ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ, ಭಾರತೀಯ ಕ್ಯಾಪ್ಟನ್ ನೇತೃತ್ವದ ಲೈಬೀರಿಯಾ ಧ್ವಜವುಳ್ಳ ಕಚ್ಚಾ ತೈಲ ಟ್ಯಾಂಕರ್‌ವೊಂದು ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಮುಂಬೈ ಬಂದರು ತಲುಪಿದೆ.
ಸೌದಿ ಅರೇಬಿಯಾದ ‘ರಾಸ್ ತನುರಾ’ ಬಂದರಿನಿಂದ ಕಚ್ಚಾ ತೈಲವನ್ನು ಹೊತ್ತಿದ್ದ ‘ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್’ ಟ್ಯಾಂಕರ್‌ಗೆ, ಕಿರಿದಾದ ಜಲಮಾರ್ಗದ ಮೂಲಕ ಹಾದುಹೋಗಲು ಇರಾನ್ ಅನುಮತಿ ನೀಡಿದ ಬಳಿಕ ಬುಧವಾರ ಮುಂಬೈಗೆ ಆಗಮಿಸಿದೆ ಎಂದು ಮುಂಬೈ ಪೋರ್ಟ್ ಟ್ರಸ್ಟ್ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಅವರ ಇರಾನ್ ಸಹವರ್ತಿ ಅಬ್ಬಾಸ್ ಅರಘ್ಚಿ ನಡುವಿನ ಉನ್ನತ ಮಟ್ಟದ ಮಾತುಕತೆಯ ನಂತರ, ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ಇರಾನ್ ಅವಕಾಶ ನೀಡಿದೆ ಎಂದು ಮೂಲಗಳು ಮಾಧ್ಯಮವೊಂದಕ್ಕೆ ತಿಳಿಸಿವೆ. ಈ ಸೂಕ್ಷ್ಮ ಮಾರ್ಗದಲ್ಲಿ ಸಂಚರಿಸುವ ಮುನ್ನ, ಈ ಟ್ಯಾಂಕರ್ ಮಾರ್ಚ್ 1ರಂದು ರಾಸ್ ತನುರಾದಿಂದ ಹೊರಟಿತ್ತು ಎಂದು ಮಾಧ್ಯಮಗಳು ವರದಿ ಮಾಡಿದೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಕಡಲ ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಗಮನಾರ್ಹ ಪಾಲು ಇದರ ಮೂಲಕವೇ ಹಾದುಹೋಗುತ್ತದೆ. ಫೆಬ್ರವರಿ 28ರಂದು ಇರಾನ್ (ಟೆಹ್ರಾನ್) ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆ ಆರಂಭವಾದಾಗಿನಿಂದ, ಇರಾನ್ ಈ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದೆ ಹಾಗೂ ಹಲವಾರು ಹಡಗುಗಳ ಮೇಲೆ ದಾಳಿ ನಡೆಸಿದೆ. ಇದು ಜಾಗತಿಕ ತೈಲ ಪೂರೈಕೆಯಲ್ಲಿನ ವ್ಯತ್ಯಯದ ಆತಂಕವನ್ನು ಹೆಚ್ಚಿಸಿದೆ.
ಇದನ್ನು ಓದಿದ್ದೀರಾ? ಯುದ್ಧ ನಿಲ್ಲಲ್ಲ, ಹಾರ್ಮುಜ್ ತೆರೆಯಲ್ಲ: ಟ್ರಂಪ್‌ಗೆ ಇರಾನ್ ಸಡ್ಡು
ಈ ಮಾರ್ಗ ಬಹುತೇಕ ಮುಚ್ಚುವಿಕೆಯ ಹಂತ ತಲುಪಿರುವುದು, ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಕೆದಾರ ದೇಶವಾದ ಭಾರತವು ಪರ್ಯಾಯ ಮಾರ್ಗಗಳನ್ನು ಹುಡುಕುವಂತೆ ಮಾಡಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಮತ್ತಷ್ಟು ಹೆಚ್ಚಿಸುವುದು ಈ ಪರ್ಯಾಯಗಳಲ್ಲಿ ಸೇರಿದೆ.
