ಅಕ್ರಮವಾಗಿ ಇಡೀ ಗ್ರಾಮವೇ ‘ಮಾರಾಟ’: ಬೆಳಕಿಗೆ ಬಂದಿದೆ 400 ಎಕರೆ ಭೂ ಹಗರಣ

Date:

ಪಶ್ಚಿಮ ಬಂಗಾಳದ ಜಾರ್ಗ್ರಾಮ್ ಜಿಲ್ಲೆಯ ಬಕ್ರಾ ಗ್ರಾಮದಲ್ಲಿ ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಅಲ್ಲಿ, ವಂಚಕರು ನಕಲಿ ದಾಖಲೆ ಪತ್ರಗಳನ್ನು ಬಳಸಿ ಮನೆಗಳು, ಕೃಷಿ ಭೂಮಿ ಹಾಗೂ ಗ್ರಾಮ ಪಂಚಾಯತ್ ಕಚೇರಿ ಕಟ್ಟಡ- ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಯಾಕೆ? ಗ್ರಾಮದಲ್ಲಿರುವ ಬಂಕಾ ಜೂನಿಯರ್ ಹೈಸ್ಕೂಲ್ ಮತ್ತು ಸ್ಥಳೀಯ ಕರ್ಮ ತೀರ್ಥ ಕೇಂದ್ರವನ್ನೂ ಬಿಡದೆ ಮಾರಾಟ ಮಾಡಿದ್ದಾರೆ.

ಬಕ್ರಾ ಗ್ರಾಮ ಮಾತ್ರವಲ್ಲದೆ, ಗ್ರಾಮದ ಸುತ್ತಲಿನ ಮಾಣಿಕ್ ಝಟಿಯಾ, ಅಂಗರ್ನಾಲಿ ಹಾಗೂ ಚುನಪಾರ ಗ್ರಾಮಗಳಲ್ಲಿನ ಮನೆಗಳನ್ನೂ ಕೂಡ ಮನೆಯ ಮಾಲೀಕರಿಗೇ ಗೊತ್ತಾಗದಂತೆ ಮಾರಾಟ ಮಾಡಲಾಗಿದೆ. ಈ ರೀತಿಯಲ್ಲಿ ಬರೋಬ್ಬರಿ 400 ಎಕರೆ ಭೂಮಿಯನ್ನು ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಕೋಲ್ಕತ್ತಾ ಮೂಲದ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.

ಬಂಗಾಳದಲ್ಲಿ ಇಂತಹ ಬೃಹತ್ ವಂಚನೆಗಳು ಇದೇ ಮೊದಲೇನೂ ಅಲ್ಲ. 2024ರ ಏಪ್ರಿಲ್‌ನಲ್ಲಿ ಪತ್ರಾ ಗ್ರಾಮ ಪಂಚಾಯತಿ ಪ್ರದೇಶದ ಸುಮಾರು 500 ಕುಟುಂಬಗಳು ಇಂತಹದ್ದೇ ಹಗರಣಕ್ಕೆ ಒಳಗಾಗಿದ್ದವು. ಇದೀಗ ಬಕ್ರಾ ಗ್ರಾಮದ ಜನರು ಭೂಹಗರಣಕ್ಕೆ ಬಲಿಯಾಗಿದ್ದಾರೆ. ಈ ಹಗರಣ ಸಂಬಂಧ ಸಂಕ್ರೈಲ್ ಪ್ರದೇಶದ ಚಿರಕುಟಿ ಗ್ರಾಮದ ಕುಖ್ಯಾತ ಭೂ ಮಾಫಿಯಾಗಾರ ಸುಕ್ರಂಜನ್ ಮಹಾತ ಮತ್ತು ಆತನ ಜೊತೆಗಾರರಾದ ನಕುಲ್ ಕುಂಗರ್ ಮತ್ತು ಸೌರವ್ ಮಹಾತ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ, ಕ್ರಿಮಿನಲ್ ಪಿತೂರಿ ಆರೋಪಗಳ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ತನಿಖಾ ತಂಡವನ್ನು ರಚಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆರೋಪಗಳ ಪ್ರಕಾರ, ಪತ್ರಾ ಗ್ರಾಮ ಪಂಚಾಯತಿಯ ಪ್ರಧಾನ್ (ಅಧ್ಯಕ್ಷ) ದೀಪಕ್ ಬೈಸ್ನಬ್ ಹೆಸರಿನಲ್ಲಿ ನೀಡಲಾದ ನಕಲಿ ಪಿತ್ರಾರ್ಜಿತ ಆಸ್ತಿ ಪ್ರಮಾಣಪತ್ರಗಳ ಮೂಲಕ ವಂಚನೆ ನಡೆದಿದೆ. ಕುತೂಹಲಕಾರಿಯಾಗಿ, ತಮ್ಮದೇ ಎರಡು ಎಕರೆ ಭೂಮಿಯನ್ನು ತಮ್ಮ ಅರಿವಿಗೆ ಬಾರದಂತೆ ಮಾಡಲಾಗಿದೆ ಎಂದು ದೀಪಕ್ ಹೇಳಿಕೊಂಡಿದ್ದಾರೆ.

