ಕೇರಳದ ನಟ್ಟಿಕಾದ ಮಾಜಿ ಸಿಪಿಐ ನಾಯಕ ಮತ್ತು ಹಾಲಿ ಶಾಸಕ ಸಿ.ಸಿ. ಮುಕುಂದನ್ ಅವರು ಸೋಮವಾರ ಮಾರ್ಚ್ 16ರಂದು ಬಿಜೆಪಿ ಸೇರಿದ್ದಾರೆ. ಮಧ್ಯಾಹ್ನ ತ್ರಿಶೂರ್‌ನಲ್ಲಿರುವ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಗೆ ಭೇಟಿ ನೀಡಿ ಪಕ್ಷಕ್ಕೆ ಸೇರಿದ್ದಾರೆ. ಏಪ್ರಿಲ್ 9ರಂದು ಕೇರಳ ವಿಧಾನಸಭೆ ಚುನಾವಣೆ ನಡೆಯಲಿದ್ದು ನಟ್ಟಿಕಾ ಕ್ಷೇತ್ರದಲ್ಲಿ ಗೀತಾ ಗೋಪಿ ಅವರನ್ನು ಕಣಕ್ಕಿಳಿಸಲು ಸಿಪಿಐ ನಿರ್ಧರಿಸಿದೆ. ಇದಾದ ಬಳಿಕ ಮುಕುಂದನ್‌ಗೆ ಸಿಪಿಐ ಜತೆ ಭಿನ್ನಾಭಿಪ್ರಾಯ ಉಂಟಾಗಿದೆ.
ಟಿಕೆಟ್ ನಿರಾಕರಿಸಿದ ನಂತರ, ಮುಕುಂದನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಘೋಷಿಸಿದರು. ನಟ್ಟಿಕಾ ಕ್ಷೇತ್ರದ ಟಿಕೆಟ್ ಅನ್ನು ಹಣಕ್ಕಾಗಿ ಸಿಪಿಐ ಮಾರಾಟ ಮಾಡಿದೆ ಎಂದು ಆರೋಪಿಸಿದರು. ಇದಾದ ಬಳಿಕ ಸಿಪಿಐ ಮುಕುಂದನ್ ಅವರನ್ನು ಉಚ್ಚಾಟಿಸಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಇದಾದ ಬಳಿಕ ಮುಕುಂದನ್ ಮೊದಲು ಕಾಂಗ್ರೆಸ್‌ನ ಬೆಂಬಲ ಪಡೆಯಲು ಯತ್ನಿಸಿದರು. ಆದರೆ ಕಾಂಗ್ರೆಸ್ ಸುನಿಲ್ ಲಾಲೂರ್ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿತು. ಹಾಗೆಯೇ ಬಿಜೆಪಿ ಸೇರುವ ಊಹಾಪೋಹಗಳನ್ನು ಮುಕುಂದನ್ ಈ ಹಿಂದೆ ತಳ್ಳಿ ಹಾಕಿದ್ದರು. ಆದರೆ ಎಲ್‌ಡಿಎಫ್, ಯುಡಿಎಫ್ ಎರಡೂ ಕಡೆಯು ಜಾಗವಿಲ್ಲ ಎಂದಾದ ಬಳಿಕ ಇದೀಗ ಎನ್‌ಡಿಎ ಸೇರಿದ್ದಾರೆ. ಆಮ್ ಆದ್ಮಿ ಪಕ್ಷವೂ ಮುಕುಂದನ್ ಅವರನ್ನು ಸಂಪರ್ಕಿಸಿದೆ. ಆದರೆ ಮುಕುಂದನ್ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ. ನಟ್ಟಿಕಾದಲ್ಲಿ ಸ್ಪರ್ಧಿಸುವ ಸಾಧ್ಯತೆಯೂ ಇದೆ.
ಇನ್ನು ಬಿಜೆಪಿ ಸೇರಿದ ಬಳಿಕ ಮಾತನಾಡಿದ ಮುಕುಂದನ್, ನಿಧಿ ಸಂಗ್ರಹಿಸದ ಕಾರಣ ಸಿಪಿಐ ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಾಗಿಯೂ ಹೇಳಿದ್ದಾರೆ.
ಇನ್ನು ಮುಕುಂದನ್ ಬಿಜೆಪಿ ಸೇರುವ ಕೆಲವು ಗಂಟೆಗಳ ಮೊದಲು, ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ತಿರುವನಂತಪುರದಲ್ಲಿ ಎನ್‌ಡಿಎ ಮುಂದಿನ ಎರಡು ದಿನಗಳಲ್ಲಿ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಲಿದೆ ಎಂದು ತಿಳಿಸಿದ್ದಾರೆ.