ಈ ನಡುವೆ, ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಪ್ರಸ್ತುತ 28 ಭಾರತೀಯ – ಧ್ವಜವುಳ್ಳ ಹಡಗುಗಳು ಕಾರ್ಯಾಚರಿಸುತ್ತಿವೆ ಎಂದು ಕೇಂದ್ರ ಹಡಗು ಸಚಿವಾಲಯ ಬುಧವಾರ ತಿಳಿಸಿದೆ. ಇವುಗಳಲ್ಲಿ, 677 ಭಾರತೀಯ ನಾವಿಕರನ್ನು ಹೊತ್ತ 24 ಹಡಗುಗಳು ಹಾರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿದ್ದರೆ, 101 ಭಾರತೀಯ ನಾವಿಕರಿರುವ ನಾಲ್ಕು ಹಡಗುಗಳು ಜಲಸಂಧಿಯ ಪೂರ್ವದಲ್ಲಿವೆ.
ಭಾರತೀಯ ಹಡಗುಗಳು ಮತ್ತು ನಾವಿಕರ ಸುರಕ್ಷತೆ ಮತ್ತು ಭದ್ರತೆಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಬೆಳವಣಿಗೆಗಳನ್ನು ಪತ್ತೆಹಚ್ಚಲು ಮತ್ತು ಅಗತ್ಯ ಸಹಾಯವನ್ನು ಸಂಯೋಜಿಸಲು ಫೆಬ್ರವರಿ 28ರಿಂದ ಹಡಗು ಸಚಿವಾಲಯ ಹಾಗೂ ‘ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್’ನಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯು ಕಾರ್ಯಾಚರಿಸುತ್ತಿದೆ.
ಗುಜರಾತ್‌ನ ಕಾಂಡ್ಲಾ ಬಂದರಿಗೆ ತೆರಳುತ್ತಿದ್ದ ಥಾಯ್ ಹಡಗಿನ ಮೇಲೆ ಬುಧವಾರ ಜಲಸಂಧಿಯಲ್ಲಿ ದಾಳಿ ನಡೆದಿದ್ದು, ನವದೆಹಲಿಯು ಇದನ್ನು ತೀವ್ರವಾಗಿ ಖಂಡಿಸಿದೆ. ಫೆಬ್ರವರಿ ಅಂತ್ಯದಲ್ಲಿ ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ, ಈ ಕಡಲ ಮಾರ್ಗದಲ್ಲಿ ಇರಾನ್ ಕನಿಷ್ಠ 16 ಹಡಗುಗಳ ಮೇಲೆ ದಾಳಿ ಮಾಡಿದೆ.
ಇರಾನ್ ಸೇನೆಯು ದುಬೈ ಕರಾವಳಿಯ ಬಳಿ ಕಂಟೇನರ್ ಹಡಗಿಗೆ ಅಪ್ಪಳಿಸಿದೆ, ಬಹ್ರೇನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೆಂಕಿ ಉಂಟುಮಾಡಿದೆ ಹಾಗೂ ಡ್ರೋನ್ ಮೂಲಕ ಪ್ರಮುಖ ಸೌದಿ ತೈಲ ಕ್ಷೇತ್ರದ ಮೇಲೆ ಗುರಿಯಿಟ್ಟು ದಾಳಿ ನಡೆಸಿದೆ. ಅಲ್ಲದೆ, ಪರ್ಷಿಯನ್ ಕೊಲ್ಲಿಯಲ್ಲಿರುವ ಬಸ್ರಾ ಬಂದರಿನ ಮೇಲೆ ದಾಳಿ ಮಾಡುವ ಮೂಲಕ ಇರಾಕ್ ತನ್ನೆಲ್ಲಾ ತೈಲ ಟರ್ಮಿನಲ್‌ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಮಾಡಿದೆ.
ಈ ಸಂಘರ್ಷದ ಪರಿಣಾಮವಾಗಿ ಜಾಗತಿಕ ತೈಲ ಬೆಲೆಯು ಪ್ರಸ್ತುತ ಮಟ್ಟಕ್ಕಿಂತ ದುಪ್ಪಟ್ಟಾಗಿ, ಬ್ಯಾರೆಲ್‌ಗೆ 200 ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಟೆಹ್ರಾನ್ ಎಚ್ಚರಿಕೆ ನೀಡಿದೆ.





