ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ನಿಂದ ಬ್ಯಾಟರಿ ಕದ್ದಿದ್ದಾನೆ ಎಂಬ ಶಂಕೆಯಲ್ಲಿ ಗ್ರಾಮಸ್ಥರು ವ್ಯಕ್ತಿಯೊಬ್ಬನನ್ನು ಥಳಿಸಿ ಬರ್ಬರವಾಗ ಕೊಂದಿರುವ ಘಟನೆ ಜಾರ್ಖಂಡ್‌ನ ಪಲಮುದಲ್ಲಿ ನಡೆದಿದೆ.
ಪಲಮುವಿನ ಪದ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ತೆಲಿಯಾಹಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬ್ಯಾಟರಿ ಕಳ್ಳತನದ ಶಂಕೆಯ ಮೇಲೆ ಗ್ರಾಮಸ್ಥರು ಯುವಕನೊಬ್ಬನನ್ನು ಹಿಡಿದು ಕ್ರೂರವಾಗಿ ಥಳಿಸಿ ಕೊಂದಿದ್ದಾರೆ. ಮೃತನನ್ನು ಮುರ್ಮಾ ಗ್ರಾಮದ ನಿವಾಸಿ ಪವನ್ ರಾಮ್ ಎಂದು ಗುರುತಿಸಲಾಗಿದೆ.
“ಟ್ರ್ಯಾಕ್ಟರ್‌ನಿಂದ ಪವನ್ ಬ್ಯಾಟರಿ ಕದಿಯಲು ಪ್ರಯತ್ನಿಸುತ್ತಿದ್ದನೆಂಬ ಸುದ್ದಿ ಗ್ರಾಮದಲ್ಲಿ ಹರಡಿದೆ. ಕೂಡಲೇ, ಸ್ಥಳಕ್ಕೆ ಜನಸಮೂಹ ಜಮಾಯಿಸಿದೆ. ನಂತರ ಆ ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿ, ಕೋಲುಗಳಿಂದ ಅಮಾನುಷವಾಗಿ ಥಳಿಸಲಾಗಿದೆ. ಆತ ಬಿಟ್ಟುಬಿಡುವಂತೆ ಕೋರಿಕೊಂಡರೂ, ಬಿಡದ ಗ್ರಾಮಸ್ಥರ ಗುಂಪು ಆತನನ್ನು ಥಳಿಸಿದೆ” ಎಂದು ವರದಿಯಾಗಿದೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪವನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
“ಪರಾಧದಲ್ಲಿ ಭಾಗಿಯಾಗಿರುವ ಜನರನ್ನು ಗುರುತಿಸಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ” ಎಂದು ಪದ್ವಾ ಪೊಲೀಸ್ ಠಾಣೆಯ ಉಸ್ತುವಾರಿ ಅಂಚಿತ್ ಕುಮಾರ್ ಹೇಳಿದ್ದಾರೆ.
“ಪಾಡ್ವಾ ಪೊಲೀಸ್ ಠಾಣೆಯಲ್ಲಿ ಹೆಸರಿಸಲಾದ ನಾಲ್ವರು ವ್ಯಕ್ತಿಗಳು ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.




