ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆ ಲಂಡನ್‌ನಿಂದ ಬೆಂಗಳೂರಿಗೆ ಹಾರಾಟ ನಡೆಸಲು ನಿಗದಿಯಾಗಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ದೋಷ ಕಾಣಿಸಿಕೊಂಡ ಬಗ್ಗೆ ಪೈಲಟ್ ವರದಿ ಮಾಡಿದ ಬಳಿಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ನಿಗದಿಯಂತೆ AI132 ಸಂಖ್ಯೆಯ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ತೆರಳಬೇಕಿತ್ತು. ಆದರೆ ವಿಮಾನ ಹಾರಾಟಕ್ಕೆ ಮುಂಚಿತವಾಗಿ ಪೈಲಟ್ ಕಾರ್ಯ ವಿಧಾನಗಳನ್ನು ಪರಿಶೀಲಿಸುವಾಗ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ ದೋಷ ಕಾಣಿಸಿಕೊಂಡಿರುವುದನ್ನು ಗುರುತಿಸಿದರು. ಈ ಬಗ್ಗೆ ವಿಮಾನಯಾನ ಸಂಸ್ಥೆಗೆ ವರದಿ ಮಾಡಿದರು. ಕೂಡಲೇ ಎಚ್ಚೆತ್ತ ಸಂಸ್ಥೆ ಆ ವಿಮಾನ ಸೇವೆಯನ್ನು ರದ್ದುಗೊಳಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ| ₹100 ತೆರಿಗೆಯಲ್ಲಿ ₹5 ಕೂಡ ವಾಪಸು ಸಿಗ್ತಿಲ್ಲ; ರಾಜ್ಯಕ್ಕೆ ಮೋದಿ ಮುಂದುವರೆಸಿದ ಅಗಾಧ ಅನ್ಯಾಯ!
ಈ ಕುರಿತು ವಿಮಾನಯಾನ ಸಂಸ್ಥೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. “ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಇರುವ ಬಗ್ಗೆ ವರದಿ ಮಾಡಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆರಂಭಿಕ ಮಾಹಿತಿ ಸ್ವೀಕರಿಸಿದ ಬಳಿಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದ್ದೇವೆ” ಎಂದು ಹೇಳಿದೆ.
ಅಲ್ಲದೇ ಈ ವಿಷಯವನ್ನು ಏರ್ ಇಂಡಿಯಾ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ದ ಗಮನಕ್ಕೆ ತಂದಿದೆ. ವಿಮಾನ ತಯಾರಕರೊಂದಿಗೆ ಸಮನ್ವಯದ ಜೊತೆಗೆ ಹೆಚ್ಚಿನ ತಾಂತ್ರಿಕ ಪರಿಶೀಲನೆ ನಡೆಯುತ್ತಿವೆ ಎಂದು ಏರ್ ಇಂಡಿಯಾ ದೃಢಪಡಿಸಿದೆ.
2025 ರಲ್ಲಿ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಡಿಜಿಸಿಎ ನಿರ್ದೇಶನದಂತೆ ಏರ್ ಇಂಡಿಯಾ ತನ್ನ ಎಲ್ಲ ಬೋಯಿಂಗ್ 787 ವಿಮಾನಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್‌ಗಳ ತಪಾಸಣೆ ನಡೆಸಿತ್ತು. ಆ ನಂತರ ಯಾವುದೇ ಸಮಸ್ಯೆಗಳು ಕಂಡುಬಂದಿರಲಿಲ್ಲ. ಏರ್ ಇಂಡಿಯಾದಲ್ಲಿ, ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.