”ನಮ್ಮ ಆಸ್ತಿಗಳನ್ನು ನಮಗೆ ಅರಿವಿಲ್ಲದಂತೆ ಮಾರಾಟ ಮಾಡಲಾಗಿದೆ ಎಂಬುದು ಸ್ಥಳೀಯ ನಿವಾಸಿಗಳಿಂದ ನನಗೆ ಗೊತ್ತಾಯಿತು. ನಾನು ಪರಿಶೀಲಿಸಿದಾಗ, ನನ್ನ ನಕಲಿ ಸಹಿ ಮತ್ತು ಗ್ರಾಮ ಪಂಚಾಯತಿಯ ಮುದ್ರೆಯನ್ನು ಹೊಂದಿರುವ ಹಲವಾರು ಪಿತ್ರಾರ್ಜಿತ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂಬುದು ಗೊತ್ತಾಯಿತು. ಈ ನಕಲಿ ದಾಖಲೆಗಳನ್ನು ಬಳಸಿಕೊಂಡು, ಅಸಲಿ ಮಾಲೀಕರ ಗಮನಕ್ಕೆ ಬಾರದಂತೆ ಭೂಮಿಯನ್ನು ಬೇರೆಯವರಿಗೆ ಮಾರಾಟ/ವರ್ಗಾವಣೆ ಮಾಡಲಾಗಿದೆ” ಎಂದು ದೀಪಕ್ ವಿವರಿಸಿದ್ದಾರೆ.

ದುರಂತವೆಂದರೆ, ಗ್ರಾಮ ಪಂಚಾಯತಿ ಕಚೇರಿಯ ಕಟ್ಟಡ ಮತ್ತು ಅದಕ್ಕೆ ಸೇರಿದ ಭೂಮಿಯನ್ನೂ ಮಾರಾಟ ಮಾಡಲಾಗಿದೆ. ಒಂದು ನಕಲಿ ಪತ್ರದಲ್ಲಿ ತಂದೆಯ ಹೆಸರನ್ನು ‘ಜಾರ್ಗ್ರಾಮ್ ಕಲೆಕ್ಟರೇಟ್’ ಎಂದು ಅಸಂಬದ್ಧವಾಗಿ ದಾಖಲಿಸಲಾಗಿದ್ದು, ಆ ದಾಖಲೆಗೂ ನನ್ನ ಸಹಿ ಮತ್ತು ಪಂಚಾಯತಿ ಮುದ್ರೆಯನ್ನು ನಕಲು ಮಾಡಲಾಗಿದೆ ಎಂದು ದೀಪಕ್ ಹೇಳಿದ್ದಾರೆ.

”ನಾನು ಜಿಲ್ಲಾಡಳಿತದಿಂದ ಪೂರ್ಣಪ್ರಮಾಣದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದೇನೆ. ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಏನಾಗುತ್ತದೆ ನೋಡೋಣ. ಜನರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಭಯದಲ್ಲಿ ಬದುಕುತ್ತಿದ್ದಾರೆ. ಕಂಗಾಲಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.

