ಆಯೋಗವು ಈವರೆಗೆ ಕಾಂಗ್ರೆಸ್ ಆರೋಪಗಳಿಗೆ ತೃಪ್ತಿಕರವಾದ ಉತ್ತರ ನೀಡಿಲ್ಲ. ಬದಲಾಗಿ, ಬಿಜೆಪಿಯಂತೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನೇ ದೂಷಿಸುತ್ತಿದೆ. ದಾಖಲೆಗಳನ್ನು ಕೇಳುತ್ತಿದೆ. ಅವರನ್ನೇ ಹೊಣೆಗಾರರನ್ನಾಗಿ ಮಾಡುವಂತೆ ವರ್ತಿಸುತ್ತಿದೆ.
ಸುದ್ದಿ ಮತ್ತು ಮಾಹಿತಿಗಳು ಭರಪೂರವಾಗಿ ದೊರೆಯುವ ಈ ಯುಗದಲ್ಲಿ, ಅಂತಾರಾಷ್ಟ್ರೀಯ ರಾಜಕೀಯದ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಘಟನೆಗಳು ಮತ್ತು ಬೆಳವಣಿಗೆಗಳು ಘಟಿಸುತ್ತಿವೆ. ಇಂತಹ ಸಮಯದಲ್ಲಿ, ದೇಶೀಯ ವಿಷಯಗಳು ಮತ್ತು ರಾಜಕೀಯವು ಸಾಮಾನ್ಯ ಭಾರತೀಯರ ಗಮನಕ್ಕೆ ಬಾರದೇ ಇರಬಹುದು. ಇದರ ಹಿಂದೆ, ಆಳುವವರ ತಂತ್ರವೂ ಇರಬಹುದು.
ಸದ್ಯ, ಸಂಸತ್ತಿನಲ್ಲಿನ ವಿರೋಧ ಪಕ್ಷ ಕಾಂಗ್ರೆಸ್ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದೆ. ಚುನಾವಣಾ ಆಯೋಗವು ಬಿಜೆಪಿ ಜೊತೆ ಸೇರಿ ‘ವೋಟ್ ಚೋರಿ’ (ಮತ ಕಳವು) ಮಾಡಿದೆ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ನೆರವಾಗಿದೆ ಎಂದು ಆರೋಪಿಸಿದೆ. ಈ ಆರೋಪವು ಭಾರತದ ಚುನಾವಣಾ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಸಮಗ್ರತೆಯನ್ನೇ ಪ್ರಶ್ನಿಸುವಂತಿವೆ.
‘ವೋಟ್ ಚೋರಿ’ ಕುರಿತಾಗಿ ಕಾಂಗ್ರೆಸ್ ಹಲವಾರು ದತ್ತಾಂಶಗಳು ಮತ್ತು ಸತ್ಯಾಂಶಗಳನ್ನು ಮಂಡಿಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ‘ಕ್ರಿಮಿನಲ್ ವಂಚನೆ’ಗೆ ಸಹಕರಿಸಿದೆ ಎಂದು ಆರೋಪಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೆರವು ಮಾಡಿಕೊಡಲು, ಚುನಾವಣಾ ಫಲಿತಾಂಶವು ಬಿಜೆಪಿ ಪರವಾಗಿ ಬರುವಂತೆ ಮಾಡಲು ಒಂದು ಲಕ್ಷಕ್ಕಿಂತಲೂ ಹೆಚ್ಚು ನಕಲಿ ಮತದಾರರನ್ನು ಸೇರಿಸಲಾಗಿದೆ ಎಂದು ಅವರು ದೂರಿದ್ದಾರೆ.
ರಾಹುಲ್ ಗಾಂಧಿಯವರ ‘ಮತ ಕಳವು’ ಆರೋಪವು ಒಬ್ಬ ವ್ಯಕ್ತಿಗೆ ಹಲವು ಮತದಾರರ ಗುರುತಿನ ಚೀಟಿ, ಎಪಿಕ್ ನಂಬರ್‌ಗಳನ್ನು ನೀಡಲಾಗಿದೆ. ಒಂದೇ ವಿಳಾಸದೊಂದಿಗೆ ನೂರಾರು ಮಂದಿಯನ್ನು ಮತಪಟ್ಟಿಯಲ್ಲಿ ನೋಂದಣಿ ಮಾಡಲಾಗಿದೆ. ಓರ್ವ ಮತದಾರನಿಂದ ಬಹು ಮತಗಳನ್ನು ಚಲಾಯಿಸಲಾಗಿದೆ ಎಂಬುದನ್ನು ವಿವರಿಸಿದೆ.
