ಕೇರಳ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮತ್ತೆ ಮುಜುಗರ ತಂದಿದ್ದಾರೆ. ಕೇರಳದ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊಗಳಿ, ಕಾಂಗ್ರೆಸ್ ನಾಯಕತ್ವದ ವಿರುದ್ಧವೇ ಹರಿಹಾಯ್ದಿರುವ ಅಯ್ಯರ್, ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಯ್ಯರ್ “ನಾನು ಗಾಂಧಿವಾದಿ, ನೆಹರೂವಾದಿ ಹಾಗೂ ರಾಜೀವ್‌ವಾದಿ. ಆದರೆ ನಾನೊಬ್ಬ ‘ರಾಹುಲಿಯನ್’ (ರಾಹುಲ್ ಗಾಂಧಿ ಅನುಯಾಯಿ) ಅಲ್ಲ,” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರನ್ನು “ಗಿಳಿ” ಎಂದು ಜರಿದ ಅವರು, “ಒಂದು ವೇಳೆ ಖೇರಾ ನನ್ನನ್ನು ಉಚ್ಚಾಟಿಸಿದರೆ, ನಾನು ಸಂತೋಷದಿಂದ ಹೊರಹೋಗುತ್ತೇನೆ” ಎಂದು ಹೇಳಿದ್ದಾರೆ.
ಭಾನುವಾರ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರನ್ನು ಉದ್ದೇಶಿಸಿ, “ಕಾಂಗ್ರೆಸ್ ಕೈಬಿಟ್ಟಿರುವ ಜವಾಬ್ದಾರಿಯನ್ನು ನೀವೇ ಹೊತ್ತುಕೊಳ್ಳಿ” ಎಂದು ಹೇಳುವ ಮೂಲಕ ಅಯ್ಯರ್ ವಿವಾದದ ಕಿಡಿ ಹೊತ್ತಿಸಿದ್ದರು.
ಅಯ್ಯರ್ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕಾಂಗ್ರೆಸ್, ತಕ್ಷಣವೇ ಅಂತರ ಕಾಯ್ದುಕೊಂಡಿದೆ. “ಕಳೆದ ಕೆಲವು ವರ್ಷಗಳಿಂದ ಅಯ್ಯರ್ ಅವರಿಗೂ ಪಕ್ಷಕ್ಕೂ ಸಂಬಂಧವಿಲ್ಲ. ಅವರು ವೈಯಕ್ತಿಕ ನೆಲೆಯಲ್ಲಿ ಮಾತನಾಡುತ್ತಾರೆ,” ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಮಣಿಶಂಕರ್ ಅಯ್ಯರ್ ಅವರು ಕಾಂಗ್ರೆಸ್ ಪಾಲಿಗೆ ಮುಜುಗರ ತಂದಿರುವುದು ಇದೇ ಮೊದಲೇನಲ್ಲ. 2014ರ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ “ಈ ಚಾಯ್‌ವಾಲಾ ಬಂದು ಇಲ್ಲಿ ಚಹಾ ಮಾರಲಿ,” ಎಂದು ಅಯ್ಯರ್ ಲೇವಡಿ ಮಾಡಿದ್ದರು. ಈ ಹೇಳಿಕೆಯನ್ನು ಮೋದಿ ತಮ್ಮ ಚುನಾವಣಾ ಪ್ರಚಾರದ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು.
ಅದಾದ ಬಳಿಕ, 2017ರ ಗುಜರಾತ್ ಚುನಾವಣೆ ವೇಳೆ ಮೋದಿಯವರನ್ನು “ನೀಚ ಮನುಷ್ಯ” ಎಂದು ಕರೆದಿದ್ದರು. ಇದು ಗುಜರಾತ್ ಅಸ್ಮಿತೆಗೆ ಆದ ಅವಮಾನ ಎಂದು ಬಿಜೆಪಿ ಬಿಂಬಿಸಿತ್ತು. ಆಗ ಕಾಂಗ್ರೆಸ್ ಅಯ್ಯರ್ ಅವರನ್ನು ಅಮಾನತುಗೊಳಿಸಿತ್ತು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಶೈಕ್ಷಣಿಕ ಹಿನ್ನೆಲೆಯ ಬಗ್ಗೆಯೂ 2022ರಲ್ಲಿ ಅಯ್ಯರ್ ನೀಡಿದ್ದ ಹೇಳಿಕೆ ಪಕ್ಷದೊಳಗೆ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜೀವ್ ಗಾಂಧಿ ಕೇಂಬ್ರಿಡ್ಜ್‌ನಲ್ಲಿ ಅನುತ್ತೀರ್ಣರಾಗಿದ್ದರು ಎಂಬರ್ಥದ ಮಾತುಗಳನ್ನು ಆಡಿದಾಗ, ಕಾಂಗ್ರೆಸ್ ನಾಯಕರಾದ ನಾನಾ ಪಟೋಲೆ ಮತ್ತು ಅಶೋಕ್ ಗೆಹ್ಲೋಟ್ ಅವರು ಅಯ್ಯರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದರು.