ಈ ಬೃಹತ್ ಹಗರಣದಲ್ಲಿ ಜಿಲ್ಲಾ ನೋಂದಣಿ ಕಚೇರಿ ಹಾಗೂ ಪ್ರದೇಶ ಭೂ ಮತ್ತು ಭೂ ಸುಧಾರಣಾ ಕಚೇರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಸಂತ್ರಸ್ತ ಜನರು ಆರೋಪಿಸಿದ್ದಾರೆ. ”ಈ ಹಗರಣವು ಭೂ ಮಾಫಿಯಾಗಳು, ರಾಜಕೀಯ ಪ್ರಭಾವಿಗಳು ಹಾಗೂ ಸರ್ಕಾರಿ ಇಲಾಖೆಗಳ ಸಹಕಾರ-ಪಾಲುದಾರಿಕೆಯಿಂದ ನಡೆದಿವೆ. ಅವರೆಲ್ಲರನ್ನೂ ತನಿಖೆಗೆ ಒಳಪಡಿಸಬೇಕು” ಎಂದು ಬಕ್ರಾ ಗ್ರಾಮದ ನಿವಾಸಿ, ನಿವೃತ್ತ ಶಿಕ್ಷಕ ಧೀರೇಂದ್ರ ನಾಥ್ ಮಹತೋ ಒತ್ತಾಯಿಸಿದ್ದಾರೆ. ಜೀವಂತವಾಗಿರುವ ಮಹತೋ ಅವರನ್ನು ಸತ್ತಿದ್ದಾರೆಂದು ನಕಲಿ ದಾಖಲೆ ಸೃಷ್ಟಿಸಿ ಅವರ ಆಸ್ತಿಯನ್ನು ಮಾರಾಟ ಮಾಡಲಾಗಿದೆ.

ಬರೋಬ್ಬರಿ 400 ಎಕರೆ ಭೂಮಿ ಹೇಗೆ ಮಾರಾಟವಾಯಿತು

ಬಕ್ರಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಾಗಿ ಬಡವರು, ತಳ ಸಮುದಾಯದವರು, ಹಿಂದುಳಿದವರು ವಾಸಿಸುತ್ತಿದ್ದಾರೆ. ಅವರೆಲ್ಲರೂ ಕೃಷಿಯನ್ನೇ ಜೀವನಾಧಾರವಾಗಿ ಅವಲಂಬಿಸಿದ್ದಾರೆ.

ಗ್ರಾಮದಲ್ಲಿ ಭೂಹಗರಣ ಮತ್ತು ವಂಚನೆ ನಡೆದಿದೆ ಎಂಬುದು ಸೆಪ್ಟೆಂಬರ್ 12ರಂದು ಬೆಳಕಿಗೆ ಬಂದಿತು. ಧೀರೇಂದ್ರ ನಾಥ್ ಮಹತೋ ಸೇರಿದಂತೆ ಬಕ್ರಾ ಮತ್ತು ಅಂಗರ್ನಾಲಿ ಗ್ರಾಮಗಳ 75 ಪಟ್ಟಾದಾರರು ಅಥವಾ ಸರ್ಕಾರದಿಂದ ಪಡೆದ ಶಾಶ್ವತ ವಸಾಹತು ಪತ್ರಗಳನ್ನು ಹೊಂದಿರುವ ಭೂಮಾಲೀಕರು ತಮ್ಮ ಆಸ್ತಿಯನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಲು ಮುಂದಾದಾಗ, ಹಗರಣ ಬೆಳಕಿಗೆ ಬಂದಿದೆ. ಅವರ ಆಸ್ತಿ ತಮಗೆ ಗೊತ್ತಾಗದಂತೆ ಯಾರಿಗೋ ಮಾರಾಟವಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಬಳಿಕ, ಗ್ರಾಮದ ಹಲವರು ಪರಿಶೀಲಿಸಿದ್ದು, ಎಲ್ಲರ ಆಸ್ತಿಗಳೂ ಮಾರಾಟವಾಗಿವೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

