ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ (ಲೋಕ ಕಲ್ಯಾಣ ಮಾರ್ಗ) ಸಮೀಪದಲ್ಲಿರುವ ಮೂರು ಕೊಳೆಗೇರಿಗಳ ಜನರನ್ನು ಬೇರೆಡೆ ಸ್ಥಳಾಂತರಿಸುವ ವಿಚಾರ ಈಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. “ಈ ಜಾಗದಿಂದ ಎತ್ತಂಗಡಿಯಾಗುತ್ತಿರುವ ಎಲ್ಲರಿಗೂ ಯಾವುದೇ ತಾರತಮ್ಯವಿಲ್ಲದೆ ಪುನರ್ವಸತಿ ಕಲ್ಪಿಸಲಾಗುವುದು” ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಅಧಿಕೃತವಾಗಿ ಭರವಸೆ ನೀಡಿದೆ.
ರೇಸ್ ಕೋರ್ಸ್ ರಸ್ತೆಯ ಬಳಿ (ಪ್ರಧಾನಿ ನಿವಾಸದ ಕೂಗಳತೆ ದೂರದಲ್ಲಿ) ಭಾಯಿ ರಾಮ್ ಕ್ಯಾಂಪ್, ಮಸೀದಿ ಕ್ಯಾಂಪ್ ಮತ್ತು ಡಿಐಡಿ ಕ್ಯಾಂಪ್ ಎಂಬ ಮೂರು ಕೊಳೆಗೇರಿಗಳಿವೆ. ಈ ಜಾಗವು ಕೇಂದ್ರ ಸರ್ಕಾರದ ಭೂ ಮತ್ತು ಅಭಿವೃದ್ಧಿ ಸಚಿವಾಲಯದ (L&DO) ಅಧೀನದಲ್ಲಿದೆ. ವಿವಿಐಪಿ ಭದ್ರತಾ ವಲಯದಲ್ಲಿರುವ ಈ ಜಾಗವನ್ನು ಮುಂದಿನ ಅಭಿವೃದ್ಧಿಗಾಗಿ ತೆರವುಗೊಳಿಸಲು ನಿರ್ಧರಿಸಿದ್ದ ಸರ್ಕಾರ, “ಮಾರ್ಚ್ 6ರೊಳಗೆ ಮನೆಗಳನ್ನು ಖಾಲಿ ಮಾಡಿ” ಎಂದು ಫೆಬ್ರವರಿಯಲ್ಲಿ ಅಲ್ಲಿನ ಜನರಿಗೆ ಅಂತಿಮ ನೋಟಿಸ್ ನೀಡಿತ್ತು.
ಸರ್ಕಾರದ ನೋಟಿಸ್ ಪ್ರಶ್ನಿಸಿ ಭಾಯಿ ರಾಮ್ ಕ್ಯಾಂಪ್‌ನ 300ಕ್ಕೂ ಹೆಚ್ಚು ನಿವಾಸಿಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ (ಮಾ. 10ರಂದು) ನಡೆದ ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, “ಯಾರನ್ನೂ ಬೀದಿಗೆ ತಳ್ಳುವುದಿಲ್ಲ. ಯಾರು ಅರ್ಹರು, ಯಾರು ಅನರ್ಹರು ಎಂಬ ಭೇದವಿಲ್ಲದೆ ಕೊಳೆಗೇರಿಯಲ್ಲಿರುವ ಎಲ್ಲರಿಗೂ ಮನೆ ನೀಡಲು ಸರ್ಕಾರ ತೀರ್ಮಾನಿಸಿದೆ” ಎಂದು ಸ್ಪಷ್ಟಪಡಿಸಿದರು.