2023ರ ವಿಧಾನಸಭಾ ಚುನಾವಣೆಯಿಂದ 2024ರ ಲೋಕಸಭಾ ಚುನಾವಣೆ ವೇಳೆಗೆ, ಮಹದೇವಪುರದಲ್ಲಿ ಬಿಜೆಪಿಯ ಮುನ್ನಡೆಯ ಅಂತರವು 44,501 ಮತಗಳಿಂದ 1,14,000 ಮತಗಳಿಗೆ ಏರಿಕೆ ಕಂಡಿತು. ಗಮನಾರ್ಹವಾಗಿ, ಈ ಕ್ಷೇತ್ರದಲ್ಲಿ ಮತದಾರರ ನೋಂದಣಿ ಮತ್ತು ಮತದಾನದ ಪ್ರಮಾಣವು ಗಣನೀಯವಾಗಿ ಏರಿಕೆಯಾಗಲಿಲ್ಲ. ಬದಲಾಗಿ, ಸಾಧಾರಣ ಏರಿಕೆ ಮಾತ್ರವೇ ಆಗಿತ್ತು. ಇಂತಹ ಬೆಳವಣಿಗೆಯು ಕೇವಲ ಮಹದೇವಪುರಕ್ಕೆ ಮಾತ್ರ ಸೀಮಿತವಾಗಿಲ್ಲ. ಅನೇಕ ಕ್ಷೇತ್ರಗಳಲ್ಲಿಯೂ ‘ಮತ ಕಳವು’ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದಕ್ಕೆ ಪೂರಕವಾಗಿ, ಚುನಾವಣಾ ಆಯೋಗ ಮತ್ತು ಅದರ ಸ್ಥಾಪಿತ ಚುನಾವಣಾ ಪ್ರಕ್ರಿಯೆಯ ಧೋರಣೆ ಮತ್ತು ನಡವಳಿಕೆಗಳು ಸಾಕಷ್ಟು ಸಂಶಯವನ್ನು ಹುಟ್ಟಿಸುವಂತಿವೆ. ನಿಷ್ಪಕ್ಷಪಾತ ನಡವಳಿಕೆ ಮತ್ತು ಪಾರದರ್ಶಕತೆ, ನೈತಿಕ ಅಧಿಕಾರದ ವಿಭಜನೆಯೊಂದಿಗೆ ಚುನಾವಣಾ ಆಯೋಗ ಕಾರ್ಯನಿರ್ವಹಿಸಬೇಕು. ಆದರೆ, ಆಯೋಗವು ಈವರೆಗೆ ಕಾಂಗ್ರೆಸ್ ಆರೋಪಗಳಿಗೆ ತೃಪ್ತಿಕರವಾದ ಉತ್ತರ ನೀಡಿಲ್ಲ. ಬದಲಾಗಿ, ಬಿಜೆಪಿಯಂತೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನೇ ದೂಷಿಸುತ್ತಿದೆ. ದಾಖಲೆಗಳನ್ನು ಕೇಳುತ್ತಿದೆ. ಅವರನ್ನೇ ಹೊಣೆಗಾರರನ್ನಾಗಿ ಮಾಡುವಂತೆ ವರ್ತಿಸುತ್ತಿದೆ. ಇದು ಚುನಾವಣಾ ಪ್ರಕ್ರಿಯೆಯ ಮೇಲೆ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುವಂತಿದೆ.
ಚುನಾವಣಾ ರೋಲ್‌ಗಳು ಮತ್ತು ಪರಿಶೀಲಿಸಲಾಗದಂತೆ PDF ರೂಪದಲ್ಲಿ ವಿತರಿಸಲಾದ ಮತದಾರರ ಪಟ್ಟಿಗಳು ನಾನಾ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತಿವೆ. ಇದರಲ್ಲಿ ಸಾಂದರ್ಭಿಕ ಕ್ಯಾಂಪೇನ್ ಫೈನಾನ್ಸ್ ಡೇಟಾ ಮಾನಿಟರಿಂಗ್, ಅಪೂರ್ಣ VVPAT ಪರಿಶೀಲನೆ, ಸಂಪೂರ್ಣ EVM ಭದ್ರತಾ ಆಡಿಟ್ ನಡೆಯದೇ ಇರುವುದು, ಬೂತ್ CCTV ದೃಶ್ಯಗಳನ್ನು ಉಳಿಕೊಳ್ಳುವ ಒಪ್ಪಂದಗಳನ್ನು ಮಾಡಿಕೊಳ್ಳದೇ ಇರುವುದು ಹಾಗೂ ಅಂತಿಮವಾಗಿ ಒಟ್ಟು ಮತದಾನ ದತ್ತಾಂಶಗಳನ್ನು ಪ್ರಕಟಿಸುವಲ್ಲಿನ ವಿಳಂಬಗಳೂ ಸೇರಿವೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ವಿಶ್ವಾಸಾರ್ಹತೆ ಮತ್ತು ಚುನಾವಣಾ ಸಮಗ್ರತೆಯನ್ನು ಪುನಃಸ್ಥಾಪಿಸಲು, ಮತದಾರರ ಪಟ್ಟಿಗಳ ಸ್ವತಂತ್ರ ಪರಿಶೀಲನೆಯನ್ನು ಖಾತರಿಪಡಿಸುವ ಸಾಂಸ್ಥಿಕ ಅಡಿಪಾಯ, ಪರಿಶೀಲಿಸಬಹುದಾದ ಡೇಟಾ ಬಿಡುಗಡೆ ಮಾಡುವಿಕೆ, EVM ಭದ್ರತಾ ಸ್ಕ್ರೀನಿಂಗ್‌ಅನ್ನು ವೃದ್ಧಿಗೊಳಿಸುವಿಕೆ, ಚುನಾವಣಾ ಕಾನೂನನ್ನು ಜಾರಿಗೊಳಿಸುವಿಕೆ ಹಾಗೂ ವಿಶಾಲವಾದ ರಾಜಕೀಯ ಸಮಾಲೋಚನೆಗಳನ್ನು ವಿಸ್ತರಿಸುವ ಅಗತ್ಯವಿದೆ.