”ಭೂ ದಾಖಲೆಗಳನ್ನು ಹುಡುಕುವಾಗ ನಮ್ಮ ಭೂಮಿ ಮಾರಾಟವಾಗಿದೆ ಎಂಬುದು ಗೊತ್ತಾಯಿತು. ಪರಿಶೀಲಿಸಿದರೆ, ಜೀವಂತವಾಗಿರುವ ನನ್ನ ತಂದೆ ಗೌತಮ್ ಮಹತೋ ಮತ್ತು ಸಹೋದರ ಸುಭೋಜಿತ್ ಅವರನ್ನು ಸತ್ತಿದ್ದಾರೆಂದು ಉಲ್ಲೇಖಿಸಲಾಗಿದೆ. ನಾನೂ ಸತ್ತಿದ್ದೇನೆಂದು ದಾಖಲೆ ಸೃಷ್ಟಿಸಲಾಗಿದೆ. ಮಾತ್ರವಲ್ಲದೆ, ನಮ್ಮ ಆಸ್ತಿ ಇನ್ಯಾರದ್ದೋ ಹೆಸರಿಗೆ ವರ್ಗಾವಣೆ ಆಗಿದೆ. ಅವರು ನಮ್ಮ ಆಸ್ತಿಗೆ ವಾರಸುದಾರರಾಗಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ” ಎಂದು ಗ್ರಾಮದ ಇಂದ್ರಜಿತ್ ಮಹತೋ ಹೇಳಿದ್ದಾರೆ.

ಇದೇ ರೀತಿ, ಗ್ರಾಮದಲ್ಲಿ ಮೋಟಾರ್ ಸೈಕಲ್ ರಿಪೇರಿ ಅಂಗಡಿ ನಡೆಸುತ್ತಿರುವ ಚಂದ್ರಮೋಹನ್ ಮಹತೋ, ಸಮೀರ್, ಹರಿ, ದೇಬೆನ್, ಅಶೋಕ್ ಹಾಗೂ ಶಿಬೋತೋಷ್ ಮಹತೋ ಸೇರಿದಂತೆ ಎಲ್ಲರನ್ನೂ ಸತ್ತಿದ್ದಾರೆಂದು ಉಲ್ಲೇಖಿಸಿ, ಅವರ ಆಸ್ತಿಗಳನ್ನು ಯಾರದ್ದೋ ಹೆಸರಿಗೆ ವರ್ಗಾಯಿಸಲಾಗಿದೆ/ಮಾರಾಟ ಮಾಡಲಾಗಿದೆ.

ಇವರಲ್ಲಿ ಬಹುಸಂಖ್ಯಾತರ ಆಸ್ತಿಗಳನ್ನು ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಕೋಲ್ಕತ್ತಾ ಮೂಲದ ಕಂಪನಿಗಳ ಹೆಸರಿಗೆ ವರ್ಗಾಯಿಸಲಾಗಿದೆ. ”ನಮ್ಮನ್ನು ವಂಚಿಸಲಾಗಿದೆ. ನಮ್ಮ ಬಳಿಯಿದ್ದ ಎಲ್ಲ ಆಸ್ತಿಯೂ ಹೋಗಿದೆ. ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ನಮ್ಮ ಮುಂದಿನ ಕತೆಯೇನು? ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಂತಂತಾಗಿದೆ” ಎಂದು ಗ್ರಾಮದ ರೈತ ಮಹಿಳೆ ಖೋಲೋನಾ ಮಹತೋ ನೋವಿನಿಂದ ದುಃಖಿಸುತ್ತಾರೆ.

ಯಾರ ಹೆಸರಿನಲ್ಲಿವೆ ಗ್ರಾಮಸ್ಥರ ಆಸ್ತಿಗಳು?

