ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿರುವ ತಾಪಮಾನದಿಂದಾಗಿ, ಭಾರತವು (ವಿಶೇಷವಾಗಿ ಒಣಭೂಮಿ ಪ್ರದೇಶಗಳು) ತನ್ನ ಭೂಮಿ, ಬೆಳೆ ಉತ್ಪಾದಕತೆ ಹಾಗೂ ಪೌಷ್ಟಿಕಾಂಶದ ಗುಣಮಟ್ಟದಲ್ಲಿ ಗಮನಾರ್ಹ ಕುಸಿತ ಕಾಣಬಹುದು ಎಂದು ಭಾರತೀಯ ಕೃಷಿ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಜಾಗತಿಕ ಗಮನವನನ್ನು ಎದುರಾಗುತ್ತಿರುವ ಆಹಾರ ಭದ್ರತಾ ಬಿಕ್ಕಟ್ಟಿನಿಂದ ಬೇರೆಡೆ ಸೆಳೆಯುತ್ತಿವೆ ಎಂದೂ ಹೇಳಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದ ‘ಸುಸ್ಥಿರ ಅಭಿವೃದ್ಧಿಗಾಗಿ ಹವಾಮಾನ ಸ್ಥಿತಿಸ್ಥಾಪಕ ಕೃಷಿ: ನಾವೀನ್ಯತೆ ಮತ್ತು ಪರಿಹಾರಗಳು’ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಜ್ಞರು ಆಹಾರ ಬಿಕ್ಕಟ್ಟಿನ ಕುರಿತು ಮಾತನಾಡಿದ್ದಾರೆ. ದೆಹಲಿ ಮೂಲದ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI) ನಡೆಸಿದ ಅಧ್ಯಯನಗಳನ್ನು ಉಲ್ಲೇಖಿಸಿರುವ ಹಲವು ತಜ್ಞರು, “ಮುಂದಿನ 25 ವರ್ಷಗಳಲ್ಲಿ ಅಕ್ಕಿ ಉತ್ಪಾದಕತೆ 15% ಮತ್ತು ಗೋಧಿ ಇಳುವರಿ 20% ಕಸಿಯಬಹುದು. ಇದು, ಆಹಾರ ಬಿಕ್ಕಟ್ಟಿನ ಜೊತೆಗೆ, ರೈತರ ಆದಾಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ” ಎಂದಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಮಾಜಿ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್, “ಹವಾಮಾನ ಬದಲಾವಣೆಯು ಪ್ರಮುಖ ಬೆಳೆಗಳ ಇಳುವರಿಯನ್ನು ಸುಮಾರು 20%ರಷ್ಟು ಕಡಿಮೆ ಮಾಡಬಹುದು. ಫಲವತ್ತತೆ ಮತ್ತು ಭೂಮಿಯ ಅವನತಿಯಿಂದಾಗಿ ಸಾಂಪ್ರದಾಯಿಕ ಬೆಳೆ ಬೆಳೆಯುವ ಪ್ರದೇಶಗಳು 15-20% ರಷ್ಟು ಕುಗ್ಗುತ್ತವೆ. ಇದರರ್ಥ ಆಹಾರ ಬೆಳೆಗಳ ಉತ್ಪಾದಕತೆ ಮತ್ತು ಗುಣಮಟ್ಟ ಕುಸಿಯುತ್ತದೆ. ಜೊತೆಗೆ, ಆಹಾರದಲ್ಲಿ ಸತು ಮತ್ತು ಕಬ್ಬಿಣದಂತಹ ಸೂಕ್ಷ್ಮ ಪೋಷಕಾಂಶಗಳ ಮಟ್ಟವೂ ತೀವ್ರವಾಗಿ ಕಡಿಮೆಯಾಗುತ್ತದೆ. ಬೆಳೆಗಳ ಮೇಲೆ ಹೆಚ್ಚುತ್ತಿರುವ ಜೈವಿಕ ಒತ್ತಡವು ಕೀಟಗಳ ದಾಳಿಗೆ ಕಾರಣವಾಗುತ್ತದೆ. ಇದು ಅಂತಿಮವಾಗಿ ರೈತರ ಆದಾಯವನ್ನು ಕಡಿಮೆ ಮಾಡುತ್ತದೆ” ಎಂದು ವಿವರಿಸಿದ್ದಾರೆ.