ಈ ಲೇಖನ ಓದಿದ್ದೀರಾ?: ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?
ಈ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್‌ನ ಪಾತ್ರವು ನಿರ್ಣಾಯಕವಾಗಿದೆ. ಕಳೆದ ದಶಕದಲ್ಲಿ, ನ್ಯಾಯಾಲಯಗಳು ಚುನಾವಣಾ ಆಯೋಗದ ಸ್ವತಂತ್ರ ವಿವೇಚನೆಯನ್ನು ಗೌರವಿಸುವುದಾಗಿ ಪದೇ ಪದೇ ಒತ್ತಿ ಹೇಳಿವೆ. ಆದರೂ, ನ್ಯಾಯಾಲಯಗಳ ಹೆಚ್ಚಿನ ಜಾಗರೂಕತೆಯ ಅಗತ್ಯವಿದೆ.
ಹಂಸ ರಾಜ್ ಜೈನ್ v/s ಚುನಾವಣಾ ಆಯೋಗ (ದೆಹಲಿ ಹೈಕೋರ್ಟ್ – 2020) ಪ್ರಕರಣದಲ್ಲಿ, 2019ರ ಲೋಕಸಭಾ ಚುನಾವಣೆಯಲ್ಲಿನ EVM ಮತ ಎಣಿಕೆ ಮತ್ತು VVPAT ಸ್ಲಿಪ್‌ಗಳ ನಡುವಿನ ಭಾರೀ ವ್ಯತ್ಯಾಸಗಳಿವೆ ಎಂದು ಆರೋಪಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆ ಆರೋಪಗಳಿಗೆ ಸಂಬಂಧಿಸಿದಂತೆ ದೂರನ್ನು ಸ್ವೀಕರಿಸುವಂತೆ ಆಯೋಗಕ್ಕೆ ನಿರ್ದೇಶಿಸುವ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿತು. ನ್ಯಾಯಾಲಯವು ಯಾವುದೇ ಸಾರ್ವಜನಿಕ ಆಡಿಟ್ ನಡೆಸದೆ, ಆರೋಪಗಳನ್ನು ಆಯೋಗದ ವಿವೇಚನೆಗೆ ಬಿಟ್ಟಿತು. ಅಲ್ಲದೆ, 2021ರಲ್ಲಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್‌ಗಳನ್ನು ಮರಳಿ ಅಳವಡಿಸಿಕೊಳ್ಳುವಂತೆ ಕೋರಿದ್ದ ಅರ್ಜಿಯನ್ನು ಗಣನೀಯ ಚರ್ಚೆಯಿಲ್ಲದೆ ತಿರಸ್ಕರಿಸಲಾಯಿತು. ಇಂತಹ ಹಲವು ನಿದರ್ಶನಗಳು ಇತ್ತೀಚಿನ ವರ್ಷಗಳಲ್ಲಿ ಘಟಿಸಿವೆ.
ಆದರೆ, ಚುನಾವಣಾ ಆಯೋಗದ ವಿರುದ್ಧ ಇತ್ತೀಚಿನ ಲೋಕಸಭಾ ಚುನಾವಣೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿರುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಜೊತೆಗೆ, ಬಿಹಾರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಬೃಹತ್ ಮತದಾರ ಗುಂಪನ್ನೇ ಮತಪಟ್ಟಿಯಿಂದ ಹೊರಗಿಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಜಾಪ್ರಭುತ್ವ ಮತ್ತು ಪಾರದರ್ಶಕತೆಯ ಉಳಿವಿಗಾಗಿ ನ್ಯಾಯಾಲಯವು ಜಾಗರೂಕತೆ ವಹಿಸಬೇಕಾದ ತುರ್ತು ಅಗತ್ಯವಿದೆ.