ಅಧಿಕೃತ ಮಾಹಿತಿಯ ಪ್ರಕಾರ, 2024ರ ಜನವರಿಯಲ್ಲಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ಮೂರು ಕ್ಯಾಂಪ್‌ಗಳಲ್ಲಿ ಒಟ್ಟು 717 ಕುಟುಂಬಗಳನ್ನು ಗುರುತಿಸಲಾಗಿದೆ. ಈ ಎಲ್ಲರಿಗೂ ದೆಹಲಿಯ ವಾಯುವ್ಯ ಭಾಗದಲ್ಲಿರುವ ‘ಸಾವ್ದಾ ಘೇವ್ರಾ’ ಪ್ರದೇಶದಲ್ಲಿ ಸುಸಜ್ಜಿತ ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈಗಾಗಲೇ ಭಾಯಿ ರಾಮ್ ಕ್ಯಾಂಪ್‌ನ 113, ಮಸೀದಿ ಕ್ಯಾಂಪ್‌ನ 36 ಹಾಗೂ ಡಿಐಡಿ ಕ್ಯಾಂಪ್‌ನ 27 ಕುಟುಂಬಗಳು ಫ್ಲಾಟ್ ಹಂಚಿಕೆ ಪತ್ರಗಳನ್ನು ಪಡೆದುಕೊಂಡಿವೆ ಎಂದು ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿದೆ.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು
ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿದ್ದರೂ, ಜನರಿಗೆ ಬೇರೆಯದೇ ಆದ ದೊಡ್ಡ ಸಮಸ್ಯೆಯಿದೆ. ಸರ್ಕಾರ ನೀಡುತ್ತಿರುವ ಹೊಸ ಫ್ಲಾಟ್‌ಗಳು, ಅವರು ಈಗ ಇರುವ ಜಾಗದಿಂದ ಬರೋಬ್ಬರಿ 45 ಕಿಲೋಮೀಟರ್ ದೂರದಲ್ಲಿವೆ! “ನಾವು ಸುಮಾರು 70 ವರ್ಷಗಳಿಂದ ಇಲ್ಲಿಯೇ ವಾಸವಿದ್ದೇವೆ. ಬಹುತೇಕರು ದಿನಗೂಲಿ ಹಾಗೂ ಸುತ್ತಮುತ್ತಲಿನ ಮನೆಗಳಲ್ಲಿ ಕೆಲಸ ಮಾಡಿ ಬದುಕುತ್ತಿದ್ದೇವೆ. 45 ಕಿ.ಮೀ ದೂರ ಹೋದರೆ ನಮಗೆ ಕೆಲಸವೇ ಸಿಗುವುದಿಲ್ಲ. ನಮ್ಮ ಸಂಪಾದನೆಯ ದಾರಿಯೇ ಮುಚ್ಚಿಹೋಗುತ್ತದೆ. ಅಲ್ಲದೆ, ಈಗ ಮಕ್ಕಳ ಶಾಲಾ ಪರೀಕ್ಷೆಗಳು ನಡೆಯುತ್ತಿದ್ದು, ಏಕಾಏಕಿ ಮನೆ ಖಾಲಿ ಮಾಡಿದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ” ಎಂದು ನಿವಾಸಿಗಳು ನ್ಯಾಯಾಲಯದ ಮುಂದೆ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ದೂರದ ‘ಸಾವ್ದಾ ಘೇವ್ರಾ’ದಲ್ಲಿ ಕುಡಿಯುವ ನೀರು ಸೇರಿ ಕನಿಷ್ಠ ಸೌಲಭ್ಯಗಳಿಲ್ಲ ಎಂಬುದು ಅವರ ಪ್ರಮುಖ ದೂರು.
ಜನರ ಕಷ್ಟಗಳನ್ನು ಆಲಿಸಿದ ದೆಹಲಿ ಹೈಕೋರ್ಟ್, ನಿವಾಸಿಗಳಿಗೆ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಆದೇಶ ನೀಡಿದೆ. “ಮುಂದಿನ ವಿಚಾರಣೆ ನಡೆಯುವ ಮಾರ್ಚ್ 16ರವರೆಗೆ ಯಾರನ್ನೂ ಬಲವಂತವಾಗಿ ಅಲ್ಲಿಂದ ಒಕ್ಕಲೆಬ್ಬಿಸಬಾರದು” ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ದೆಹಲಿಯ ಪ್ರತಿಷ್ಠಿತ ಪ್ರದೇಶದಿಂದ ಸಾಮಾನ್ಯ ಬಡವರನ್ನು 45 ಕಿ.ಮೀ ದೂರಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರ ಮತ್ತು ಜನರ ಬದುಕುವ ಹಕ್ಕಿನ ನಡುವಿನ ಈ ಕಾನೂನು ಹೋರಾಟದಲ್ಲಿ, ಮಾರ್ಚ್ 16ರ ಕೋರ್ಟ್ ವಿಚಾರಣೆಯು ನೂರಾರು ಕುಟುಂಬಗಳ ಭವಿಷ್ಯವನ್ನು ನಿರ್ಧರಿಸಲಿದೆ.





