ಮಧ್ಯಪ್ರದೇಶದಲ್ಲಿ ರಸಗೊಬ್ಬರ ಕೊರತೆ, ರೈತರ ಸಾವು: ಕರ್ನಾಟಕದ ಮುಂಗಾರು ಪರಿಸ್ಥಿತಿ ಹೇಗಿತ್ತು?

Date:

ರೈತನಿಗೆ ಗೊಬ್ಬರ ಸಿಕ್ಕರೆ ಸಾಕು, ಅವನು ದೇಶಕ್ಕೆ ಅನ್ನವನ್ನೇ ಕೊಡುತ್ತಾನೆ. ಗೊಬ್ಬರ ಸಿಗದಿದ್ದರೆ ಅವನೇ ಮೊದಲು ಸಾಯುತ್ತಾನೆ. ನಂತರ ದೇಶದ ಅನ್ನದ ಕೊರತೆಯೂ ಎದುರಾಗುತ್ತದೆ.

ಮಧ್ಯಪ್ರದೇಶದಲ್ಲಿ ರಬಿ ಮಾಸದ ಬೆಳೆಗಳಿಗೆ ರಸಗೊಬ್ಬರ ಕೊರತೆ ಉಂಟಾಗಿದ್ದು, ಇದು ರೈತರಲ್ಲಿ ಕಳವಳವನ್ನು ಉಂಟುಮಾಡಿದೆ. ಯೂರಿಯಾ ಸೇರಿದಂತೆ ಮುಖ್ಯ ರಸಗೊಬ್ಬರಗಳ ಕೊರತೆಯಿಂದಾಗಿ ಟಿಕಮ್‌ಗಢ, ಖರಗ್‌ಪುರ, ನಿವಾರಿ, ಗುನಾ ಮತ್ತು ರೇವಾ ಜಿಲ್ಲೆಗಳಲ್ಲಿ ರೈತರು ಹೆದ್ದಾರಿಗಳನ್ನು ತಡೆಗಟ್ಟಿ ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.

ರಸಗೊಬ್ಬರದ ತೀವ್ರ ಕೊರತೆಯಿಂದಾಗಿ ರೈತರು ಸಹಕಾರಿ ಸಂಘಗಳು ಮತ್ತು ಟ್ರಕ್‌ಗಳಿಂದ ರಸಗೊಬ್ಬರ ಚೀಲಗಳನ್ನು ಲೂಟಿ ಮಾಡುವ ಹಲವಾರು ಘಟನೆಗಳು ನಡೆದಿವೆ. ಪ್ರತಿಭಟನೆಗಳು ಮತ್ತು ರಸ್ತೆ ತಡೆಗಳಂತಹ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ದೀರ್ಘ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ರೈತರು ಮೃತಪಟ್ಟಿರುವುದು ಸೇರಿದಂತೆ ಹಲವು ದುರಂತ ಘಟನೆಗಳು ವರದಿಯಾಗಿವೆ.

ರಸಗೊಬ್ಬರ ಖರೀದಿಸಲು ಸರತಿ ಸಾಲಿನಲ್ಲಿ ಕಾಯುತ್ತಿದ್ದ 52 ವರ್ಷದ ರೈತ ಸೋಮವಾರ ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯ ಹಳ್ಳಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ. ಬಡೋರಾ ಗ್ರಾಮದ ಗೋದಾಮಿನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಜಮುನಾ ಕುಶ್ವಾಹ ಎಂದು ಗುರುತಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎರಡು ಚೀಲ ಯೂರಿಯಾ ತರುವುದಕ್ಕಾಗಿ ಎರಡು ದಿನಗಳ ಕಾಲ ಬಜ್ರುವಾ ಗ್ರಾಮದಿಂದ ಗೋದಾಮಿನಿಂದ ಸುಮಾರು ಎಂಟು ಕಿಲೋಮೀಟರ್ ದೂರ ಸರತಿ ಸಾಲಿನಲ್ಲಿ ನಿಂತಿದ್ದ ರೈತ ಜಮುನಾ ಕುಶ್ವಾಹ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳೀಯ ತಹಶೀಲ್ದಾರ್ ಸತೇಂದ್ರ ಗುರ್ಜರ್, ರೈತನನ್ನು ತಮ್ಮ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಜಮುನಾ ಕುಶ್ವಾಹ ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ದೇಹತ್ ಪೊಲೀಸ್ ಠಾಣಾಧಿಕಾರಿ ಚಂದ್ರಜೀತ್ ಯಾದವ್, ಡಾ. ದೀಪಕ್ ಓಜಾ ನಡೆಸಿದ ಮರಣೋತ್ತರ ಪರೀಕ್ಷೆಯ ಆರಂಭಿಕ ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ. ಇದು ಒಂದೇ ಜಿಲ್ಲೆಯಲ್ಲಿ ಎರಡು ವಾರಗಳ ನಡುವೆ ಎರಡನೇ ಸಾವು. ಗುನಾ ಜಿಲ್ಲೆಯಲ್ಲಿ ಒಬ್ಬ ರೈತ ಆತ್ಮಹತ್ಯೆಗೆ ಮುಂದಾಗಿ, ತನ್ನ ಕೊನೆಯ ವೀಡಿಯೋದಲ್ಲಿ ‘ರಸಗೊಬ್ಬರ ಸಿಗದಿದ್ದರೆ ಬೆಳೆ ಹೇಗೆ ಬೆಳೆಯೋದು?’ ಎಂಬ ದುಗುಡ ವ್ಯಕ್ತಪಡಿಸಿದ್ದರು.

