ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಮಂಗಳವಾರ ಪುಣೆಯ ಬಾರಾಮತಿಯಲ್ಲಿ ಅಪಘಾತಕ್ಕೀಡಾಗಿದ್ದು, ಅಜಿತ್ ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ವಿಮಾನ ನಿಲ್ದಾಣದ ಬಳಿ ತುರ್ತು ಭೂಸ್ಪರ್ಷಕ್ಕೆ ಪ್ರಯತ್ನಿಸುತ್ತಿದ್ದಾಗಲೇ, ವಿಮಾನ ಪತನಗೊಂಡಿದೆ.
ಇದೇ ರೀತಿಯ ದುರಂತಗಳಲ್ಲಿ ಮಡಿದ ಕೆಲವು ಪ್ರಮುಖ ಭಾರತೀಯ ನಾಯಕರ ಪಟ್ಟಿ ಇಲ್ಲಿದೆ:
ಸಂಜಯ್ ಗಾಂಧಿ (1980): ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ, ಕಾಂಗ್ರೆಸ್‌ನ ಪ್ರಭಾವಿ ನಾಯಕ ಸಂಜಯ್ ಗಾಂಧಿ ಅವರು 1980ರ ಜೂನ್ 23ರಂದು ದೆಹಲಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಆಗ ಅವರಿಗೆ 33 ವರ್ಷ ವಯಸ್ಸಾಗಿತ್ತು. ಅವರು ಪೈಲಟ್ ಮಾಡುತ್ತಿದ್ದ ಎರಡು ಆಸನಗಳ ವಿಮಾನವು ಸಫ್ದರ್‌ಜಂಗ್ ವಿಮಾನ ನಿಲ್ದಾಣದ ಬಳಿ ಪರೀಕ್ಷಾ ಹಾರಾಟದ ಸಮಯದಲ್ಲಿ ಅಪಘಾತಕ್ಕೀಡಾಗಿತ್ತು.
ಮಾಧವರಾವ್ ಸಿಂಧಿಯಾ (2001): ಗ್ವಾಲಿಯರ್ ರಾಜಮನೆತನದ ಸದಸ್ಯ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ತಂದೆ, ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟೆಂಬರ್ 30ರಂದು ನಿಧನರಾದರು. ಅವರು ಉತ್ತರ ಪ್ರದೇಶದಲ್ಲಿ ರಾಜಕೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನವು ಮೈನ್‌ಪುರಿ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದರು.
ಜಿಎಂಸಿ ಬಾಲಯೋಗಿ (2002): ತೆಲುಗು ದೇಶಂ ಪಕ್ಷದ ಹಿರಿಯ ನಾಯಕರಾಗಿದ್ದ ಜಿಎಂಸಿ ಬಾಲಯೋಗಿ ಅವರು 2002ರಲ್ಲಿ ಲೋಕಸಭೆಯ ಸ್ಪೀಕರ್ ಆಗಿದ್ದರು. ಅವರು, 2002 ಮಾರ್ಚ್ 3ರಂದು ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ವರದಿಗಳ ಪ್ರಕಾರ, ಹೆಲಿಕಾಪ್ಟರ್ ಹಾರಾಟ ನಡೆಸುತ್ತಿದ್ದ ಸಮಯದಲ್ಲಿ ತಾಂತ್ರಿಕ ವೈಫಲ್ಯಕ್ಕೆ ಒಳಗಾಗಿತ್ತು.
ಒ.ಪಿ. ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005): ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ 2005ರ ಮಾರ್ಚ್ 31ರಂದು ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೈಗಾರಿಕೋದ್ಯಮಿ ಮತ್ತು ಹರಿಯಾಣ ವಿದ್ಯುತ್ ಸಚಿವ ಒ.ಪಿ. ಜಿಂದಾಲ್ ಅವರು ಮೃತಪಟ್ಟರು. ಅವರ ಜೊತೆ, ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಅವರ ಪುತ್ರ ಸುರೇಂದರ್ ಸಿಂಗ್ ಕೂಡ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಅವರೂ ಸಾವನ್ನಪ್ಪಿದರು.
ವೈಎಸ್ಆರ್ ರಾಜಶೇಖರ ರೆಡ್ಡಿ (2009): ವೈಎಸ್ಆರ್ ರಾಜಶೇಖರ ರೆಡ್ಡಿ ಅವರು ವೈಎಸ್ಆರ್ ಎಂದೇ ಖ್ಯಾತಿ ಪಡೆದಿದ್ದವರು. ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, 2009ರ ಸೆಪ್ಟೆಂಬರ್ 2ರಂದು ನಲ್ಲಮಲ ಬೆಟ್ಟಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು. ಅವರ ಮೃತದೇಹವು ಘಟನೆಯ ಒಂದು ದಿನದ ಬಳಿಕ ಪತ್ತೆಯಾಗಿತ್ತು.
ದೋರ್ಜಿ ಖಂಡು (2011): ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರು 2011ರ ಏಪ್ರಿಲ್ 30ರಂದು ಪವನ್ ಹನ್ಸ್ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಅವರ ಹೆಲಿಕಾಪ್ಟರ್ ಭಾರತ-ಚೀನಾ ಗಡಿಯ ಬಳಿಯ ಪರ್ವತ ಪ್ರದೇಶದಲ್ಲಿ ಪತನಗೊಂಡಿತು. ವ್ಯಾಪಕ ಶೋಧ ಕಾರ್ಯಾಚರಣೆಯ ನಂತರ ಐದು ದಿನಗಳ ಬಳಿಕ ಅವರ ಮೃತದೇಹ ಮತ್ತು ಹೆಲಿಕಾಪ್ಟರ್‌ನ ಅವಶೇಷಗಳು ದೊರೆತಿದ್ದವು.
ವಿಜಯ್ ರೂಪಾನಿ (2025): ಅಹಮದಾಬಾದ್‌ನಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತಕ್ಕೀಡಾಯಿತು. ಆ ದುರ್ಘಟನೆಯಲ್ಲಿ ಸಾವನ್ನಪ್ಪಿದ 241 ಜನರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ವಿಮಾನ ವೈದ್ಯಕೀಯ ಕಾಲೇಜು ಹಾಸ್ಟೆಲ್ ಸಂಕೀರ್ಣದ ಮೇಲೆ ಬಿದ್ದು ಬೆಂಕಿಗೆ ಆಹುತಿಯಾಯಿತು.




