ತನ್ನ ಗೆಳತಿಯನ್ನು ಭೇಟಿ ಮಾಡಲು ಬಂದಿದ್ದ ಯುವಕನನ್ನು ಯುವತಿ ಕುಟುಂಬಸ್ಥರು ಭೀಕರವಾಗಿ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ, ಯುವತಿ ಮತ್ತು ಆಕೆಯ ಆರೋಪಿ ಚಿಕ್ಕಪ್ಪ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಹಮೀರ್‌ಪುರ ಪ್ರದೇಶದ ಪರ್ಚ್ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಯುವಕನನ್ನು ರವಿ ಎಂದು ಗುರುತಿಸಲಾಗಿದೆ. ರವಿ ಮತ್ತು ಮನೀಷಾ ಇಬ್ಬರು ಪ್ರೀತಿಸುತ್ತಿದ್ದರು. ಆದರೆ, ಮನೀಷಾಳ ಕುಟುಂಬಸ್ಥರು ಆಕೆಗೆ ಬೇರೆ ಯುವಕನೊಂದಿಗೆ ವಿವಾಹ ನಿಶ್ಚಯಕ್ಕೆ ಮುಂದಾಗಿದ್ದರು. ಈ ಬಗ್ಗೆ ತಿಳಿದ ರವಿ, ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಪರ್ಚ್ ಗ್ರಾಮಕ್ಕೆ ಬಂದಿದ್ದರು ಎಂದು ವರದಿಯಾಗಿದೆ.
ಮನೀಷಾಳನ್ನು ರವಿ ಭೇಟಿ ಮಾಡಿದ್ದರಿಂದ ಕೋಪಗೊಂಡ ಆಕೆಯ ಕುಟುಂಬಸ್ಥರು, ರವಿಯನ್ನು ಹಿಡಿದು ಅಮಾನುಷವಾಗಿ ಥಳಿಸಿದ್ದಾರೆ. ಕುಟುಂಬಸ್ಥರೊಂದಿಗೆ ಗ್ರಾಮಸ್ಥರು ಸೇರಿಕೊಂಡು ಭೀಕರವಾಗಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರವಿ ಕುಡಿಯಲು ನೀರು ಕೇಳಿದರೂ, ಆರೋಪಿಗಳು ನೀರು ಕೊಟ್ಟಿಲ್ಲವೆಂದು ವರದಿಯಾಗಿದೆ.
ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತ ಸಾವನ್ನಪ್ಪಿದ ಬಳಿಕ, ಪರಿಸ್ಥಿತಿಯ ಗಂಭೀರತೆಯು ಆರೋಪಿಗಳಿಗೆ ಅರಿವಾಗಿದೆ. ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಯುವತಿಯ ಆರೋಪಿ ಚಿಕ್ಕಪ್ಪ ಪಿಂಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
ಮಾಹಿತಿ ಪಡೆದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪಿಂಟು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ರವಿ ದೇಹವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಸಾವನ್ನು ದೃಢಪಡಿಸಿದ್ದಾರೆ. ರವಿಯ ಸಾವು ದೃಢವಾಗುತ್ತಿದ್ದಂತೆಯೇ ಮನೀಷಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮನೀಷಾ ಮತ್ತು ಆಕೆಯ ಚಿಕ್ಕಪ್ಪ ಪಿಂಟು ಪರಿಸ್ಥಿತಿ ಗಂಭೀರವಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದಾಗಿ ಗ್ರಾಮದಲ್ಲಿ ಭೀತಿಯ ವಾತಾವರಣವ ಸೃಷ್ಟಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