ಮಧ್ಯಪ್ರದೇಶದ ರಬಿ ಋತು ಅಕ್ಟೋಬರ್-ನವೆಂಬರ್‌ನಲ್ಲಿ ಬಿತ್ತನೆ ಮಾಡಿ ಮತ್ತು ಮಾರ್ಚ್-ಏಪ್ರಿಲ್‌ನಲ್ಲಿ ಕಟಾವು ಮಾಡಿ, ರಾಜ್ಯದ ಒಟ್ಟು ಆಹಾರ ಉತ್ಪಾದನೆಯಲ್ಲಿ ಶೇ.60–65 ಪ್ರತಿಶತವನ್ನು ನೀಡುತ್ತವೆ.

ಈ ವೇಳೆ ಗೋಧಿ, ಕಡಲೆ, ಮಸೂರ, ಸಾಸಿವೆ, ಆಲೂಗಡ್ಡೆ, ಬೆಳ್ಳುಳ್ಳಿ, ದನಿಯಾ, ಮೆಂತ್ಯ ಸೇರಿದಂತೆ ಕೆಲವು ಬೆಳೆಗಳನ್ನು ಈ ಸಮಯದಲ್ಲಿ ಬೇಳೆಯಲಾಗುತ್ತದೆ. ಹಾಗಾಗಿ ಈ ವೇಳೆ ಆ ಭಾಗದಲ್ಲಿ ರಸಗೊಬ್ಬರಕ್ಕೆ ಕೊರತೆ ಉಂಟಾಗಿರುವುದನ್ನು ಕಾಣಬಹುದು.

ಕ್ರಮ ಸಂಖ್ಯೆಬೆಳೆ (ಕನ್ನಡ)ಬೆಳೆ (ಇಂಗ್ಲಿಷ್)2025–26ರಲ್ಲಿ ಬಿತ್ತನೆ ಪ್ರದೇಶ (ಲಕ್ಷ ಹೆಕ್ಟೇರ್ ಸುಮಾರು)ಮುಖ್ಯ ಜಿಲ್ಲೆಗಳು
1ಗೋಧಿWheat70–75ಮೊರೇನಾ, ಭಿಂಡ್, ಗ್ವಾಲಿಯರ್, ಶಿವಪುರಿ, ಗುನಾ, ರಾಜ್‌ಗಢ್, ವಿದಿಶಾ, ರೇವಾ, ಸತ್ನಾ
2ಹೊಲಿಕೆ / ಚಣGram (Chickpea)42–46ಟಿಕಮ್‌ಗಢ, ಸಾಗರ್, ದಾಮೋಹ್, ಛತಾರ್‌ಪುರ, ನಿವಾರಿ, ಪನ್ನಾ, ರಾಯ್‌ಸೇನ್
3ಮಸೂರLentil (Masoor)12–14ರೇವಾ, ಸತ್ನಾ, ಸಿದ್ಧಿ, ಜಬಲ್ಪುರ್, ನರ್ಸಿಂಗ್‌ಪುರ್
4ಸಾಸಿವೆMustard9–11ಟಿಕಮ್‌ಗಢ, ಛತಾರ್‌ಪುರ, ಮೊರೇನಾ, ಭಿಂಡ್, ಶ್ಯೋಪುರ್, ದತಿಯಾ
5ಆಲೂಗಡ್ಡೆPotato5–6ಶ್ಯೋಪುರ್, ಮೊರೇನಾ, ಗ್ವಾಲಿಯರ್, ಇಂಡೋರ್, ಉಜ್ಜೈನ್
6ಲಸಣGarlic1.8–2.2ಗುನಾ, ಶಿವಪುರಿ, ರಾಜ್‌ಗಢ್, ಖರಗೋನ್, ಮಂದ್ಸೌರ್
7ಕೊತ್ತಂಬರಿಬೀಜCoriander1.5–2.0ಗುನಾ, ಅಶೋಕ್‌ನಗರ್, ಶಿವಪುರಿ, ರಾಜ್‌ಗಢ್
8ಅಲಸಂದೆ / ಬಟಾಣಿField Pea1.2–1.5ಸಾಗರ್, ವಿದಿಶಾ, ರಾಯ್‌ಸೇನ್
9ಜೀರಿಗೆCumin (Jeera)0.8–1.0ಮಂದ್ಸೌರ್, ರತ್ಲಾಂ, ನೀಮಚ್
10ಮೆಂತ್ಯFenugreek (Methi)0.6–0.8ಮಂದ್ಸೌರ್, ರತ್ಲಾಂ