“ಹವಾಮಾನ ಬದಲಾವಣೆಯು ಈಗಾಗಲೇ ಜಾಗತಿಕ ವಾಸ್ತವವಾಗಿದೆ. ಇದು ಈಗ ದೇಶದ ಒಣಭೂಮಿ ಪ್ರದೇಶಗಳಲ್ಲಿ ಆಹಾರ ಭದ್ರತೆಗೆ ಗಂಭೀರ ಬೆದರಿಕೆಯನ್ನು ಒಡ್ಡುತ್ತಿದೆ” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: Budget 2026 : ಮಹಿಳೆ-ದಲಿತ-ಬುಡಕಟ್ಟು ಸಮುದಾಯಗಳಿಗೆ ಸಿಕ್ಕಿದ್ದೆಷ್ಟು?
“ಕಳೆದ ವರ್ಷ, ಶುಷ್ಕ ಬುಂದೇಲ್‌ಖಂಡ್ ಪ್ರದೇಶದಲ್ಲಿ 49 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅಲ್ಲದೆ, ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಕೇವಲ 30-40 ಮಿಮೀ ಮಳೆಯಾಗುವ ಪ್ರದೇಶದಲ್ಲಿ ಕೇವಲ ಒಂದು ಗಂಟೆಯಲ್ಲಿಯೇ 307 ಮಿಮೀ ಮಳೆ ದಾಖಲಾಗಿದೆ. ಇದು ಹವಾಮಾನ ಬದಲಾವಣೆ ಪರಿಣಾಮ. ಈ ಭಾರೀ ಮಳೆಯಿಂದ ಹಳ್ಳಿಗಳು ಮತ್ತು ಕೃಷಿ ಹೊಲಗಳಲ್ಲಿ ಪ್ರವಾಹ ಉಂಟಾಗಿ, ಬೆಳೆಗಳು ಕೊಚ್ಚಿ ಹೋಗುತ್ತಿವೆ. ಅದೇ ಸಮಯದಲ್ಲಿ, ದೀರ್ಘ ಬರಗಾಲಗಳು ಬೆಳೆಗಳನ್ನು ಒಣಗಿಸಿವೆ” ಎಂದು ವಿವರಿಸಿದ್ದಾರೆ.
“ಅಂತರರಾಷ್ಟ್ರೀಯ ರಾಜಕೀಯ ನಾಯಕರು ಬಂದೂಕು ಯುದ್ಧಗಳು, ಪ್ರಾದೇಶಿಕ ವಿವಾದಗಳು ಹಾಗೂ ಇಂಧನ ಸಂಘರ್ಷಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಇದರಿಂದ, ಇತ್ತೀಚಿನ ವರ್ಷಗಳಲ್ಲಿ ಹಸಿವಿನ ವಿರುದ್ಧದ ಜಾಗತಿಕ ಹೋರಾಟವು ಮೂಲೆಗೆ ಸರಿದಿದೆ. ಈ ಬೆಳವಣಿಗೆಗಳು ಹಸಿವಿನ ವಿರುದ್ಧದ ಹೋರಾಟವನ್ನು ಹಿಂದಕ್ಕೆ ತಳ್ಳಿವೆ” ಎಂದು ಹೇಳಿದ್ದಾರೆ.
ಹೈದರಾಬಾದ್‌ನ ಐಸಿಎಆರ್-ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರೈಸ್ ರಿಸರ್ಚ್ (ಐಸಿಎಆರ್-ಐಐಆರ್ಆರ್) ನಿರ್ದೇಶಕಿ ಡಾ. ರಾಮನ್ ಮೀನಾಕ್ಷಿ ಸುಂದರಂ, “ಹವಾಮಾನ ಬದಲಾವಣೆಯು ಬೆಳೆಗಳ ಮೇಲೆ ರೋಗದ ಒತ್ತಡವನ್ನು ಹೆಚ್ಚಿಸಿದೆ. ಕೆಲವು ದಶಕಗಳ ಹಿಂದೆ, ಭತ್ತದ ಬೆಳೆಗಳು ಮೂರು ಪ್ರಮುಖ ರೋಗಗಳನ್ನು ಎದುರಿಸುತ್ತಿದ್ದವು. ಇಂದು, ಹವಾಮಾನ ಬದಲಾವಣೆಯು ಈಗ ಸುಮಾರು 22 ಪ್ರಮುಖ ರೋಗಗಳಿಗೆ ಕಾರಣವಾಗಿದೆ” ಎಂದು ತಿಳಿಸಿದ್ದಾರೆ.