ಸ್ಥಳೀಯರ ಪ್ರಕಾರ, ಗ್ರಾಮದಲ್ಲಿ ಈ ವಂಚನೆಯು 2024ರ ಏಪ್ರಿಲ್‌ನಿಂದ ನಡೆದಿದೆ. ತಮ್ಮ ಆಸ್ತಿ ಮಾರಾಟವಾಗಿರುವ ಬಗ್ಗೆ ತಿಳಿದ ಗ್ರಾಮಸ್ಥರು ಸಂಕ್ರೈಲ್ ಬಿಎಲ್‌ಎಲ್‌ಆರ್‌ಒ ಮತ್ತು ಜಿಲ್ಲಾ ನೋಂದಣಿ ಕಚೇರಿಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಆಗ, ಗ್ರಾಮದವರ ಆಸ್ತಿಗಳು ಚುಯಶೋಲಿ ಗ್ರಾಮದ ಸಮೀರ್ ಮಹತೋ, ಗುರಿಮೋಲ್ ಗ್ರಾಮದ ಚಂದ್ರ ಮೋಹನ್ ಮಹತೋ ಹಗೂ ಸರ್ದಿಹಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುರ್ಮುರಾ ಗ್ರಾಮದ ಬಾದಲ್ ಮಹತೋ ಎಂಬವರ ಹೆಸರಿಗೆ ವರ್ಗಾವಣೆ ಆಗಿದೆ. ಅವರನ್ನು ಅಧಿಕೃತ ವಾರಸುದಾರರು ಎಂದು ಉಲ್ಲೇಖಿಸಲಾಗಿದೆ ಎಂಬುದು ಗೊತ್ತಾಗಿದೆ.

ಬಕ್ರಾ ಗ್ರಾಮಸ್ಥರ ಆಸ್ತಿಗಳು ಅಕ್ರಮವಾಗಿ ಯಾರಿಗೆ ವರ್ಗಾವಣೆ ಆಗಿದೆಯೋ, ಅವರೆಲ್ಲರೂ ರಾಜಕೀಯವಾಗಿ ಪ್ರಭಾವಿಗಳಾಗಿದ್ದಾರೆ. ಅವರುಗಳೇ ನೇರವಾಗಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

”ತಮ್ಮ ಆಸ್ತಿಗಳನ್ನು ಬೇರೆಯವರಿಗೆ ವರ್ಗಾಯಿಸಲಾಗಿದೆ ಎಂದು ಅಧಿಕೃತ ನೋಟಿಸ್‌ಗಳು ಬಂದಿವೆ. ನಮ್ಮನ್ನು ವಿಚಾರಣೆಗಾಗಿ ಬಿಎಲ್‌ಎಲ್‌ಆರ್‌ಒ ಕಚೇರಿಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಆದರೆ, ನಾವು ನಮ್ಮ ಭೂಮಿಯನ್ನು ಎಂದಿಗೂ ಮಾರಾಟ ಮಾಡಿಲ್ಲ. ಹಾಗಿದ್ದರೂ, ನಮ್ಮ ಆಸ್ತಿ ಇನ್ನೊಬ್ಬರ ಹೆಸರಿಗೆ ವರ್ಗಾವಣೆಯಾಗಲು ಹೇಗೆ ಸಾಧ್ಯ” ಎಂದು ಗ್ರಾಮದ ಧೀರೇಂದ್ರ ನಾಥ್ ಮಹತೋ ಪ್ರಶ್ನಿಸಿದ್ದಾರೆ.

ಗ್ರಾಮಸ್ಥರು ನಮ್ಮ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಬೇಕು. ಅಕ್ರಮ ಎಸಗಿರುವವರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಆಡಳಿತ ಹೇಳುವುದೇನು?

