ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಇಂದು ಹೊಸ ಹೈಕೋರ್ಟ್ ಸಂಕೀರ್ಣಕ್ಕೆ ಶಂಕುಸ್ಥಾಪನೆ ಮಾಡಲಿದ್ದು, ಈ ಸಮಾರಂಭವನ್ನು ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಬಹಿಷ್ಕರಿಸಿದೆ. ಹಾಗೆಯೇ ಭಾನುವಾರ ನಾಲ್ಕು ಗಂಟೆಗಳ ಮುಷ್ಕರವನ್ನು, ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದೆ.
ಹೊಸ ನ್ಯಾಯಾಂಗ ಪಟ್ಟಣದ ಭಾಗವಾಗಿ ಉತ್ತರ ಗುವಾಹಟಿಯ ರಂಗಮಹಲ್‌ನಲ್ಲಿ ಗುವಾಹಟಿ ಹೈಕೋರ್ಟ್‌ನ ಹೊಸ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಅದರೆ ಗುವಾಹಟಿ ಹೈಕೋರ್ಟ್ ಬಾರ್ ಅಸೋಸಿಯೇಷನ್ (GHCBA) ಸದಸ್ಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗುರುವಾರ ಮತ್ತು ಶುಕ್ರವಾರ ಗುವಾಹಟಿ ಹೈಕೋರ್ಟ್‌ನ ಹಳೆಯ ಕಟ್ಟಡದ ಮುಂದೆ ನಾಲ್ಕು ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ನಾಗಾಗಳಲ್ಲಿ ನಾಯಿ ಮಾಂಸ ಸೇವನೆ ಒಪ್ಪಿತ ಆಹಾರ ಸಂಪ್ರದಾಯ: ಸರ್ಕಾರದ ನಿಷೇಧ ರದ್ದುಗೊಳಿಸಿದ ಗುವಾಹಟಿ ಹೈಕೋರ್ಟ್
“ನಗರದ ಹೃದಯ ಭಾಗವಾಗಿರುವ ಪ್ರಸ್ತುತ ಸ್ಥಳದಿಂದ ಹೈಕೋರ್ಟ್ ಅನ್ನು ಸ್ಥಳಾಂತರಿಸುವುದನ್ನು ನಾವು ಸಂಪೂರ್ಣವಾಗಿ ವಿರೋಧಿಸುತ್ತೇವೆ. ನಾವು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಮ್ಮ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದೇವೆ. ನಮ್ಮ ಯಾವುದೇ ಸದಸ್ಯರು ಸಮಾರಂಭಕ್ಕೆ ಹಾಜರಾಗುವುದಿಲ್ಲ” ಎಂದು GHCBA ಉಪಾಧ್ಯಕ್ಷ ಸಂತನು ಬೋರ್ತಕೂರ್ ತಿಳಿಸಿದ್ದಾರೆ.
ನ್ಯಾಯಾಲಯ ಸಂಕೀರ್ಣವನ್ನು ಸ್ಥಳಾಂತರಿಸುವ ಕ್ರಮವನ್ನು GHCBA ಆರಂಭದಿಂದಲೂ ವಿರೋಧಿಸುತ್ತಿದೆ. ಆದರೆ ಸರ್ಕಾರ ಏಕಪಕ್ಷೀಯವಾಗಿ ನಿರ್ಧರಿಸಿದೆ ಮತ್ತು ಈಗ ಹೊಸ ನ್ಯಾಯಾಂಗ ಮೂಲಸೌಕರ್ಯವನ್ನು ನಿರ್ಮಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
“ಇಂದು ಶಂಕುಸ್ಥಾಪನೆ ನಡೆಯಲಿದೆ ಎಂದು ತೋರುತ್ತಿದೆ. ಇದರ ನಂತರ, ನಾವು ಇದನ್ನು ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲು ಮುಂದಾಗಿದ್ದೇವೆ. ನಮ್ಮ ಕಾರ್ಯಕಾರಿ ಸಮಿತಿ ಮುಂದಿನ ಕೆಲವು ದಿನಗಳಲ್ಲಿ ಸಭೆ ಸೇರಿ ಮುಂದಿನ ಕ್ರಮವನ್ನು ನಿರ್ಧರಿಸುತ್ತದೆ” ಎಂದು ಬೋರ್ತಾಕೂರ್ ಹೇಳಿದರು.
