ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬ ಸದಸ್ಯರಿಗೆ ಸೇರಿದ ನಾಲ್ಕು ಸಂಸ್ಥೆಗಳಿಗೆ ತವಾಂಗ್ ಜಿಲ್ಲೆಯೊಂದರಲ್ಲೇ 146 ಸರ್ಕಾರಿ ಗುತ್ತಿಗೆಗಳು ಲಭಿಸಿವೆ ಎಂದು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.
2012ರಿಂದ 2023ರ ಅವಧಿಯಲ್ಲಿ ಸಿಎಂ ಪೆಮಾ ಖಂಡು ಅವರ ಪತ್ನಿ ತ್ಸೆರಿಂಗ್ ಡೊಲ್ಮಾ, ಸಹೋದರ ತಾಶಿ ಖಂಡು ಮತ್ತು ಅತ್ತಿಗೆ ನಿಮಾ ಡ್ರೆಮಾ ಅವರ ಒಡೆತನದ ಸಂಸ್ಥೆಗಳಿಗೆ ಒಟ್ಟು 383.74 ರೂ. ಕೋಟಿ ಮೌಲ್ಯದ ಕಾಮಗಾರಿಗಳನ್ನು ನೀಡಲಾಗಿದೆ. ಇದರಲ್ಲಿ 59 ಗುತ್ತಿಗೆಗಳನ್ನು (ಮೌಲ್ಯ 16.83 ಕೋಟಿ ರೂ.) ಟೆಂಡರ್ ಕರೆಯದೆಯೇ ನೇರ ಕಾರ್ಯಾದೇಶದ ಮೂಲಕ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸರ್ಕಾರ ಸಲ್ಲಿಸಿದ ಮಾಹಿತಿಯ ಪ್ರಕಾರ, ಸಿಎಂ ಪತ್ನಿ ಒಡೆತನದ ಮೆ/ಸರ್ಸ್ ಫ್ರಾಂಟಿಯರ್ ಅಸೋಸಿಯೇಟ್ಸ್ ಮತ್ತು ಬ್ರ್ಯಾಂಡ್ ಈಗಲ್ಸ್ ಸಂಸ್ಥೆಗಳಿಗೆ ₹209.6 ಕೋಟಿ ಮೌಲ್ಯದ 42 ಗುತ್ತಿಗೆಗಳು ಸಿಕ್ಕಿವೆ. ಸಹೋದರನ ಆರ್.ಡಿ ಕನ್ಸ್ಟ್ರಕ್ಷನ್‌ಗೆ ₹29.1 ಕೋಟಿ ಮೌಲ್ಯದ 13 ಗುತ್ತಿಗೆಗಳು ಹಾಗೂ ಅತ್ತಿಗೆಯ ಅಲಯನ್ಸ್ ಟ್ರೇಡಿಂಗ್ ಕಂಪನಿಗೆ ₹145.04 ಕೋಟಿ ಮೌಲ್ಯದ 91 ಗುತ್ತಿಗೆಗಳು ದೊರೆತಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ‘ದೇವರ’ ದಾಖಲೆ ಮುರಿದು ಮುನ್ನುಗ್ಗುತ್ತಿರುವ ಕೊಹ್ಲಿ
ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡುವ ಉದ್ದೇಶದಿಂದ 2020ರಲ್ಲಿ ಜಾರಿಗೆ ಬಂದ ನಿಯಮದ ಪ್ರಕಾರ, ₹50 ಲಕ್ಷದವರೆಗಿನ ಕಾಮಗಾರಿಗಳನ್ನು ಮಾತ್ರ ಟೆಂಡರ್ ಇಲ್ಲದೆ ನೀಡಬಹುದು. ಆದರೆ, ಈ ಮಿತಿ ಜಾರಿಗೆ ಬರುವ ಮುನ್ನವೇ ಸಿಎಂ ಕುಟುಂಬದ ಸಂಸ್ಥೆಗಳಿಗೆ ನೀಡಲಾದ 11 ಕಾಮಗಾರಿಗಳು ₹50 ಲಕ್ಷದ ಮಿತಿಯನ್ನು ಮೀರಿವೆ. ಉದಾಹರಣೆಗೆ, 2018ರಲ್ಲಿ ತವಾಂಗ್‌ನಲ್ಲಿ ಸರ್ಕಾರಿ ಕಾಲೇಜು ಸ್ಥಾಪನೆಗೆ ಅಲಯನ್ಸ್ ಟ್ರೇಡಿಂಗ್‌ಗೆ ₹2 ಕೋಟಿ ಮೌಲ್ಯದ ಗುತ್ತಿಗೆಯನ್ನು ನೇರವಾಗಿ ನೀಡಲಾಗಿತ್ತು.
ರಸ್ತೆ, ಸೇತುವೆ, ಚರಂಡಿ, ನೀರಾವರಿ ಕಾಲುವೆ, ವಿದ್ಯುತ್ ಮಾರ್ಗ, ಸಮುದಾಯ ಭವನ, ಯುದ್ಧ ಸ್ಮಾರಕ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಈ ಗುತ್ತಿಗೆಗಳನ್ನು ನೀಡಲಾಗಿದೆ.
‘ಸೇವ್ ಮೋನ್ ರೀಜನ್ ಫೆಡರೇಶನ್’ ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಇಷ್ಟೊಂದು ಗುತ್ತಿಗೆಗಳು ಸಿಎಂ ಕುಟುಂಬಕ್ಕೇ ಸಿಕ್ಕಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದೆ. ಅರ್ಜಿದಾರರ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರ ಮನವಿ ಮೇರೆಗೆ, 2015ರಿಂದ 2025ರವರೆಗಿನ ಎಲ್ಲ ಜಿಲ್ಲೆಗಳ ಸಂಪೂರ್ಣ ಮಾಹಿತಿಯನ್ನು ಎಂಟು ವಾರಗಳಲ್ಲಿ ಸಲ್ಲಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.
ಗ್ರಾಮಸ್ಥರು ಅಭಿವೃದ್ಧಿ ಕಾರ್ಯಗಳಿಗೆ ಉಚಿತವಾಗಿ ಭೂಮಿ ನೀಡುವುದರಿಂದ, ಅವರು ನಂಬಿಕೆ ಇಟ್ಟಿರುವ ಗುತ್ತಿಗೆದಾರರಿಗೆ ಕೆಲಸ ನೀಡುವುದು ಇಲ್ಲಿನ ವಾಡಿಕೆ ಎಂದು ರಾಜ್ಯ ಸರ್ಕಾರ ಸಮಜಾಯಿಷಿ ನೀಡಿದೆ. ಅಲ್ಲದೆ, ಶೇ 95ರಷ್ಟು ಕಾಮಗಾರಿಗಳನ್ನು ಮುಕ್ತ ಟೆಂಡರ್ ಮೂಲಕವೇ ನೀಡಲಾಗಿದೆ, ಇದರಲ್ಲಿ ಯಾವುದೇ ಪಕ್ಷಪಾತವಿಲ್ಲ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ. ಮುಂದಿನ ವಿಚಾರಣೆ 2026ರ ಫೆಬ್ರವರಿ 3ರಂದು ನಡೆಯಲಿದೆ.