ಈಗಾಗಲೇ ಬಿತ್ತನೆಯಾಗಿರುವ ರಬಿ ಋತುವಿನ ಬೆಳೆಗಳಿಗೆ ರಸಗೊಬ್ಬರವನ್ನು ಹಾಕಬೇಕಾಗುತ್ತದೆ. ಆದರೆ ಯೂರಿಯಾ ಗೊಬ್ಬರದ ಕೊರತೆ ಇರುವುದರಿಂದ ರೈತರು ಹಲವಾರು ದಿನಗಳಿಂದ, ಟಿಕಮ್‌ಗಢ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರತೆಯ ನಡುವೆಯೂ, ಕಳೆದ ವಾರ, ಜತಾರಾ ಪಟ್ಟಣದ ಕೆಲವು ರೈತರು ಸ್ಥಳೀಯ ರಸಗೊಬ್ಬರ ವಿತರಣಾ ಕೇಂದ್ರದ ಆವರಣದಲ್ಲಿ ನಿಲ್ಲಿಸಿದ್ದ ಟ್ರಕ್‌ನಿಂದ 30 ರಿಂದ 40 ಚೀಲ ಯೂರಿಯಾವನ್ನು ಲೂಟಿ ಮಾಡಿದರು. ಸೋಮವಾರ, ಬಲ್ದೇವ್‌ಗಢ ಮತ್ತು ಖರ್ಗಾಪುರ ಪ್ರದೇಶಗಳ ರೈತರು ರಸಗೊಬ್ಬರ ಲಭ್ಯವಿಲ್ಲದಿರುವುದನ್ನು ಪ್ರತಿಭಟಿಸಲು ಟಿಕಮ್‌ಗಢ-ಛತ್ತರ್‌ಪುರ ರಸ್ತೆಯನ್ನು ತಡೆದು ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ರಾಜ್ಯ(ಕರ್ನಾಟಕ)ದಲ್ಲಿ ಖಾರಿಫ್ ಅಂದರೆ ಜುಲೈ-ಅಕ್ಟೋಬರ್ ಸಮಯದಲ್ಲಿ ರಸಗೊಬ್ಬರದ ಕೊರತೆ ಉಂಟಾಗಿದ್ದು, ಚಿಕ್ಕಬಳ್ಳಾಪುರ, ದಾವಣಗೆರೆ, ಗದಗ, ಕೊಪ್ಪಳ, ಧಾರವಾಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಸಂಭವಿಸಿತ್ತು. ವಿಶೇಷವಾಗಿ ಯೂರಿಯಾ ಮತ್ತು DAPಗೆ ಅಪಾರ ಬೇಡಿಕೆ ಇತ್ತು.

