋಪಿಸಿದೆ.
ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಬಿಜೆಪಿ ಕಡೆಗಣಿಸಿದ್ದ ಘೋಷ್‌ಗೆ ಮತ್ತೆ ಜೋಶ್!
ಇದೆಲ್ಲವೂ, ಕೇಂದ್ರ ತನಿಖಾ ಸಂಸ್ಥೆಗಳನ್ನು ಮೋದಿ-ಶಾ ಜೋಡಿ ದುರುಪಯೋಗ ಮಾಡಿಕೊಳ್ಳುತ್ತಿರುವ ಭಾಗವೆಂದು ಟಿಎಂಸಿ ಆರೋಪಿಸಿದೆ. ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವ ಬಿಜೆಪಿ ವಿರುದ್ಧ ಶುಕ್ರವಾರ ಸಂಜೆ 4 ಗಂಟೆಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಟಿಎಂಸಿ ಘೋಷಿಸಿದೆ.
ಮಮತಾ ಅವರ ಕ್ರಮವನ್ನು ವಿಪಕ್ಷ ನಾಯಕ, ಬಿಜೆಪಿ ಮುಖಂಡ ಸುವೇಂದ್ರ ಅಧಿಕಾರಿ ಟೀಕಿಸಿದ್ದಾರೆ. ”ಇದು ಅನೈತಿಕ ಮತ್ತು ಸಾಂವಿಧಾನಿಕ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವಾಗಿದೆ. ಮುಖ್ಯಮಂತ್ರಿ ಕೇವಲ ರಾಜಕೀಯ ನಾಯಕರಲ್ಲ, ಆಡಳಿತ ಮುಖ್ಯಸ್ಥರು” ಎಂದಿದ್ದಾರೆ. ಆದಾಗ್ಯೂ, ಅವರು ತನಿಖೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇಡಿ ತನಿಖೆ ಮತ್ತು ದಾಳಿಯು ಅಧಿಕೃತವಾಗಿ ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದೆಯಾದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಲ್ಕತ್ತಾಗೆ ಭೇಟಿ ನೀಡಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ. ಚುನಾವಣೆಯ ಸಮಯದಲ್ಲಿ ಈ ದಾಳಿ ನಡೆದಿರುವುದು ರಾಜಕೀಯ ಪ್ರೇರಿತವೆಂದು ರಾಜಕೀಯ ವಿಶ್ಲೇಷಕರು ಕೂಡ ಹೇಳುತ್ತಾರೆ.
ಕೇಂದ್ರ ಸರ್ಕಾರ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಇಂತಹ ದಾಳಿಗಳನ್ನು ಮಮತಾ ವಿರೋಧಿಸುವುದು ಮತ್ತು ಪ್ರತಿಭಟಿಸುವುದು ಇದೇ ಮೊದಲಲ್ಲ. 2019ರಲ್ಲಿ, ಶಾರದಾ ಹಗರಣಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಪೊಲೀಸ್ ಆಯುಕ್ತರಾಗಿದ್ದ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಲು ಸಿಬಿಐ ಯತ್ನಿಸಿತ್ತು. ಆಗ, ಕಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಗೆ ಧಾವಿಸಿದ್ದ ಮಮತಾ, ಸಿಬಿಐ ವಿರುದ್ಧ ಧರಣಿ ಪ್ರತಿಭಟನೆ ನಡೆಸಿದ್ದರು.