ಗುವಾಹಟಿ ನಗರದ ಹೃದಯಭಾಗದಲ್ಲಿರುವ ಹೈಕೋರ್ಟ್ ಸಂಕೀರ್ಣವನ್ನು ಬ್ರಹ್ಮಪುತ್ರದ ಉತ್ತರ ದಂಡೆಗೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ. ಈ ಪ್ರಸ್ತಾಪ ಸರ್ಕಾರ ಮುಂದಿಟ್ಟಾಗಲೇ GHCBA ನಿರಂತರವಾಗಿ ವಿರೋಧಿಸುತ್ತಾ ಬಂದಿದೆ, ಪ್ರತಿಭಟಿಸುತ್ತಿದೆ. ಆದರೆ ಅಸ್ಸಾಂ ಅಡ್ವೊಕೇಟ್ ಜನರಲ್ ದೇವಜಿತ್ ಸೈಕಿಯಾ ಈ ಪ್ರತಿಭಟನೆಯ ಹಿಂದೆ ರಾಜಕೀಯ ಪಕ್ಷಗಳಿವೆ ಎಂದು ದೂರಿದ್ದಾರೆ.
ಸುಮಾರು 49 ಎಕರೆ ಭೂಮಿಯ ರಂಗಮಹಲ್‌ನಲ್ಲಿ ಹೊಸ ನ್ಯಾಯಾಂಗ ಪಟ್ಟಣವನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಉತ್ತರ ಗುವಾಹಟಿಯಲ್ಲಿ ನ್ಯಾಯಾಂಗ ಪಟ್ಟಣವನ್ನು ನಿರ್ಮಿಸಲು ರಾಜ್ಯ ಸಚಿವ ಸಂಪುಟವು ಮೊದಲ ಹಂತದಲ್ಲಿ 479 ಕೋಟಿ ರೂ.ಗಳನ್ನು ಅನುಮೋದಿಸಿತ್ತು. ಈ ಹಿಂದೆ ಎಲ್ಲಾ ಪಾಲುದಾರರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಯೋಜನೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು GHCBA ಒತ್ತಾಯಿಸಿತ್ತು.
ಗುವಾಹಟಿ ಹೈಕೋರ್ಟ್ ಪ್ರಸ್ತುತ ಬ್ರಹ್ಮಪುತ್ರ ನದಿಯ ದಕ್ಷಿಣ ದಂಡೆಯ ಮಧ್ಯ ಗುವಾಹಟಿಯ ಉಜಾನ್ ಬಜಾರ್ ಪ್ರದೇಶದಲ್ಲಿದೆ. ಇದು ಒಂದು ಐತಿಹಾಸಿಕ ಕಟ್ಟಡವನ್ನು ಹೊಂದಿದ್ದು ಕೆಲವು ವರ್ಷಗಳ ಹಿಂದಷ್ಟೇ ಅತ್ಯಾಧುನಿಕ ಬಹುಕೋಟಿ ಮೌಲ್ಯದ ಆಧುನಿಕ ಬಹುಮಹಡಿಯನ್ನೂ ನಿರ್ಮಿಸಲಾಗಿದೆ. ಎರಡೂ ಕಟ್ಟಡಗಳು ಮಹಾತ್ಮ ಗಾಂಧಿ ರಸ್ತೆಯ ಎರಡು ಬದಿಗಳಲ್ಲಿ ಮುಖಾಮುಖಿಯಾಗಿವೆ. ಭೂ ಸುರಂಗದ ಮೂಲಕ ಸಂಪರ್ಕ ಹೊಂದಿವೆ. ಎಸ್ಕಲೇಟರ್ ಸೌಲಭ್ಯಗಳನ್ನೂ ಹೊಂದಿವೆ. ಹಳೆಯ ಹೈಕೋರ್ಟ್ ಸಂಕೀರ್ಣದ ಪಕ್ಕದಲ್ಲಿ ಹೊಸ ಸಮಾವೇಶ ಕೇಂದ್ರವನ್ನು ಸಹ ನಿರ್ಮಿಸಲಾಗುತ್ತಿದೆ. ಈಗಾಗಲೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹೊಸ ಕಟ್ಟಡ ಕಟ್ಟಿರುವಾಗ ಈಗ ಮತ್ತೆ ಬೇರೆ ಪ್ರದೇಶದಲ್ಲಿ ಹೊಸದಾಗಿ ಕಟ್ಟಡಗಳನ್ನು ಕಟ್ಟುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.