ರಾಜ್ಯದ ಹಲವು ಭಾಗಗಳಲ್ಲಿ ಗೊಬ್ಬರಕ್ಕಾಗಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಹಲವೆಡೆ ನೂಕುನುಗ್ಗಲು ಮತ್ತು ಗಲಾಟೆಗಳು ವರದಿಯಾಗಿದ್ದವು. ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣದ ರೈತರು ಪ್ರತಿಭಟನೆ ನಡೆಸಿ, ಕೃಷಿ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅದೇ ರೀತಿ, ಕೊಪ್ಪಳ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರವನ್ನು ತುಂಬಿಕೊಂಡು ಗಂಗಾವತಿಗೆ ಸಾಗಿಸುತ್ತಿದ್ದ ಲಾರಿಗೆ ಅಡ್ಡಬಿದ್ದ ರೈತರು, ಗೊಬ್ಬರ ವಿತರಣೆಯಲ್ಲಿನ ತಾರತಮ್ಯದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ನಸುಕಿನ ಜಾವದ ಜಿಟಿಜಿಟಿ ಮಳೆಯನ್ನೂ ಲೆಕ್ಕಿಸದೆ, ಮಹಿಳೆಯರು ಸೇರಿದಂತೆ ನೂರಾರು ರೈತರು ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಉಂಟಾದ ತೀವ್ರ ನೂಕುನುಗ್ಗಲನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿ ಜನದಟ್ಟಣೆ ನಿಯಂತ್ರಿಸಿದ್ದರು.

ಈ ಬಿಕ್ಕಟ್ಟಿನ ನಡುವೆಯೇ, ಚಿಕ್ಕಮಗಳೂರು ಜಿಲ್ಲೆಯ ದೇವಗೋಡು ಸುಭಾಷ್ ನಗರದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 300 ಮೂಟೆ ಯೂರಿಯಾವನ್ನು, ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದರು. ಇದರಿಂದ ಗೊಬ್ಬರದ ಕೃತಕ ಅಭಾವ ಸೃಷ್ಟಿಸುವ ಜಾಲ ಸಕ್ರಿಯವಾಗಿರುವುದು ಬಯಲಾಗಿತ್ತು. ಈ ಸರಣಿ ಘಟನೆಗಳು ರಾಜ್ಯದಲ್ಲಿನ ರಸಗೊಬ್ಬರ ಬಿಕ್ಕಟ್ಟಿನ ತೀವ್ರತೆ ಮತ್ತು ರೈತ ಸಮುದಾಯ ಎದುರಿಸುತ್ತಿರುವ ಸಂಕಷ್ಟವನ್ನು ಸ್ಪಷ್ಟವಾಗಿ ಬಿಂಬಿಸುತ್ತಿವೆ.

ಬಳಿಕ ಸ್ಥಳೀಯ ಸರ್ಕಾರ ಮಧ್ಯಪ್ರವೇಶಿಸಿ, ‘ರಾಜ್ಯಕ್ಕೆ ಪೂರೈಕೆಯಾಗಬೇಕಾಗಿದ್ದ ಯೂರಿಯಾ ರಸಗೊಬ್ಬರದಲ್ಲಿ ಈ ಬಾರಿ 1.36 ಲಕ್ಷ ಮೆಟ್ರಿಕ್ ಟನ್ ಕೊರತೆಯಾಗಿದೆ. ಸಮಸ್ಯೆಗಳು ಹೆಚ್ಚಲು ಇದೇ ಪ್ರಮುಖ ಕಾರಣವಾಗಿದೆ’ ಎಂದು ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ಈ ಬಗ್ಗೆ ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿದ್ದರು. ಮುಖ್ಯವಾಗಿ ಯೂರಿಯಾ ಮತ್ತು ಡಿಎಪಿಯಂತಹ ರಸಗೊಬ್ಬರ ಪೂರೈಕೆ ಕೋರಿ ಕೃಷಿ ಸಚಿವರು ಜುಲೈ 7ರಂದು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.

“ಈ ಬಾರಿ ಮುಂಗಾರು ಬೇಗ ಪ್ರಾರಂಭವಾಗಿ ಉತ್ತಮ ಮಳೆಯಾಗಿದ್ದು, 2 ಲಕ್ಷ ಹೆಕ್ಟೇರ್ ಹೆಚ್ಚುವರಿ ಮುಸುಕಿನ ಜೋಳ ಬಿತ್ತನೆಯಾಗಿದೆ. ಇದರಿಂದ ಯೂರಿಯಾ ಬೇಡಿಕೆ ಹಠಾತ್ ಏರಿಕೆಗೆ ಕಾರಣವಾಗಿದೆ” ಎಂದು ತಿಳಿಸಿದ್ದರು.