 ”ಯಾರಾದರೂ ಭೂಮಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಬಂದಾಗ, ಅವರಿಗೆ ಆಸ್ತಿ ವರ್ಗಾವಣೆಯ ಅಧಿಕಾರ ಇದೆಯೇ ಎಂಬುದನ್ನು ನೋಂದಣಿ ಕಚೇರಿ ಪರಿಶೀಲಿಸುತ್ತದೆ. ಆಸ್ತಿ ವರ್ಗಾವಣೆಗೆ ಆಧಾರ್ ಕಾರ್ಡ್, ಹತ್ತು ಬೆರಳಚ್ಚುಗಳು, ಖರೀದಿದಾರ ಮತ್ತು ಮಾರಾಟಗಾರರ ಛಾಯಾಚಿತ್ರಗಳು ಹಾಗೂ ಸಾಕ್ಷಿ ಸಹಿ ಕಡ್ಡಾಯವಾಗಿದೆ. ಈ ಎಲ್ಲವನ್ನೂ ಪರಿಶೀಲಿಸಿದ ನಂತರ, ನೋಂದಣಿ ಕಚೇರಿಯು ದಾಖಲೆ ಪತ್ರವನ್ನು ಪೂರ್ಣಗೊಳಿಸುತ್ತದೆ. ಈ ಪ್ರತಿಯೊಂದು ಪ್ರಕರಣದಲ್ಲಿ ಪಾತ್ರಾ ಗ್ರಾಮ ಪಂಚಾಯತಿ ಅಧ್ಯಕ್ಷರು ನೀಡಿರುವ ಉತ್ತರಾಧಿಕಾರ ಪ್ರಮಾಣಪತ್ರಗಳು ಇದ್ದವು. ಆ ಪ್ರಮಾಣಪತ್ರಗಳನ್ನು ನೋಂದಣಿ ಕಚೇರಿ ಮೌಲ್ಯೀಕರಿಸಿತು” ಎಂದು ಜಾರ್ಗ್ರಾಮ್ ಜಿಲ್ಲಾ ಸಬ್-ರಿಜಿಸ್ಟ್ರಾರ್ ಜಾಯ್‌ಜಿತ್ ಚಂದ್ರ ಹೇಳಿದ್ದಾರೆ.

ಈ ಹಿಂದೆ, ಇಂತಹ ಯಾವುದೇ ದೂರುಗಳು ದಾಖಲಾಗಿಲ್ಲ. ಪಾತ್ರಾ ಗ್ರಾಮ ಪಂಚಾಯತಿ ಪ್ರದೇಶದಿಂದ ಹಲವಾರು ಆರೋಪಗಳು ದಾಖಲಾದ ಬಳಿಕವೇ ಜಾರ್ಗ್ರಾಮ್ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ತಂಡವನ್ನು ರಚಿಸಲಾಗಿದೆ. ತನಿಖೆ ನಡೆಯುತ್ತಿದೆ. ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ನಿತೀಶ್ ಅಲ್ಲ, ತೇಜಸ್ವಿ ಅಲ್ಲ, ಮೋದಿಯೂ ಅಲ್ಲ- ಬಿಹಾರದ ಭವಿಷ್ಯ ನಿರ್ಧರಿಸಲಿವೆ 11 ಶಕ್ತಿಗಳು

“ಒಮ್ಮೆ ಭೂಮಿಯನ್ನು ನೋಂದಾಯಿಸಿದ ನಂತರ, ವರ್ಗಾವಣೆಗಾಗಿ ಅರ್ಜಿ ಸಲ್ಲಿಸಲು ಎರಡು ಮಾರ್ಗಗಳಿವೆ; 1. ಜಿಲ್ಲಾ ನೋಂದಣಿ ಕಚೇರಿಯ ಮೂಲಕ ಆನ್‌ಲೈನ್‌ನಲ್ಲಿ. 2. ಪ್ರದೇಶ ಕಚೇರಿಯಲ್ಲಿ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಬಹುದು. ಈ ಪ್ರಕರಣಗಳಲ್ಲಿ, ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಖರೀದಿಸಲಾಗಿದೆ. ಅಂತಹ ಭೂಮಿಗೆ, ಖರೀದಿದಾರರು ಪ್ರತಿ ಡೆಸಿಮಲ್‌ (435.6 ಚದರ ಅಡಿ) ಭೂಮಿಗೆ 1,000 ರೂ.ಗಳನ್ನು ಸರ್ಕಾರಿ ಆದಾಯವಾಗಿ ಪಾವತಿಸಬೇಕು. ಒಂದು ಎಕರೆಗೆ (100 ಡೆಸಿಮಲ್‌) 1 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಯಾವುದೇ ಖರೀದಿದಾರರು ಈ ಶುಲ್ಕವನ್ನು ಪಾವತಿಸಲು ಸಿದ್ಧರಿಲ್ಲ. ಆದ್ದರಿಂದ ಈ ಭೂಮಿಗಳ ಯಾವುದೇ ರೂಪಾಂತರ ನಡೆದಿಲ್ಲ. ಪರಿಣಾಮವಾಗಿ, ಮೂಲ ಮಾಲೀಕರು ಕಾನೂನುಬದ್ಧ ಮಾಲೀಕರಾಗಿ ಉಳಿದಿದ್ದಾರೆ” ಎಂದು ಸಂಕ್ರೈಲ್ ಪ್ರದೇಶ ಭೂ ಮತ್ತು ಭೂ ಸುಧಾರಣಾ ಅಧಿಕಾರಿ ಅಸಿತ್ ದೋಲುಯಿ ಹೇಳಿದ್ದಾರೆ.

