ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದ, ಖ್ಯಾತ ರೂಪದರ್ಶಿ ಸ್ಯಾನ್ ರೆಚಲ್ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ರೆಚಲ್ ಜುಲೈ 5ರಂದು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ರೆಚಲ್, ಮಾಡೆಲಿಂಗ್ ವೃತ್ತಿಜೀವನದಲ್ಲಿ ತೊಡಗಿಕೊಂಡರು. ವರ್ಣಭೇದದ ವಿರುದ್ಧ ಧ್ವನಿ ಎತ್ತಿದ್ದವರು ರೆಚಲ್. ‘ಬಿಳಿ ಬಣ್ಣ’ದ ತ್ವಚೆಯೇ ಇರಬೇಕು ಎಂಬ ಮಾನದಂಡಗಳನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು.
ಇದನ್ನು ಓದಿದ್ದೀರಾ? ಅವಮಾನ ಅನುಭವಿಸಿದ್ದ ನಾಯಕ: ದಕ್ಷಿಣ ಆಫ್ರಿಕಾಕ್ಕೆ 27 ವರ್ಷದ ಬಳಿಕ ಐಸಿಸಿ ಟ್ರೋಫಿ ತಂದುಕೊಟ್ಟ
2019ರಲ್ಲಿ ಮಿಸ್ ಡಾರ್ಕ್ ಕ್ವೀನ್ ತಮಿಳುನಾಡು ಪ್ರಶಸ್ತಿಯನ್ನು ಗೆದ್ದಿರುವ ರೆಚಲ್, ನಂತರ 2021ರಲ್ಲಿ ಮಿಸ್ ಪುದುಚೇರಿಯನ್ನು ಗೆದ್ದರು. ಹಾಗೆಯೇ ಲಂಡನ್, ಜರ್ಮನಿ, ಫ್ರಾನ್ಸ್‌ನಲ್ಲಿ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. ಹಾಗೆಯೇ ಮಹಿಳೆಯರ ಸುರಕ್ಷತಾ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಇತ್ತೀಚೆಗೆ ವಿವಾಹವಾದ ರೆಚಲ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಈ ಸಂಬಂಧ ಉರುಲೈಯನ್‌ಪೆಟ್ಟೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.