”ರಸಗೊಬ್ಬರ ಪೂರೈಕೆ ಸಂಪೂರ್ಣ ಕೇಂದ್ರದ ಜವಾಬ್ದಾರಿ ರಾಜ್ಯದಿಂದ 12.5 ಲಕ್ಷ ಮೆ.ಟನ್ ಯೂರಿಯಾಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು ಕೇಂದ್ರದಿಂದ 11.7 ಲಕ್ಷ ಮೆ.ಟನ್ ಹಂಚಿಕೆ ಮಾಡಲಾಗಿತ್ತು. ಆಗಸ್ಟ್ ಅಂತ್ಯದವರೆಗೆ 9.05ಲಕ್ಷ ಮೆ.ಟನ್ ಪೂರೈಕೆ ಮಾಡಬೇಕಾಗಿತ್ತು, ಆದರೆ ಈವರೆಗೆ 6.30 ಲಕ್ಷ ಮೆ.ಟನ್ ಮಾತ್ರ ಪೂರೈಕೆಯಾಗಿದೆ. ಹಿಂದೆ ಇದ್ದ 3.46 ಲಕ್ಷ ಮೆ.ಟನ್ ಕಾಪುದಾಸ್ತಾನು ಬಳಸಿ ಪರಿಸ್ಥಿತಿ ನಿಭಾಯಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಕಾಪುದಾಸ್ತಾನು ಪರಿಗಣಿಸದೆ ರಸಗೊಬ್ಬರವನ್ನು ರಾಜ್ಯಕ್ಕೆ ಪೂರೈಕೆ ಮಾಡಲಾಗುತ್ತಿತ್ತು, ಆದರೆ ಈ ಬಾರಿ ಸರಬರಾಜಿನಲ್ಲಿ ಕೊರತೆ ಮಾಡಲಾಗಿದೆ. ಅಲ್ಲದೇ ಡಿ.ಎ.ಪಿ ಮತ್ತು ಯೂರಿಯಾ ಬಳಕೆ ಕಡಿಮೆ ಮಾಡಬೇಕೆಂದು ಪ್ರಧಾನಿ ಮೋದಿಯವರೇ ಮನವಿ ಮಾಡಿದ್ದಾರೆ” ಎಂದು ತಿಳಿಸಿದ್ದರು.

ಈ ಬಾರಿ ಉತ್ತಮ ಮಳೆಯಾದ ಕಾರಣ ಬಿತ್ತನೆ ಕಾರ್ಯಗಳು ತುಂಬಾ ಚುರುಕಾಗಿ ನಡೆದಿದ್ದವು. ಆದರೆ, ರೈತರಿಗೆ ಅಗತ್ಯವಿರುವಷ್ಟು ರಸಗೊಬ್ಬರ ಲಭ್ಯವಾಗಲಿಲ್ಲ. ರೈತ ಸಂಪರ್ಕ ಕೇಂದ್ರಗಳಿಗೆ ಅಗತ್ಯಕ್ಕೆ ತಕ್ಕಷ್ಟು ರಸಗೊಬ್ಬರ ಪೂರೈಕೆಯಾಗಲಿಲ್ಲ. ಹೀಗಾಗಿ, ಪ್ರತಿದಿನ ರಸಗೊಬ್ಬರ ಪಡೆಯಲು ರೈತರು ಬೆಳಗಿನ ಜಾವದಿಂದಲೇ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ರಸಗೊಬ್ಬರದ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆ ಎದುರಾಗಿತ್ತು. ಇಷ್ಟಾಗ್ಯೂ, ಬೆಳೆಗಳಿಗೆ ಪೌಷ್ಟಿಕಾಂಶ ನೀಡುವ ಡಿಎಪಿ, ಯೂರಿಯಾ ಸೇರಿದಂತೆ ಇನ್ನಿತರ ರಸಗೊಬ್ಬರ ಮೂಟೆ ಸಿಗುವ ಗ್ಯಾರಂಟಿ ಇರಲಿಲ್ಲ.

ಕೃಷಿಕರಿಗೆ ಬೇಕಿರುವಷ್ಟು ರಸಗೊಬ್ಬರದ ಮೂಟೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೂರೈಸಲಿಲ್ಲ. ಹೀಗಾಗಿ, ಇರುವ ದಾಸ್ತಾನಿನಲ್ಲಿ ಎಲ್ಲ ರೈತರಿಗೂ ರಸಗೊಬ್ಬರ ಸಿಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ 50 ಕೆಜಿಯ ಮೂಟೆಯನ್ನು ರೈತರಿಗೆ ತಲಾ ಒಂದು, ಎರಡು ಅಥವಾ ಮೂರು ಎಂಬಂತೆ ವಿತರಿಸಲಾಗಿತ್ತು. ತುಂಗಭದ್ರಾ ನದಿ ಪಾತ್ರಗಳಲ್ಲಿ ಹಿಂಗಾರು ಭತ್ತ ನಾಟಿ ಮಾಡುವ ವೇಳೆಯೂ ರಸಗೊಬ್ಬರ ಕೊರತೆ ಉಂಟಾಗಿದ್ದು, ವಿಜಯನಗರ, ಕೊಪ್ಪಳ ಭಾಗಗಳಲ್ಲಿ ಕಳೆದ ತಿಂಗಳು ರೈತರು ಪ್ರತಿಭಟನೆಗಳನ್ನು ನಡೆಸಿದ್ದರು.