”ದೂರುಗಳ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯ ಭೂ ಇಲಾಖೆಯ ಗಮನಕ್ಕೆ ತರಲಾಗಿದೆ. ಅಲ್ಲದೆ, ಈ ಪ್ರದೇಶಗಳಲ್ಲಿ ಎಲ್ಲ ಭೂ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಮುಂದೆ, ಸಂಬಂಧಪಟ್ಟ ಇಲಾಖೆಯ ಅನುಮತಿಯಿಲ್ಲದೆ ಈ ಪ್ರದೇಶಗಳಲ್ಲಿ ಯಾರೂ ಭೂಮಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಹೆಚ್ಚುತ್ತಿರುವ ಕಳವಳಗಳು

ಆದಾಗ್ಯೂ, ನಿವಾಸಿಗಳು ಆತಂಕಗೊಂಡಿದ್ದಾರೆ. ಜಿಲ್ಲಾ ನೋಂದಣಿ ಕಚೇರಿಗೆ ಗಮನಕ್ಕೆ ಬಾರದೆ ಒಂದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನನಿತ್ಯ ಭೂಮಿಯನ್ನು ಹೇಗೆ ಮಾರಾಟ ಮಾಡಲಾಗಿದೆ. ಪುನರಾವರ್ತಿತ ಪ್ರಕರಣಗಳಲ್ಲಿ ಅದೇ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

”ಅಧಿಕಾರಿಗಳು ಅಕ್ರಮದ ಭರವಸೆ ನೀಡಿದ್ದಾರೆ. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಮತ್ತು ಅಸಲಿ ಮಾಲೀಕರ ಹೆಸರಿಗೆ ಭೂಮಿಯನ್ನು ಮರಳಿಸುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ” ಎಂದು ಸಾರಾ ಭಾರತ್ ಕೃಷಕ್ ಸಭಾದ ಜಾರ್ಗ್ರಾಮ್ ಜಿಲ್ಲಾ ಉಪಾಧ್ಯಕ್ಷ ಅರ್ಜುನ್ ಮಹತೋ ಹೇಳಿದ್ದಾರೆ.

ಬಕ್ರಾ ಮತ್ತು ಸುತ್ತಮುತ್ತಲಿನ ಜನರು ತಮ್ಮ ದೈನಂದಿನ ಕೆಲಸಗಳನ್ನು ಬದಿಗಿಟ್ಟಿದ್ದು, ಆಸ್ತಿಯನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಹೆಸರಿಗೆ ಮರಳಿ ಪಡೆಯುವ ವಿಚಾರವಾಗಿ ಚಿಂತಿತರಾಗಿದ್ದಾರೆ. ತಮ್ಮ ಆಸ್ತಿಗಳ ಸ್ಥಿತಿಯನ್ನು ತಿಳಿದುಕೊಳ್ಳಲು ದಿನನಿತ್ಯ ಸರ್ಕಾರಿ ಕಚೇರಿಗಳಿಗೂ ತಮ್ಮ ಗ್ರಾಮಕ್ಕೂ ಅಲೆದಾಡುತ್ತಿದ್ದಾರೆ.

ಮಾಹಿತಿ ಮೂಲ: ದಿ ವೈರ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...