ಜಾಗತಿಕ ಅಸಮಾನತೆ ಕುರಿತಂತೆ ಜಿ20 ಮಂಡಳಿಗೆ ಸಲ್ಲಿಸಲಾದ ಹೊಸ ವರದಿಯ ಪ್ರಕಾರ, ಭಾರತದ ಅಗ್ರ ಶೇ.1ರಷ್ಟು ಶ್ರೀಮಂತರ ಸಂಪತ್ತು 2000ರಿಂದ 2023ರ ಅವಧಿಯಲ್ಲಿ ಶೇ.62ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಚೀನಾದ ಶ್ರೀಮಂತರ ಸಂಪತ್ತಿನಲ್ಲಿ ಶೇ.54ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ಅವರ ನೇತೃತ್ವದಲ್ಲಿ ನಡೆದ ಈ ಅಧ್ಯಯನವು, ಜಾಗತಿಕ ಅಸಮಾನತೆ ಆತಂಕಕಾರಿ ಮಟ್ಟ ತಲುಪಿದ್ದು, ಅದು ಪ್ರಜಾಪ್ರಭುತ್ವ, ಆರ್ಥಿಕ ಸ್ಥಿರತೆ ಮತ್ತು ಹವಾಮಾನ ಪ್ರಗತಿಗೆ ಗಂಭೀರ ಸವಾಲಾಗುತ್ತಿದೆ ಎಂದು ಎಚ್ಚರಿಸಿದೆ.
ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ವಿನ್ನಿ ಬ್ಯಾನಿಮಾ ಮತ್ತು ಇಮ್ರಾನ್ ವಲೋದಿಯಾ ಅವರನ್ನೊಳಗೊಂಡ ಜಾಗತಿಕ ಅಸಮಾನತೆ ಕುರಿತು ಸ್ವತಂತ್ರ ತಜ್ಞರ ಸಮಿತಿಯು, 2000ರಿಂದ 2024ರ ನಡುವೆ ಸೃಷ್ಟಿಯಾದ ಹೊಸ ಸಂಪತ್ತಿನ ಶೇ.41ರಷ್ಟು ಜಾಗತಿಕವಾಗಿ ಅಗ್ರ ಶೇ.1ರಷ್ಟು ಶ್ರೀಮಂತರ ಕೈಗೆ ಸೇರಿದ್ದು, ತಳಮಟ್ಟದ ಶೇ.50ರಷ್ಟು ಜನರಿಗೆ ಕೇವಲ ಶೇ.1ರಷ್ಟು ಮಾತ್ರ ತಲುಪಿದೆಯೆಂದು ವರದಿ ಬಹಿರಂಗಪಡಿಸಿದೆ.
ವರದಿ ಪ್ರಕಾರ, ಚೀನಾ ಮತ್ತು ಭಾರತದಂತಹ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರಗಳಲ್ಲಿ ತಲಾ ಆದಾಯದ ಏರಿಕೆಯ ಕಾರಣದಿಂದ ದೇಶಗಳ ನಡುವಿನ ಅಸಮಾನತೆ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ, ದೇಶಗಳ ಒಳಗಿನ ಅಸಮಾನತೆ ತೀವ್ರವಾಗುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿಗಳ ಛಲಕ್ಕೊಂದು ಸಲಾಂ; ಮಾತು ತಪ್ಪದಿರಲಿ ಸರ್ಕಾರ
2000 ರಿಂದ 2023ರ ಅವಧಿಯಲ್ಲಿ ವಿಶ್ವದ ಅರ್ಧಕ್ಕಿಂತ ಹೆಚ್ಚು ದೇಶಗಳ ಅಗ್ರ ಶೇ.1ರಷ್ಟು ಶ್ರೀಮಂತರು ತಮ್ಮ ಸಂಪತ್ತನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದು, ಅವರ ಪಾಲು ಜಾಗತಿಕ ಸಂಪತ್ತಿನ ಶೇ.74ಕ್ಕೆ ತಲುಪಿದೆ ಎಂದು ವರದಿ ಸೂಚಿಸಿದೆ.
“ತೀವ್ರ ಅಸಮಾನತೆ ಅನಿವಾರ್ಯವಲ್ಲ; ಅದು ರಾಜಕೀಯ ಆಯ್ಕೆಯ ಫಲ,” ಎಂದು ವರದಿ ಸ್ಪಷ್ಟಪಡಿಸಿದೆ. ಅಸಮಾನತೆಯನ್ನು ತಗ್ಗಿಸಲು ಜಾಗತಿಕ ಸಮನ್ವಯ ಮತ್ತು ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ ಎಂದು ವರದಿ ಒತ್ತಿಹೇಳಿದೆ.
ಹವಾಮಾನ ಬದಲಾವಣೆ ಕುರಿತು ಅಂತರಸರಕಾರಿ ಸಮಿತಿಯ ಮಾದರಿಯಲ್ಲಿ ‘ಅಸಮಾನತೆ ಕುರಿತು ಅಂತರರಾಷ್ಟ್ರೀಯ ಸಮಿತಿ’ಯ ರಚನೆಗೆ ವರದಿ ಶಿಫಾರಸು ಮಾಡಿದ್ದು, ದಕ್ಷಿಣ ಆಫ್ರಿಕಾದ ಜಿ20 ಅಧ್ಯಕ್ಷತೆಯ ಈ ಸಮಿತಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಇದು ಅಸಮಾನತೆ ಕುರಿತ ನಿಖರ ದತ್ತಾಂಶ ಮತ್ತು ನೀತಿ ಮಾರ್ಗದರ್ಶನವನ್ನು ಸರಕಾರಗಳಿಗೆ ಒದಗಿಸಲಿದೆ.
ವರದಿ ಪ್ರಕಾರ, ಹೆಚ್ಚು ಅಸಮಾನತೆ ಹೊಂದಿರುವ ದೇಶಗಳಲ್ಲಿ ಪ್ರಜಾಪ್ರಭುತ್ವದ ಕುಸಿತ ಸಂಭವಿಸುವ ಸಾಧ್ಯತೆ ಸಮಾನ ರಾಷ್ಟ್ರಗಳಿಗಿಂತ ಏಳು ಪಟ್ಟು ಅಧಿಕವಾಗಿದೆ.