ಚೀನಾ ಭಾರತಕ್ಕೆ ರಸಗೊಬ್ಬರ ರಫ್ತು ನಿಲ್ಲಿಸಿರುವುದರಿಂದ ದೇಶದಲ್ಲಿ ತೀವ್ರ ಗೊಬ್ಬರದ ಕೊರತೆ ಎದುರಾಗಿದೆ. ಯೂರಿಯಾ ಮತ್ತು ಡಿಎಪಿ ಒಳಗೊಂಡಂತೆ ಅಗತ್ಯ ರಸಗೊಬ್ಬರಗಳ ಕೊರತೆ ಅನುಭವಿಸುತ್ತಿರುವ ರೈತರಿಗೆ ನೆರವಾಗಲು ‘ರೈತರ ಆದಾಯ ದ್ವಿಗುಣಗೊಳಿಸುತ್ತೇವೆ’ ಎಂದಿದ್ದ ಕೇಂದ್ರದ ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಚೀನಾದಿಂದ ಯಾವುದೇ ಸಮಯದಲ್ಲಿ ಪೂರೈಕೆ ನಿಲ್ಲಬಹುದು ಎಂಬುದನ್ನು ತಿಳಿದಿದ್ದರೂ, ಮೋದಿ ಸರ್ಕಾರ ಸೂಕ್ತ ಸಿದ್ಧತೆ ಮಾಡಿಕೊಳ್ಳಲಿಲ್ಲ.

ಭಾರತ ಚೀನಾದಿಂದ ಶೇ. 80ರಷ್ಟು ರಸಗೊಬ್ಬರ ಆಮದು ಮಾಡಿಕೊಳ್ಳುತ್ತಿದ್ದು, ಈಗ ಚೀನಾ ಪೂರೈಕೆ ನಿಲ್ಲಿಸಿದೆ.
ವಿದೇಶಗಳ ಮೇಲಿನ ಈ ಅವಲಂಬನೆಯಿಂದಾಗಿ ಕೃಷಿ ಕ್ಷೇತ್ರ ಸೊರಗುತ್ತಿದೆ. ಬಿತ್ತನೆಬೀಜ, ಗೊಬ್ಬರ ಪಡೆಯಲು ರೈತರು ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮಲ್ಲೇ ಉತ್ಪಾದನೆಯನ್ನು ಉತ್ತೇಜಿಸುವ ಅವಕಾಶವಿದ್ದರೂ, ಯಾವುದೇ ನೀತಿ ಅಥವಾ ಯೋಜನೆಯನ್ನು ರೂಪಿಸದ ಕೇಂದ್ರ ಬಿಜೆಪಿ ಸರ್ಕಾರ ಈಗ ದೇಶದ ಅನ್ನದಾತರನ್ನು ನಡು ನೀರಿನಲ್ಲಿ ತಂದು ನಿಲ್ಲಿಸಿದೆ.

ರೈತನಿಗೆ ಗೊಬ್ಬರ ಸಿಕ್ಕರೆ ಸಾಕು, ಅವನು ದೇಶಕ್ಕೆ ಅನ್ನವನ್ನೇ ಕೊಡುತ್ತಾನೆ. ಗೊಬ್ಬರ ಸಿಗದಿದ್ದರೆ ಅವನೇ ಮೊದಲು ಸಾಯುತ್ತಾನೆ. ನಂತರ ದೇಶದ ಅನ್ನದ ಕೊರತೆಯೂ ಎದುರಾಗುತ್ತದೆ. ಹಾಗಾಗಿ ಪ್ರಸ್ತುತ ಕಾಲಘಟ್ಟದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಇಂತಹ ಕೊರತೆಯನ್ನು ನಿಯಂತ್ರಿಸಿ, ರೈತರಿಗೆ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ, ಗೊಬ್ಬರ ತಲುಪಿಸಬೇಕು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...